ಬೆಂಗಳೂರು: ಬ್ರಿಟಿಷರು ನಮ್ಮನ್ನು ಒಡೆದು ಆಳಿದರು. 1857ರಲ್ಲೇ ನಮಗೆ ಸ್ವಾತಂತ್ರ್ಯ ಸಿಗಬೇಕಿತ್ತು. ಮಂಗಲ್ ಪಾಂಡೆ ರೀತಿ ಹೋರಾಟ ಮಾಡಿದ್ದರೆ ನೂರು ವರ್ಷ ಮೊದಲೇ ಸ್ವಾತಂತ್ರ್ಯ ಸಿಗುತ್ತಿತ್ತು ಎಂದು ಸಚಿವ ಸಿ ಟಿ ರವಿ ಅಭಿಪ್ರಾಯಪಟ್ಟರು.
ವಿಧಾನಸಭೆಯಲ್ಲಿ ಇಂದು ಸಂವಿಧಾನದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಾಗಾಗಿದ್ದರೆ ನೂರು ವರ್ಷದ ನಂತರ ಸ್ವಾತಂತ್ರ್ಯ ತಂದುಕೊಟ್ಟೆವು ಎಂದು ಹೇಳೋಕೆ ಕೆಲವರಿಗೆ ಅವಕಾಶ ಇರುತ್ತಿರಲಿಲ್ಲವೆಂದರು. ಕಾಂಗ್ರೆಸ್ ಸ್ಥಾಪನೆ ಮಾಡಿದ್ದು ಎ ಒ ಹ್ಯೂಂ ಅನ್ನೋ ಬ್ರಿಟಿಷ್ ಅಧಿಕಾರಿ. ವರ್ಷಕ್ಕೆ ಎರಡು ಮೂರು ಸಭೆ ಸೇರಿ ಬ್ರಿಟಿಷ್ ಪ್ರಭುತ್ವಕ್ಕೆ ಕಾಂಗ್ರೆಸ್ ಮೂಲಕ ಅರ್ಜಿ ಕೊಡುತ್ತಿದ್ದರು. ಬ್ರಿಟಿಷರು ಅರ್ಜಿ ಸ್ವೀಕರಿಸಿದರೆ ಆಗಿನ ಕಾಂಗ್ರೆಸ್ನಲ್ಲಿದ್ದವರಿಗೆ ಅದೇ ದೊಡ್ಡ ಪ್ರಸಾದ. ಭಾರತವನ್ನು ಇನ್ನಷ್ಟು ವರ್ಷ ಆಳ್ವಿಕೆ ಮಾಡಲು ಬ್ರಿಟಿಷರು ಕಾಂಗ್ರೆಸ್ ಸ್ಥಾಪಿಸಿದರು ಎಂದು ಹೇಳಿದರು.
ಬೆಂಕಿ ಹಚ್ಚುವ ಕೆಲಸ ಈಗ ಶುರು ಆಗಿದ್ದಲ್ಲ. ಹಿಂದಿನಿಂದಲೂ ಈ ಕೆಲಸ ಆಗಿದೆ. ಹಿಂದು-ಮುಸ್ಲಿಂರನ್ನು ಒಗ್ಗೂಡಿಸುವ ಒಳ್ಳೆಯ ಬಾಂಧವ್ಯ ಸೃಷ್ಟಿಸುವ ಪ್ರಯತ್ನ ಗಾಂಧೀಜಿ ಮಾಡಿದರು. ರಘುಪತಿ ರಾಘವ ರಾಜಾರಾಮ್ ಭಜನೆಯಲ್ಲಿ ಎಲ್ಲಾ ಭಾವನೆ ಸೇರಿಸಿದ್ದರು ಎಂದರು. ಈ ದೇಶವನ್ನು ತುಂಡಾಗಲು ಬಿಡುವುದಿಲ್ಲ ಎಂದು ಮಹಾತ್ಮಗಾಂಧಿ, ನೆಹರು ಹೇಳಿದ್ದರು. ಆದರೆ, ತುಂಡಾದ ದೇಶದ ಮೊದಲ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರೇ ಆದರು. ತುಂಡಾದ ದೇಶದ ಮೊದಲ ಪ್ರಧಾನಿಯಾಗಿದ್ದೂ ಜವಾಹರಲಾಲ ನೆಹರು. ಜೊತೆಗೆ ಪ್ರಧಾನಿಯಾರಾಗಬೇಕು ಎಂದು ಕಾಂಗ್ರೆಸ್ ವರ್ಕಿಂಗ್ ಕಮಿಟಿಯಲ್ಲಿ ಚರ್ಚೆಯಾದಾಗ 12 ರಾಜ್ಯಗಳ ಪ್ರತಿನಿಧಿಗಳು ಸರ್ದಾರ್ ವಲ್ಲಭಬಾಯ್ ಪಟೇಲ್ ಹೆಸರು ಸೂಚಿಸಿದ್ದರು.
ಆದರೆ, ಯಾರೂ ಆ ಹೆಸರನ್ನೇ ಸೂಚಿಸದೇ ಇದ್ದ ವ್ಯಕ್ತಿಯೊಬ್ಬರು ಪ್ರಧಾನಿಯಾದರು. ಪ್ರಧಾನಿ ಪಟ್ಟ ಬಿಟ್ಟುಕೊಡುವಂತೆ ಸ್ವತಃ ಮಹಾತ್ಮಾ ಗಾಂಧೀಜಿಯವರೇ ವಲ್ಲಭಬಾಯ್ ಪಟೇಲ್ಗೆ ಸೂಚಿಸಿದ್ದರು. ಗಾಂಧೀಜಿಯವರ ಮೇಲಿನ ಅಪಾರ ಭಕ್ತಿಯಿಂದ ಪಟೇಲರು ಒಪ್ಪಿದರು. ಪಟೇಲರು ಪ್ರಧಾನಿಯಾದರೆ ಸುಭಾಶ್ಚಂದ್ರ ಬೋಸ್ ಸಾವಿನ ರಹಸ್ಯ ಬಯಲಾಗುತ್ತಿತ್ತು ಎಂಬ ಆತಂಕವಿತ್ತು ಎಂದು ವಿವರಿಸಿದರು. ಗಾಂಧೀಜಿ ಹತ್ಯೆಯಲ್ಲಿ ಆರ್ಎಸ್ಎಸ್ ಕೈವಾಡ ಇರಲಿಲ್ಲ. ಆದರೂ ಆರ್ಎಸ್ಎಸ್ ಕೈವಾಡ ಅಂತ ಹೇಳಿಕೊಂಡು ಓಡಾಡಿದರು. ಆರ್ಎಸ್ಎಸ್ ಬ್ಯಾನ್ ಮಾಡಿದರು.
ಗಾಂಧಿ ಹತ್ಯೆ ಮುಂದಿಟ್ಟುಕೊಂಡು ಆರ್ಎಸ್ಎಸ್ ಬ್ಯಾನ್ ಮಾಡ್ತಾರೆ. ಆಗ ಗೃಹ ಸಚಿವರು ಅಮಿತ್ ಶಾ, ರಾಜನಾಥ್ ಸಿಂಗ್ ಇರಲಿಲ್ಲ. ನಾವು ಗಾಂಧೀಜಿಯವರ ಮೌಲ್ಯಕ್ಕೆ ವಿರೋಧವಿಲ್ಲ. ಅವರ ಸರಳತೆ ಬಗ್ಗೆ ನಮಗೆ ಹೆಮ್ಮೆಯಿದೆ. ಆದರೆ ಸತ್ಯವನ್ನು ಕೊಲೆ ಮಾಡಿದವರು ಗಾಂಧಿ ವಂಶಸ್ಥರು. ಸಾರ್ವಕರ್ ಅವರನ್ನು ಜೈಲಿಗೆ ಹಾಕಿದ್ದು ಇದೇ ಗಾಂಧಿ ಕುಟುಂಬ. ಸಾರ್ವಕರ್ ಬಿಡುಗಡೆ ಮಾಡಿದ್ದು, ಇದೇ ಗಾಂಧಿ ಕುಟುಂಬ. ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಜೊತೆ ಹೇಗೆಲ್ಲ ನಡೆದುಕೊಂಡರೆಂದು ಎಲ್ಲರಿಗೂ ಗೊತ್ತಿದೆ. ಅಂಬೇಡ್ಕರ್ ತೀರಿದಾಗ ಅವರ ಸಂಸ್ಕಾರಕ್ಕೆ ರಾಜಘಾಟ್ನಲ್ಲಿ ಜಾಗ ಕೊಡಲಿಲ್ಲ. ರಾಜಘಾಟ್ ಕೆಲವರಿಗೆ ಮಾತ್ರ ಮೀಸಲಾಗಿತ್ತು. ಅಂಬೇಡ್ಕರ್ಗೆ ಭಾರತ ರತ್ನ ಕೊಡಲಿಲ್ಲ. ಅವರಿಗೆ ಭಾರತ ರತ್ನ ಕೊಡಲು ವಿ ಪಿ ಸಿಂಗ್ ಸರ್ಕಾರವೇ ಬರಬೇಕಾಯಿತು.
ವಾಜಪೇಯಿ ಅದನ್ನು ಪ್ರಸ್ತಾಪ ಮಾಡಬೇಕಾಯಿತು. ಅಂಬೇಡ್ಕರ್ ಹುಟ್ಟಿದ ಜಾಗದಿಂದ ಹಿಡಿದು ಅವರು ಓದಿದ, ಅವರ ಅಂತ್ಯಸಂಸ್ಕಾರ ಮಾಡಿದ ಜಾಗವನ್ನು ಮೇಲ್ದರ್ಜೆಗೆ ಕೊಂಡೊಯ್ಯುವವರು ಮತ್ತು ಅಂಬೇಡ್ಕರ್ ವ್ಯಕ್ತಿತ್ವ ಸಾರಲು ನರೇಂದ್ರ ಮೋದಿಯವರೇ ಬರಬೇಕಾಯಿತು. ಅಂಬೇಡ್ಕರ್ ವ್ಯಕ್ತಿತ್ವಕ್ಕೆ ಗೌರವ ಕೊಟ್ಟಿದ್ದು ಮೋದಿಯವರು ಎಂದರು.
ಜಾತ್ಯಾತೀತ ಎಂಬ ಶಬ್ದವನ್ನು ಸಂವಿಧಾನಕ್ಕೆ ಸೇರ್ಪಡೆ ಮಾಡಿದ ಪಕ್ಷ ಅಧಿಕಾರದಲ್ಲಿ ಇದ್ದಾಗಲೇ ಕಂಬಾಲಪಲ್ಲಿ ದುರಂತ ನಡೆದಿದ್ದು, ಬದನಬಾಳು ಘಟನೆ ನಡೆದಿದ್ದು. ಕೆಲವು ಪಕ್ಷಗಳು ಹೆಸರಿಗೆ ಮಾತ್ರ ಜಾತ್ಯಾತೀತ. ಆದರೆ, ಜಾತೀಯತೆಯನ್ನು ಬಿಟ್ಟು ಬದುಕುವುದೇ ಸಾಧ್ಯವಿಲ್ಲ. ಅವರ ಅಸ್ತಿತ್ವವೇ ಉಳಿಯುವುದಿಲ್ಲ. ಹೆಸರಿಗೆ ಮಾತ್ರ ಪ್ರಜಾಪ್ರಭುತ್ವ. ಆದರೆ, ಆಂತರಿಕವಾಗಿ ಪ್ರಜಾಪ್ರಭುತ್ವವೇ ಇರುವುದಿಲ್ಲ. ಅಪ್ಪ-ಮಕ್ಕಳು, ಮರಿಮಕ್ಕಳು ಮಾತ್ರ ಅಧಿಕಾರಕ್ಕೆ ಬರಬೇಕು ಎಂಬುದು ಎಂತಹ ಪ್ರಜಾಪ್ರಭುತ್ವ ಎಂದು ಸಿ.ಟಿ. ರವಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರನ್ನ ಪರೋಕ್ಷವಾಗಿ ಟೀಕಿಸಿದರು.
ಇದಕ್ಕೆ ಕಾಂಗ್ರೆಸ್ನ ಕೆ ಜೆ ಜಾರ್ಜ್, ಭೀಮಾನಾಯಕ್, ಡಾ ಯತೀಂದ್ರ, ಜೆಡಿಎಸ್ ಸದಸ್ಯರಾದ ಅನಿತಾ ಕುಮಾರಸ್ವಾಮಿ, ವೆಂಕಟರಾವ್ ನಾಡಗೌಡ ಆಕ್ಷೇಪ ವ್ಯಕ್ತಪಡಿಸಿದರು. ನಾನು ಯಾರ ಬಗ್ಗೆಯೂ ಪ್ರಸ್ತಾಪ ಮಾಡಿಲ್ಲ. ಜ್ಯಾತೀತಯ ಬಗ್ಗೆ ನಮ್ಮ ಆರ್ಎಸ್ಎಸ್ ಶಾಖೆ ಹೇಳಿಕೊಟ್ಟಿದೆ ಎಂದು ಸಮಜಾಯಿಷಿ ನೀಡಿದರು. ಕೆಲವರಿಗೆ ಜಾತಿ ಹೆಸರು ಬಿಟ್ರೆ ಈಗ ಪಕ್ಷವೇ ಇರಲ್ಲ. ವಂಶಪಾರಂಪರ್ಯ ಆಡಳಿತ ಸಂವಿಧಾನದಲ್ಲಿ ಇಲ್ಲ. ಅಪ್ಪ, ಮಗ, ಮೊಮ್ಮಗ ಎಲ್ಲ ಅಧಿಕಾರವೂ ಒಬ್ಬರಲ್ಲೇ. ಇದನ್ನು ಸಂವಿಧಾನ ಹೇಳಿದೆಯೇ?. ಜಾತಿ ಸಮುದಾಯದ ಹೆಸರಲ್ಲಿ ಯೋಜನೆ ರೂಪಿಸೋದು ಸಂವಿಧಾನದ ಆಶಯ ಎತ್ತಿ ಹಿಡಯುತ್ತಾ? ಎಂದು ಪ್ರಸ್ತುತ ರಾಜಕೀಯವನ್ನು ಪರೋಕ್ಷವಾಗಿ ಉದಾಹರಿಸಿ ತಮ್ಮ ಭಾಷಣದಲ್ಲಿ ಚುಚ್ಚಿದರು.
ನಮ್ಮ ಸಂವಿಧಾನ ಉಳಿಸಿಕೊಳ್ಳುವ ಆತಂಕ ಕಾಡುತ್ತಿದೆ. ಕೆಲವರು ಪಟಾಕಿ ಶಬ್ದದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ನಮ್ಮ ಸಂವಿಧಾನಕ್ಕೆ ಟೈಂ ಬಾಂಬ್ ಫಿಕ್ಸ್ ಆಗಿದೆ. ಯಾವ ಕಾಶ್ಮೀರಿ ಮೂಲ ನಿವಾಸಿಗಳಾದ ಕಾಶ್ಮೀರಿ ಪಂಡಿತರನ್ನು ಹೊರಹಾಕಿದಾಗ ಅವರನ್ನು ಉಳಿಸಿಕೊಳ್ಳಲಾಗದ ಮನಸ್ಥಿತಿಗಳು ಸಂವಿಧಾನವನ್ನು ಉಳಿಸಿಕೊಳ್ಳುತ್ತವೆಯೇ?. ಕಾಶ್ಮೀರದಲ್ಲಿ ಸಂವಿಧಾನವನ್ನು ಗೌರವಿಸುವವರು ಅಲ್ಪಸಂಖ್ಯಾತರು, ಸಂವಿಧಾನವನ್ನು ಧಿಕ್ಕಿರಿಸುವವರೇ ಬಹುಸಂಖ್ಯಾತರು. ಹಾಗಾಗಿಯೇ ಕಾಶ್ಮೀರದಲ್ಲಿ ಸಂವಿಧಾನದಿಂದ ಕಾಶ್ಮೀರಿ ಪಂಡಿತರ ರಕ್ಷಣೆ ಸಾಧ್ಯವಾಗಲಿಲ್ಲ.
ಇಂತಹ ಸಂವಿಧಾನವನ್ನು ಧಿಕ್ಕರಿಸುವ ಮನಸ್ಥಿತಿ ಇಡೀ ಭಾರತವನ್ನು ವ್ಯಾಪಿಸಿದರೆ ಸಂವಿಧಾನ ಉಳಿಯುತ್ತದೆಯೇ?. ಅಸ್ಸೋಂನಲ್ಲಿ ಯಾರೋ ಒಬ್ಬ ದೇಶ ತುಂಡು ಮಾಡುವ ಮಾತನಾಡುತ್ತಾನೆ. ಇನ್ನಾರೋ ಒಬ್ಬ ಇನ್ಷಾ ಅಲ್ಲಾ, ಪಾಕಿಸ್ತಾನ ಜಿಂದಾಬಾದ್ ಹೇಳುವವರ ಜೊತೆಗೆ ವೇದಿಕೆ ಹಂಚಿಕೊಳ್ಳುತ್ತಾರೆ. ಇಂತಹವರಿಂದ ಸಂವಿಧಾನ ಉಳಿಯುತ್ತದೆಯೇ ಎಂದಾಗ ಕಾಂಗ್ರೆಸ್ನ ರಿಜ್ವಾನ್ ಅರ್ಷದ್ ಹಾಗೂ ಯತೀಂದ್ರ ಅವರು ತೀವ್ರ ಆಕ್ಷೇಪಿಸಿದರು. ಆಗ ಕೆಲ ಕಾಲ ಮಾತಿನ ವಾಗ್ವಾದ ನಡೆಯಿತು.
ಅಂಬೇಡ್ಕರ್ರ ವಿಚಾರ ಉಳಿಯಬೇಕಾದರೆ ಬಡ ದಲಿತರಿಗೆ ಜಾಗ ಬಿಟ್ಡುಕೊಟ್ಟಾಗ ಮಾತ್ರ ಅಂಬೇಡ್ಕರ್ರ ವಿಚಾರ ಉಳಿಯುತ್ತದೆ. ಅಂಬೇಡ್ಕರ್ರನ್ನು ದೇವರನ್ನಾಗಿ ಮಾಡಿ ದೇವಸ್ಥಾನದಲ್ಲಿ ಕೂಡಿಸಿದರೆ ಮತ್ತೆ ಪುರೋಹಿತ ಶಾಹಿ ವ್ಯವಸ್ಥೆಯೇ ಬರುತ್ತದೆ. ಬದಲಿಗೆ ಅವರ ವಿಚಾರವಾದವನ್ನು ಜಾರಿಗೊಳಿಸಿದಾಗ ಮಾತ್ರ ಅಂಬೇಡ್ಕರ್ ವಾದಕ್ಕೂ ಬೆಲೆ ಬರುತ್ತದೆ ಎಂದು ಹೇಳಿದರು.