ಬೆಂಗಳೂರು: ಒಂದು ಮತ್ತು ಎರಡನೇ ಅಲೆಯ ಕೋವಿಡ್ ಬಿಕ್ಕಟ್ಟಿನಿಂದ ಪಾಠ ಕಲಿತಿರುವ ಸರ್ಕಾರ ಮೂರನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.
ಈ ಕುರಿತು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಅಮೆರಿಕಾದಲ್ಲಿ ಕೊವಿಡ್ 3ನೇ ಅಲೆಯಿಂದ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಅನೇಕ ಕಟ್ಟು ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಬೆಂಗಳೂರಿನ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮಕ್ಕಳ ಆಸ್ಪತ್ರೆ ತೆರೆಯಲು ಸೂಚನೆ ನೀಡಿದ್ದೇನೆ. ಕೇರಳದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿವೆ. ಅದು ರಾಜ್ಯದಲ್ಲಿ ಕಾಣಿಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಿಎಂ ನಾಳೆಯಿಂದ ಮಂಗಳೂರು, ಉಡುಪಿ ಪ್ರವಾಸ ಕೈಗೊಳ್ಳಲಿದ್ದಾರೆ. ಅಲ್ಲಿನ ಕೋವಿಡ್ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗಳಿಗೆ ತಾತ್ಕಾಲಿಕವಾಗಿ ಬೆಡ್ಗಳನ್ನು ವಾಪಸ್ ನೀಡಲಾಗಿದೆ. ಅಗತ್ಯ ಬಿದ್ದರೆ ಬೆಡ್ಗಳನ್ನು ವಾಪಸ್ ಪಡೆಯುತ್ತೇವೆ. ನಮ್ಮ ಆದೇಶದಲ್ಲಿಯೇ ಅದನ್ನು ತಿಳಿಸಿದ್ದೇವೆ ಎಂದರು.
ಸಚಿವರುಗಳು ಕೂಡ ಕೊರೊನಾ ನಿಯಮ ಪಾಲಿಸಬೇಕು. ಕೊರೊನಾ ಎಲ್ಲರಿಗೂ ಒಂದೆ ಯಾರೂ ನಿಯಮ ಮೀರಬಾರದು. ಸ್ವಾತಂತ್ರ್ಯ ದಿನಾಚರಣೆಯನ್ನು ಕೋವಿಡ್ ನಿಯಮದಂತೆ ಆಚರಿಸಲು ತೀರ್ಮಾನ ಮಾಡಲಾಗಿದೆ. ಹಣ ಬಿಡುಗಡೆ ಮಾಡಿ, ಮೂರನೇ ಅಲೆ ನಿಯಂತ್ರಣ ಮಾಡಲಿದ್ದೇವೆ. ಪ್ರತಿ ವಿಧಾನಸಭಾ ಕ್ಷೇತ್ರಗಳಿಗೂ ಒಂದು ಮಕ್ಕಳ ಆಸ್ಪತ್ರೆ ಮಾಡಲು ನಿರ್ಧಾರ ಮಾಡಲಾಗಿದೆ. ಮಕ್ಕಳ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಸೂಚನೆ ನೀಡಿದ್ದೇವೆ ಎಂದು ಮಾಹಿತಿ ನೀಡಿದರು.
ನಾನು ಕೋವಿಡ್ ರೋಗಿಗಳಿಗೆ ತಾತ್ಕಾಲಿಕ ಬೆಡ್ ಅರೇಂಜ್ ಮಾಡಲಾಗಿದೆ. ಮತ್ತೆ ಕೋವಿಡ್ ಹೆಚ್ಚಾದ್ರೆ ಮತ್ತೆ ಖಾಸಗಿ ಆಸ್ಪತ್ರೆಯಿಂದ ಆಸ್ಪತ್ರೆಗಳ ಬೆಡ್ ತೆಗೆದುಕೊಳ್ತೀವಿ ಎಂದು ತಿಳಿಸಿದರು.
ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸುವ ಚರ್ಚೆ ಆಗಿಲ್ಲ:
ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿಲ್ಲ ಎಂದು ತಿಳಿಸಿದರು. ಸಾವರ್ಕರ್ ಹೆಸರು ಹೇಳುವ ಯೋಗ್ಯತೆ ಕಾಂಗ್ರೆಸ್ನವರಿಗೆ ಇಲ್ಲ. ವಾಜಪೇಯಿ ಅಜಾತ ಶತ್ರು. ಆ ರೀತಿ ಹೇಳಿಕೆ ಸರಿಯಲ್ಲ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲ್ಲ. ಅವರು ಭ್ರಮೆಯಲ್ಲಿದ್ದಾರೆ. ಈಗಿರೋದು ಬಿಜೆಪಿ ಸರ್ಕಾರ. ಜನರ ಪರವಾಗಿ ಏನು ಮಾಡಬೇಕೋ ಅದನ್ನು ನಾವು ಮಾಡುತ್ತೇವೆ. ವ್ಯಕ್ತಿಗಳ ಹೆಸರು ಬದಲಾವಣೆ ಸರ್ವೇ ಸಾಮಾನ್ಯವಾಗಿ ವಿವಾದ ಆಗುತ್ತದೆ. ಯಾರೇ ಪ್ರಧಾನಿ ಆಗಿ ಬಂದಾಗ ಅದು ಬದಲಾಗುತ್ತದೆ ಎಂದು ತಿಳಿಸಿದರು.
ಕಾಂಗ್ರೆಸ್ನವರಿಗೆ ವಾಜಪೇಯಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಇದು ಬಿಜೆಪಿ ಸರ್ಕಾರ. ಯಾವುದೇ ಸರ್ಕಾರ ಬಂದರೂ ವ್ಯಕ್ತಿಯ ಹೆಸರಿಡುವ ಪದ್ಧತಿಯನ್ನು ಬಿಟ್ಟು ಮುಖ್ಯಮಂತ್ರಿ ಅಥವಾ ಪ್ರಧಾನಮಂತ್ರಿ ಯೋಜನೆ ಅಂತ ಹೆಸರಿಟ್ಟಿದ್ದೇವೆ. ಯಾವುದೇ ಸರ್ಕಾರ ಸಿಎಂ ಬಂದರೂ ಅದು ಮುಂದುವರೆಯುತ್ತದೆ ಎಂದು ಸಚಿವ ಅಶೋಕ್ ಸ್ಪಷ್ಟನೆ ನೀಡಿದರು.