ಬೆಂಗಳೂರು : ಕಾಂಗ್ರೆಸ್ ನಾಯಕರುಗಳ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಪ್ರಕಟಿಸುತ್ತಿರುವ ಆರೋಪದಡಿ ಬಿಜೆಪಿಯ ಮಾಹಿತಿ ತಂತ್ರಜ್ಞಾನ ವಿಭಾಗದ (ಐಟಿ ಸೆಲ್) ರಾಷ್ಟ್ರೀಯ ಸಂಚಾಲಕ ಅಮಿತ್ ಮಾಳವಿಯಾ ಹಾಗೂ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ವಿರುದ್ದ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆ್ಯನಿಮೇಟೆಡ್ ವೀಡಿಯೋ ಮೂಲಕ ಕಾಂಗ್ರೆಸ್ ಪಕ್ಷ ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದೆ ಎಂದು ಉಲ್ಲೇಖಿಸಿ, ರಾಹುಲ್ ಗಾಂಧಿಯವರ ವಿರುದ್ದ ವಿಡಿಯೋ ಹರಿಬಿಟ್ಟ ಬಗ್ಗೆ ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಹೈಗ್ರೌಂಡ್ಸ್ ಠಾಣೆಗೆ ದೂರು ನೀಡಿದ್ದಾರೆ.
ದೂರೂ ನೀಡಿದ ಬಳಿಕ ಮಾತನಾಡಿದ ಪ್ರಿಯಾಂಕ್ ಖರ್ಗೆ, ರಮೇಶ್ ಬಾಬು ಹಾಗೂ ನಾನು ಹೈಗ್ರೌಂಡ್ಸ್ ಠಾಣೆಗೆ ಒಂದು ಕಂಪ್ಲೆಂಟ್ ಕೊಡಲು ಬಂದಿದ್ದೇವೆ. ಕಂಪ್ಲೆಂಟ್ ಬಿಜೆಪಿಯ ಐಟಿ ಸೆಲ್ ಅಧ್ಯಕ್ಷ ಅಮಿತ್ ಮಾಳವಿಯಾ ಹಾಗೂ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಮತ್ತು ಚಂಡೀಘಡ್ನ ಬಿಜೆಪಿ ರಾಜ್ಯ ಅಧ್ಯಕ್ಷ ಅರುಣ್ ಸೂದ್ ಇವರು ಮೂರು ಜನರ ವಿರುದ್ಧ ನಾವು ಇವತ್ತು ಒಂದು ದೂರನ್ನು ಸಲ್ಲಿಸಿದ್ದೇವೆ.
ದೂರಿನಲ್ಲಿ, ಜೂನ್ 17ನೇ ತಾರೀಖು ಅಮಿತ್ ಮಾಳವಿಯಾ ಅವರು ತಮ್ಮ ಅಧಿಕೃತ ಅಕೌಂಟ್ನಿಂದ ವಿಡಿಯೋವನ್ನು ಪೋಸ್ಟ್ ಮಾಡುತ್ತಾರೆ. ಆ ವಿಡಿಯೋ ಆ್ಯನಿಮೇಟೆಡ್ ಆಗಿದೆ. ಅದರಲ್ಲಿ ಕಾಂಗ್ರೆಸ್ ಪಕ್ಷ ದೇಶದ್ರೋಹಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ರಾಹುಲ್ ಗಾಂಧಿಯವರು ವಿದೇಶಕ್ಕೆ ಹೋದಗೆಲ್ಲಾ ಆ್ಯಂಟಿ ಇಂಡಿಯಾ ಆಕ್ಟಿವಿಟೀಸ್ ಅನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿಯವರು ದೇಶವನ್ನು ಒಡೆಯುವಂತಹ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಆ ವಿಡಿಯೋದಲ್ಲಿ ತೋರಿಸುತ್ತಾರೆ.
ಫ್ಯಾಕ್ಟ್ ಚೆಕ್ ಯೂನಿಟ್: ಆದ್ದರಿಂದ ನಾವು ಬಿಜೆಪಿಯ ಸುಳ್ಳಿನ ಫ್ಯಾಕ್ಟರಿಯನ್ನು ಬಂದ್ ಮಾಡಲು ನಿರ್ಧರಿಸಿದ್ದೇವೆ. ಹೋದ ಸಲ ಅವರ ಸರ್ಕಾರದಲ್ಲಿ ಅವರ ಆಟ ನಡೆಯಿತು. ಪೊಲೀಸ್ ಇಲಾಖೆಯ ಫ್ಯಾಕ್ಟ್ ಚೆಕ್ ಯೂನಿಟ್ ಬಂದ್ ಮಾಡಿದ್ದರು. ಸ್ವತಃ ಬಿಜೆಪಿಯವರೇ ಫೇಕ್ ನ್ಯೂಸ್ಗಳನ್ನು ಸೃಷ್ಟಿ ಮಾಡುತ್ತಿದ್ದರು. ಆದರೆ ನಾವು ಇನ್ನು ಮುಂದೆ ಬಿಡಲ್ಲ. ಫ್ಯಾಕ್ಟ್ ಚೆಕ್ ಯೂನಿಟನ್ನ ಮತ್ತಷ್ಟು ಪ್ರಬಲಗೊಳಿಸುತ್ತೇವೆ. ಈಗಾಗಲೇ ಮುಖ್ಯಮಂತ್ರಿಗಳ ಬಳಿ ಮಾತನಾಡಿದ್ದೇನೆ. ಕೋಮುಗಲಭೆ, ಶಾಂತಿ ಕದಡುವ ಪೋಸ್ಟ್ ಗಳನ್ನ ಪ್ರಕಟಿಸಿದರೆ ಅಂಥವರ ವಿರುದ್ದ ಸೂಕ್ತ ಕ್ರಮ ಜರುಗಿಸುತ್ತೇವೆ ಎಂದು ಹರಿಹಾಯ್ದರು.
ಇದನ್ನೂ ಓದಿ: ಗೃಹಜ್ಯೋತಿ ಯೋಜನೆ ಅರ್ಜಿ ಸಲ್ಲಿಕೆಗೆ ಸರ್ವರ್ ಪ್ರಾಬ್ಲಂ: ಸಮಸ್ಯೆ ಬಗೆಹರಿಸಲು ಕಾಲಾವಕಾಶ ಬೇಕೆಂದ ಸತೀಶ್ ಜಾರಕಿಹೊಳಿ
ಗೃಹ ಇಲಾಖೆ ಜೊತೆಗೆ ಮಾತನಾಡಿ ಫ್ಯಾಕ್ಟ್ ಚೆಕ್ಗಾಗಿ ಪ್ರತ್ಯೇಕ ತಂಡ ರಚನೆ ಮಾಡುತ್ತೇವೆ. ಯಾರು ಶಾಂತಿ ಕದಡುವ ಪ್ರಯತ್ನ ಮಾಡುತ್ತಾರೋ ಅವರ ವಿರುದ್ದ ಕಾನೂನು ಚೌಕಟ್ಟಿನ ಅಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಭೂ ಖರೀದಿದಾರರಿಗೆ ಸದ್ಯದಲ್ಲೇ ಶಾಕ್: ಆಸ್ತಿ ಮಾರ್ಗಸೂಚಿ ದರ ಹೆಚ್ಚಳಕ್ಕೆ ಚಿಂತನೆ.. ಸಚಿವ ಕೃಷ್ಣ ಭೈರೇಗೌಡ