ಬೆಂಗಳೂರು: ಸಂಜೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೊತೆ ಮಾತನಾಡುತ್ತೇವೆ. ನಾವೇನು ತಪ್ಪು ಮಾಡಿದ್ದೇವೆ ಅಂತಾ ಕೇಳುತ್ತೇವೆ ಎಂದು ಸಚಿವ ಗೋಪಾಲಯ್ಯ ತಿಳಿಸಿದರು.
ಸುಧಾಕರ್ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸಂದರ್ಭದಲ್ಲಿ ಪಕ್ಷ ಹಾಗೂ ಸರ್ಕಾರಕ್ಕೆ ಒಳ್ಳೆಯ ಹೆಸರು ತರುವ ಕೆಲಸ ಮಾಡಿದ್ದೇವೆ. ಕಾನೂನು ಬಾಹಿರ ಚಟುವಟಿಕೆ ನಡೆಸಿದ್ದ ಅಂಗಡಿಗಳ ಪರವಾನಗಿ ರದ್ದು ಮಾಡಿದ್ದೇನೆ. ಕಳೆದ 11 ತಿಂಗಳಲ್ಲಿ ಇಲಾಖೆ ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡಿದ್ದು, ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.
ಮುಂದಿನ ದಿನದಲ್ಲಿ ಅನೇಕ ಗುರಿ ಇರಿಸಿಕೊಂಡಿದ್ದೇನೆ. ಬಜೆಟ್ನಲ್ಲಿ ಸರ್ಕಾರ ಪಕ್ಷಕ್ಕೆ ಒಳ್ಳೆಯ ಹೆಸರು ತರುವ ಕಾರ್ಯಕ್ರಮಗಳನ್ನು ಆಯೋಜಿಸಲು ಚಿಂತನೆ ನಡೆಸಿದ್ದೆ, ಆದರೆ ಖಾತೆ ಬದಲಾವಣೆ ಆಗಿದೆ. ಈ ಕುರಿತು ಸಂಜೆ ನಾವೆಲ್ಲ ನಾಲ್ಕು ಜನ ಸಿಎಂ ಜೊತೆ ಚರ್ಚೆ ನಡೆಸುತ್ತೇವೆ ಎಂದರು.
ನಮಗೆ ಅಪಾಯಿಂಟ್ಮೆಂಟ್ ಬೇಕಿಲ್ಲ:
ನಾವು ಸರ್ಕಾರದ ಒಂದು ಭಾಗ, ಹಾಗಾಗಿ ನಮಗೆ ಸಿಎಂ ಭೇಟಿಗೆ ಅನುಮತಿ ಬೇಕಿಲ್ಲ. ಯಾವಾಗ ಬೇಕಾದರೂ ಸಿಎಂ ಭೇಟಿ ಮಾಡಬಹುದು. ಯಾವ ಸಂದರ್ಭದಲ್ಲಿ ಮಾತನಾಡಬೇಕೋ ಮಾಡುತ್ತೇವೆ. ಸಂಪುಟ ಸಭೆಗೆ ಮೊದಲು ಅಥವಾ ನಂತರ ಮಾತನಾಡುತ್ತೇವೆ. ನಾವೇನು ತಪ್ಪು ಮಾಡಿದ್ದೇವೆ ಅಂತಾ ಕೇಳುತ್ತೇವೆ ಎಂದರು.
ಸಚಿವ ರಮೇಶ್ ಜಾರಕಿಹೊಳಿ ಕೂಡ ನಮ್ಮ ಪರ ಇದ್ದಾರೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ. ನಮ್ಮ ನಾಲ್ಕೈದು ಜನಕ್ಕೆ ಖಾತೆಗಳ ಬದಲಾವಣೆ ಆಗಿದೆ. ಹಾಗಾಗಿ ನಾವು ಸುಧಾಕರ್ ನಿವಾಸದಲ್ಲಿ ಸಭೆ ನಡೆಸಿದ್ದೇವೆ ಎಂದರು.