ಬೆಂಗಳೂರು: ಭಯೋತ್ಪಾದನೆ ಹತ್ತಿಕ್ಕಲು ಯಾವುದೇ ಮಾದರಿಯಾದರೂ ಜಾರಿ ಮಾಡುತ್ತೇವೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು. ವಿಧಾನಸೌಧದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರವೀಣ್ ನೆಟ್ಟಾರು ಹತ್ಯೆ ಕಾರ್ಯಕರ್ತರ ಆಕ್ರೋಶ ಸಹಜ. ನಾವು ಕಾರ್ಯಕರ್ತರಾಗಿಯೇ ಮೇಲೆ ಬಂದಿದ್ದೇವೆ. ಅವರ ಭಾವನೆ ಅರ್ಥವಾಗುತ್ತದೆ. ಪ್ರವೀಣ್ ಕೇಸ್ ವಿಶೇಷವಾಗಿದೆ. ಇದರಲ್ಲಿ ಕೇರಳದವರು ಭಾಗಿಯಾಗಿರುವ ಶಂಕೆ ಇದೆ. ಹೀಗಾಗಿ, ಅವರನ್ನು ಪತ್ತೆ ಹಚ್ಚುವ ಪ್ರಯತ್ನ ಮಾಡುತ್ತೇವೆ ಎಂದರು.
ನಾವು ಎಲ್ಲದಕ್ಕೂ ಯುಪಿ, ಗುಜರಾತ್ ಮಾಡೆಲ್ ಅನ್ನುವುದನ್ನು ಬಿಡಬೇಕು. ಆಯಾ ರಾಜ್ಯಗಳಲ್ಲಿ ಅಲ್ಲಿಯ ವಾತಾವರಣ ಬೇರೆ ಬೇರೆ ಇರುತ್ತದೆ. ಯಾವ ಕೇಸಿಗೆ ಅಗತ್ಯ ಇದೆಯೋ ಅದಕ್ಕೆ ಮಾತ್ರ ಯುಪಿ ಮಾಡೆಲ್ ಜಾರಿ ಮಾಡುತ್ತೇವೆ. ಎಲ್ಲದಕ್ಕೂ ಒಂದೇ ಮಾದರಿ ಜಾರಿ ಮಾಡುವುದಿಲ್ಲ ಎಂದು ಸಚಿವ ಅಶೋಕ್ ತಿಳಿಸಿದರು.
ಸುಪ್ರೀಂ ಆದೇಶ ಪಾಲನೆ ಮಾಡುತ್ತೇವೆ: ಬಿಬಿಎಂಪಿ ಚುನಾವಣೆ ಹಿನ್ನೆಲೆ ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡಲು ಸರ್ಕಾರ ಸಿದ್ಧವಿದೆ. ತಕ್ಷಣ ಚುನಾವಣೆ ಘೋಷಣೆ ಮಾಡಲು ಯಾವುದೇ ತೊಂದರೆಯಿಲ್ಲ ಎಂದರು.
ಸಿಎಂ ಬಳಿ ಹೋಗ್ತೀನಿ: ಬಿಬಿಎಂಪಿ ಚುನಾವಣೆ ಮೀಸಲಾತಿ ಒಂದು ವಾರದಲ್ಲಿ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಸರ್ಕಾರ, ನಮ್ಮ ಪಕ್ಷ ಎರಡೂ ಚುನಾವಣೆಗೆ ತಯಾರಿ ಇದೆ. ಚುನಾವಣೆ ಮಾಡಲು ಯಾವುದೇ ಭೀತಿ ಇಲ್ಲ. ಬೂತ್ ಮಟ್ಟದಲ್ಲಿ, ವಾರ್ಡ್ ಮಟ್ಟದಲ್ಲಿ ಸಭೆಗಳನ್ನ ಮಾಡಿದ್ದೇವೆ. ಚುನಾವಣೆ ತಯಾರಿ ಸಂಬಂಧ ನಾವೆಲ್ಲಾ ತಯಾರಿ ಮಾಡಿದ್ದೇವೆ. ಚುನಾವಣೆ ದಿನಾಂಕ ಎಲೆಕ್ಷನ್ ಕಮಿಷನ್ ಮಾಡಲಿದೆ. ಉಳಿದ ಕೆಲಸಗಳನ್ನು ಸರ್ಕಾರ ಮಾಡಲಿದೆ. ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಚರ್ಚಿಸಲು ಸಿಎಂ ಬಳಿ ಹೋಗ್ತೀವಿ ಎಂದು ತಿಳಿಸಿದರು.
ಓದಿ: ಪ್ರವೀಣ್ ಹತ್ಯೆಗೆ ಖಂಡನೆ: ಧಾರವಾಡ ಜಿಲ್ಲಾ ಕಾರ್ಯಕಾರಿಣಿ ಸದಸ್ಯೆ ರೇಖಾ ರಾಜೀನಾಮೆ!