ಬೆಂಗಳೂರು : ನಾಗ್ಪುರದಲ್ಲಿ ಲಾಕ್‌ಡೌನ್ ಮಾಡಿರುವುದನ್ನು ನೋಡಿದ್ದೇವೆ. ಮಹಾರಾಷ್ಟ್ರದಲ್ಲಿ ಲಾಕ್‌ಡೌನ್, ಸೀಲ್‌ಡೌನ್ ಗಮನಿಸಿದ್ದೇವೆ. ಈ ಎಲ್ಲ ವಿಚಾರಗಳ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸುತ್ತೇವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿನ ಪ್ರಮಾಣ ತಡೆಯುವ ಸಂಬಂಧ ಮುಖ್ಯಮಂತ್ರಿ ಬಿಎಸ್ವೈ ಅವರು ಸಚಿವರ ಹಾಗೂ ವಲಯ ಉಸ್ತುವಾರಿಗಳ ಸಭೆ ಕರೆದಿದ್ದಾರೆ. ನಾಳೆ ಸಂಜೆ 5 ಗಂಟೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಯಡಿಯೂರಪ್ಪ ಸಭೆ ನಡೆಸಲಿದ್ದಾರೆ.
ಕೊರೊನಾ ಸಂಬಂಧ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಕುರಿತು ಚರ್ಚೆ ನಡೆಸಲು ಸಿಎಂ ನಿರ್ಧರಿಸಿದ್ದಾರೆ. ನಾಳಿನ ಸಭೆಯಲ್ಲಿ ಮತ್ತಷ್ಟು ಕಠಿಣ ನಿಯಮ ಬಗ್ಗೆ ಅಭಿಪ್ರಾಯವ್ಯಕ್ತವಾಗುವ ಸಾಧ್ಯತೆಯಿದೆ. ಸಚಿವರಿಂದ ಅಭಿಪ್ರಾಯ ಪಡೆದು, ಅದನ್ನು ಜಾರಿಗೊಳಿಸುವ ಬಗ್ಗೆ ಸಿಎಂ ನಿರ್ಧಾರ ಮಾಡಲಿದ್ದಾರೆ ಎಂದರು.
ನಾಲ್ಕು ವಾರಗಳಿಂದ 300 ಕೊರೊನಾ ಕೇಸ್ ಪತ್ತೆಯಾಗುತ್ತಿವೆ. ಈಗ ಮೂರು ಸಾವಿರ ಬರ್ತಿದೆ. ಈಗ ತೆಗೆದುಕೊಂಡಿರುವ ಕ್ರಮಗಳು ಸಾಕಾಗಲ್ಲ. ಗಡಿ ಭಾಗಗಳಲ್ಲಿ ಕಟ್ಟು ನಿಟ್ಟಿನ ಕ್ರಮ, ಬೆಂಗಳೂರಿಗೆ ಬರುವವರ ಬಗ್ಗೆ ಹೆಚ್ಚು ಗಮನವಿರಿಸಬೇಕು. ಈ ಬಗ್ಗೆ ಗೃಹ ಸಚಿವರ ಜೊತೆ ಚರ್ಚೆ ನಡೆಸಿದ್ದೇನೆ. ಸಿಎಂ ಗಮನಕ್ಕೆ ತಂದು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗಿದೆ. ಇದನ್ನ ಗಮನಿಸಿದ್ದೇವೆ. ನಮ್ಮ ರಾಜ್ಯದ ಆಸ್ಪತ್ರೆಗಳಲ್ಲಿ ಉತ್ತಮ ಆರೋಗ್ಯ ಸೇವೆಗೆ ಕ್ರಮಕೈಗೊಳ್ಳುತ್ತೇವೆ. ಮುಂದಿನ 7 ರಿಂದ 8 ವಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ತಾಂತ್ರಿಕ ಸಲಹಾ ಸಮಿತಿಯಿಂದಲೂ ವರದಿ ಬಂದಿದೆ.
ಗಡಿ ಬಂದ್ ಮಾಡಬಾರದು ಎಂದು ಕೇಂದ್ರ ಸರ್ಕಾರದ ಸ್ಪಷ್ಟ ಸೂಚನೆಯಿದೆ. ಆದರೆ, ಕಟ್ಟುನಿಟ್ಟಾಗಿ ಕ್ರಮಕೈಗೊಳ್ಳುತ್ತೇವೆ. ರೂಪಾಂತರ ವೈರಸ್ ಕರ್ನಾಟಕದಲ್ಲೂ ಬಂದಿದೆ. ಆದ್ರೆ, ಆಫಿಕ್ರಾ ದೇಶದ ವೈರಾಣು ಬಂದಿಲ್ಲ. ರಾಜ್ಯಕ್ಕೆ ತೀವ್ರತೆ ಇರುವ ವೈರಾಣು ಬಂದಿಲ್ಲ. ಆದರೆ, ತೀವ್ರವಾಗಿ ಹರಡುವ ವೈರಾಣು ಬಂದಿದೆ ಎಂದರು.
ಓದಿ: ಒಂದೇ ದಿನಕ್ಕೆ 3082 ಮಂದಿಗೆ ಸೋಂಕು.. 12 ಮಂದಿ ಬಲಿ
ಈ ಶೈಕ್ಷಣಿಕ ವರ್ಷದಿಂದ 1ರಿಂದ 9ನೇ ತರಗತಿವರೆಗೆ ಎಲ್ಲರನ್ನೂ ತೇರ್ಗಡೆ ಮಾಡಬೇಕು ಎಂದು ಸರ್ಕಾರ ಸೂಚಿಸಿದೆ. ಪರೀಕ್ಷೆ ಮಾಡದೆ ತೇರ್ಗಡೆ ಮಾಡುವುದರ ಬಗ್ಗೆ ಗೊತ್ತಿಲ್ಲ. ಶಿಕ್ಷಣ ಸಚಿವರ ಜೊತೆ ಚರ್ಚೆ ಮಾಡಿ ಮಾತನಾಡುತ್ತೇನೆ. ಸಿನಿಮಾ ಮಂದಿರಗಳಿಗೆ ಮಾರ್ಗಸೂಚಿ ಬಗ್ಗೆಯೂ ತೀರ್ಮಾನ ಸೇರಿ ಎಲ್ಲಾ ಚಟುವಟಿಕೆಗಳ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸಚಿವ ಸುಧಾಕರ್ ಸ್ಪಷ್ಟಪಡಿಸಿದರು.