ಬೆಂಗಳೂರು: ಜೈವಿಕ ವಿಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಇನ್ನಷ್ಟು ಹೆಚ್ಚಿನ ಸಾಧನೆ ಮಾಡುವ ದಿಸೆಯಲ್ಲಿ ಕರ್ನಾಟಕಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಇದ್ರ ಜೊತೆಗೆ ವಿಜ್ಞಾನ, ವ್ಯಾಪಾರ, ಉದ್ಯಮಶೀಲತೆ ಹಾಗೂ ಶೈಕ್ಷಣಿಕ ವಲಯಗಳ ನಡುವಿನ ಸಮನ್ವಯತೆಯಿಂದ ಜನರ ಬದುಕಿನ ಮಟ್ಟ ಸುಧಾರಿಸಲು ಮೋದಿ ನೇತೃತ್ವದ ಸರ್ಕಾರ ಒತ್ತು ನೀಡಿದೆ ಎಂದು ತಿಳಿಸಿದರು.
ರಾಜ್ಯದ ಐಟಿ/ಬಿಟಿ ಮತ್ತು ವಿಜ್ಞಾನ & ತಂತ್ರಜ್ಞಾನ ಇಲಾಖೆಯು ಜೈವಿಕ ತಂತ್ರಜ್ಞಾನ ಉದ್ಯಮಿಗಳು ಹಾಗೂ ಸ್ಟಾರ್ಟ್ ಅಪ್ ಪ್ರಮುಖರೊಂದಿಗೆ ಶುಕ್ರವಾರ ಎಲೆಕ್ಟ್ರಾನಿಕ್ ಸಿಟಿಯ ಜೈವಿಕ ತಂತ್ರಜ್ಞಾನ ಪಾರ್ಕ್ನಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಯಾವುದೇ ವೈಜ್ಞಾನಿಕ ಸಾಧನೆಗೆ ಜೀವ ವಿಜ್ಞಾನಗಳೇ ಬುನಾದಿ. ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಜೀವ ವಿಜ್ಞಾನ ಹಾಗೂ ಜೈವಿಕ ತಾಂತ್ರಿಕತೆಯ ಬೆಳವಣಿಗೆಗೆ ದೇಶದಲ್ಲೇ ಮಾದರಿ ಎನ್ನಿಸುವಂತಹ ವಾತಾವರಣ ಸೃಷ್ಟಿಸಿದೆ ಎಂದರು.
ಪ್ರೋತ್ಸಾಹಿಸುವುದೇ ಸರ್ಕಾರದ ಅಂತಿಮ ಉದ್ದೇಶ: ವಿವಿಧ ಇಲಾಖೆಗಳಡಿ ನಡೆಯುತ್ತಿರುವ ವೈಜ್ಞಾನಿಕ ಸಂಶೋಧನೆಗಳ ನಡುವೆ ಸಮನ್ವಯತೆ ಉಂಟುಮಾಡುವುದು ಕೇಂದ್ರ ಸರ್ಕಾರದ ಆದ್ಯತೆಯಾಗಿದೆ. ಇದೇ ವೇಳೆ, ಯಾವುದೇ ಅಭಿಪ್ರಾಯ, ಸಲಹೆಗಳನ್ನು ಮುಕ್ತವಾಗಿ ಸ್ವೀಕರಿಸಲಾಗುವುದು. ವೈಜ್ಞಾನಿಕ ಹಾಗೂ ತಾಂತ್ರಿಕ ಸಂಶೋಧನೆಗಳನ್ನು ಪ್ರೋತ್ಸಾಹಿಸುವುದೇ ಸರ್ಕಾರದ ಅಂತಿಮ ಉದ್ದೇಶ ಎಂದು ಸೀತಾರಾಮನ್ ಸ್ಪಷ್ಟಪಡಿಸಿದರು.
ಐಟಿ/ಬಿಟಿ ಸಚಿವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಪ್ರಾಸ್ತಾವಿಕ ನುಡಿಗಳನ್ನಾಡಿ, ಕರ್ನಾಟಕವು ಮಾಹಿತಿ ತಂತ್ರಜ್ಞಾನ ರಾಜಧಾನಿ ಮಾತ್ರವಲ್ಲದೇ ಜೈವಿಕ ತಂತ್ರಜ್ಞಾನದ ತವರೂ ಆಗಿದೆ. ಕಿಣ್ವಗಳು (ಎಂನ್ಸೆಮ್ಸ್), ಬಯೋಫಾರ್ಮಾ, ಬಯೋಫಾರ್ಮಸ್ಯೂಟಿಕಲ್, ಸಸ್ಯ ಆನುವಂಶೀಯತೆ, ವಂಶವಾಹಿನಿಗಳ ಅನುಕ್ರಮಣಿಕೆ, ಜೈವಿಕ ಸಂಸ್ಕರಣೆಗೆ ಸಂಬಂಧಿಸಿದ ಆವಿಷ್ಕಾರಗಳಿಗೆ ಬೆಂಗಳೂರು ಪ್ರಮುಖ ಕಾರ್ಯನೆಲೆಯಾಗಿದೆ ಎಂದರು.
ನವೋದ್ಯಮಗಳಿಗೆ ಹೊಸ ಅವಕಾಶ: ಈ ಕ್ಷೇತ್ರವು ಹೆಚ್ಚಿನ ಉದ್ಯೋಗ ಸೃಷ್ಟಿಸುವ ಜೊತೆಗೆ ಉತ್ಪಾದಕತೆ ಹಾಗೂ ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಆಹಾರ ಭದ್ರತೆ, ಆರೋಗ್ಯಸೇವೆ, ಶುದ್ಧ ಇಂಧನ, ಸ್ವಚ್ಛ ಪರಿಸರ ಇತ್ಯಾದಿ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ. ಜೊತೆಗೆ, ಕೋವಿಡ್-19 ಸೋಂಕಿನ ಸನ್ನಿವೇಶದ ನವೋದ್ಯಮಗಳಿಗೆ ಹೊಸ ಅವಕಾಶಗಳನ್ನು ಉಂಟುಮಾಡಿವೆ. ಇದಕ್ಕೆ ಪೂರಕವಾಗಿ, ರಾಜ್ಯವು ಸ್ಪರ್ಧಾತ್ಮಕ ಸಂಸ್ಥೆಯ (ಐಎಫ್ ಸಿ) ಸಹಭಾಗಿತ್ವದಲ್ಲಿ ‘ಕರ್ನಾಟಕ ನಾವೀನ್ಯತಾ ಒಳನೋಟ-2030’ ಹೊರತರಲು ತಯಾರಿ ನಡೆಸುತ್ತಿದೆ ಎಂದು ವಿವರಿಸಿದರು.
ಕೇಂದ್ರ ಸರ್ಕಾರದ ರಾಜಸ್ವ ಕಾರ್ಯದರ್ಶಿ ತರುಣ್ ಬಜಾಜ್ ಅವರು ಸಾಧನೆ ಆಧಾರಿತ ಪ್ರೋತ್ಸಾಹಕಗಳು, ಸಂಶೋಧನಾ & ಅಭಿವೃದ್ಧಿ ವೆಚ್ಚಗಳು ಹಾಗೂ ತೆರಿಗೆ ಸಂಬಂಧಿತ ವಿಷಯಗಳ ಕುರಿತು ಹೇಳಿದರು. ರಾಜ್ಯ ಜೈವಿಕ ತಂತ್ರಜ್ಞಾನ ಕಾರ್ಯಪಡೆ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ, ಕೇಂದ್ರದ ಕಂದಾಯ ಇಲಾಖೆ ಕಾರ್ಯದರ್ಶಿ ತರುಣ್ ಬಜಾಜ್, ಬಯೋ ಇನೋವೇಷನ್ ಸೆಂಟರ್ ವ್ಯವಸ್ಥಾಪಕ ನಿರ್ದೇಶಕ ಡಾ.ಜಿತೇಂದ್ರ ಕುಮಾರ್, ಸಿ ಕ್ಯಾಂಪ್ ಸಿಇಒ ಡಾ.ತಸ್ಲೀಮಾರಿಫ್ ಸೈಯ್ಯದ್, ಹೆಚ್ಚುವರಿ ಮುಖ್ಯ ಕಾಯ್ರದರ್ಶಿ ಡಾ.ಇ.ವಿ.ರಮಣ ರೆಡ್ಡಿ, ಐಟಿ ನಿರ್ದೇಶಕಿ ಮೀನಾ ನಾಗರಾಜ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಸಂವಾದ ಕಾರ್ಯಕ್ರಮಕ್ಕೂ ಮುನ್ನ ಕೇಂದ್ರ ಸಚಿವೆ ನಿರ್ಮಾಲಾ ಸೀತಾರಾಮನ್, ಡಿ.ಸಿ.ಎಂ ಅಶ್ವತ್ಥ್ ನಾರಾಯಣರೊಂದಿಗೆ ವಿವಿಧ ಸ್ಟಾರ್ಟ್ ಅಪ್ಗಳು ಅಭಿವೃದ್ಧಿಪಡಿಸಿರುವ ಸುಮಾರು 20ಕ್ಕೂ ಹೆಚ್ಚು ನಾವೀನ್ಯತಾ ಉತ್ಪನ್ನಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ಲಾಕ್ಡೌನ್ ವೇಳೆ ಹೆಚ್ಚಾಯ್ತು ಕೌಟುಂಬಿಕ ಕಲಹ: ಕ್ಷುಲ್ಲಕ ಕಾರಣಗಳಿಗೆ ಮನಸ್ತಾಪ, ಗಲಾಟೆ