ಬೆಂಗಳೂರು: ಕಾವೇರಿ ನದಿ ನೀರಿನ ಹೆಚ್ಚುವರಿ ಬಳಕೆಗೆ ನದಿ ಜೋಡಣೆಗೆ ಮುಂದಾಗಿರುವ ತಮಿಳುನಾಡು ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ನಲ್ಲಿ ಮೊಕದ್ದಮೆ ದಾಖಲಿಸಲಾಗುತ್ತದೆ. ಇದರ ವಿರುದ್ಧ ಕಾನೂನು ಹೋರಾಟ ನಡೆಸಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ನಾರಾಯಣಸ್ವಾಮಿ ಪ್ರಶ್ನೆಗೆ ಸಿಎಂ ಪರವಾಗಿ ಡಿಸಿಎಂ ಗೋವಿಂದ ಕಾರಜೋಳ ಉತ್ತರಿಸಿ, ತಮಿಳುನಾಡು ಚುನಾವಣೆ ಎಂದು ನದಿ ಜೋಡಣೆ ಯೋಜನೆಗೆ ಅಡಿಗಲ್ಲ ಹಾಕಿರಬಹುದು. ಆದರೆ, ಅದಕ್ಕೆ ಕಾನೂನಾತ್ಮಕ ಅವಕಾಶ ಇಲ್ಲ. ಇದಕ್ಕೆ ಕೇಂದ್ರ ಸರ್ಕಾರ ಹಾಗೂ ನಮ್ಮ ರಾಜ್ಯ ಅನುಮತಿ ಕೊಟ್ಟಿಲ್ಲ. ಹಾಗಾಗಿ ಆ ಯೋಜನೆಗೆ ಕಾನೂನು ಮಾನ್ಯತೆ ಇಲ್ಲ ಎಂದರು.
ನಂತರ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಾವೇರಿ ನ್ಯಾಯಾಧಿಕರಣ ಆದ ನಂತರ ಹೆಚ್ಚುವರಿ ನೀರು ಹಂಚಿಕೆಗೆ ಅವಕಾಶ ಇಲ್ಲ. ಹೆಚ್ಚುವರಿ ನೀರು ಬಳಸಿಕೊಳ್ಳಬೇಕಾದರೆ ಎಲ್ಲಾ ರಾಜ್ಯದ ಸಭೆ ನಡೆಸಬೇಕು. ಆದರೂ ತಮಿಳುನಾಡು ಉಲ್ಲಂಘಿಸಿದೆ. ಇದನ್ನೆ ಕೇಂದ್ರದ ಮುಂದೆ ನಾವು ಆಕ್ಷೇಪಣೆ ಸಲ್ಲಿಸಿದ್ದೇವೆ ಎಂದರು.
ಓದಿ: ಉಡುಪಿ: ಮಣಿಪಾಲ ಎಂಐಟಿ ಕ್ಯಾಂಪಸ್ನಲ್ಲಿ 27 ಕೊರೊನಾ ಪ್ರಕರಣ ಪತ್ತೆ
ಈಗಾಗಲೇ ಎರಡು ಬಾರಿ ಕಾನೂನು ತಜ್ಞರ ಜೊತೆ ಸಭೆ ನಡಸಿದ್ದೇನೆ. ಸುಪ್ರೀಂಕೋರ್ಟ್ ಮುಂದೆ ವರಿಜಿನಲ್ ಸೂಟ್ ಫೈಲ್ ಮಾಡಲು ನಿರ್ಧರಿಸಲಾಗಿದೆ. ಮಧುರೈ ಕೋರ್ಟ್ನಲ್ಲಿ ರೈತ ಪಿಐಎಲ್ ಹಾಕಿದ್ದು, ನಮ್ಮನ್ನು ಪಾರ್ಟಿ ಮಾಡಿಲ್ಲ. ಆದರೂ ನಾವು ಆಕ್ಷೇಪಣೆ ಸಲ್ಲಿಸಲು ಮುಂದಾಗಲಿದ್ದೇವೆ. ಎಲ್ಲಾ ರೀತಿಯಲ್ಲೂ ಕಾನೂನಾತ್ಮಕ ಸಮರ ಮಾಡಲಿದ್ದೇವೆ ಎಂದರು.