ಬೆಂಗಳೂರು:ಅನರ್ಹ ಶಾಸಕರ ಕುರಿತ ಸುಪ್ರೀಂ ಕೋರ್ಟ್ ತೀರ್ಪು ಬಂದ ಕೂಡಲೇ ನಮ್ಮ ನಿಲುವನ್ನು ಪಕ್ಷ ಮತ್ತು ಸರ್ಕಾರದಿಂದ ಬಹಿರಂಗಪಡಿಸುತ್ತೇವೆ ಎಂದು ಡಿಸಿಎಂ ಡಾ.ಅಶ್ವತ್ಥ ನಾರಾಯಣ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಹೊರಬೀಳಲಿರುವ ಅನರ್ಹ ಶಾಸಕರ ತೀರ್ಪಿಗೆ ನಾವು ಕೂಡ ಕಾಯುತ್ತಿದ್ದೇವೆ. ತೀರ್ಪು ಬಂದ ಬಳಿಕ ಸರ್ಕಾರ ಮತ್ತು ಪಕ್ಷದಲ್ಲಿ ನಿಲುವು ಸ್ಪಷ್ಟವಾಗಿರುತ್ತದೆ ನಿಲುವಿನಲ್ಲಿ ಯಾವುದೇ ಗೊಂದಲ ಇರುವುದಿಲ್ಲ, ಇದರ ಬಗ್ಗೆ ಸಾಕಷ್ಟು ದಾರಿಯಲ್ಲಿ ಯೋಚನೆ ಮಾಡಲಾಗಿದೆ ಎಂದರು.ನಾವು ಎಲ್ಲವನ್ನು ಎದುರಿಸಲು ಮಾನಸಿಕವಾಗಿ ಸಿದ್ದರಾಗಿರುವವರು. ನಮ್ಮ ಜೊತೆಯಲ್ಲಾದರೂ ಬರಬಹುದು, ನಮ್ಮ ಎದುರಾಗಿ ಆದರೂ ಬರಬಹುದು ಒಟ್ಟಿನಲ್ಲಿ ಎಲ್ಲವನ್ನು ಎದುರಿಸಲು ನಾವು ಸಿದ್ಧರಾಗಿದ್ದೇವೆ ಎಂದರು.
ಮಹಾ ರಾಜಕಾರಣಿಗಳಿಗಿಂತ ನಾವು ಪರಿಣತರು:
ಮಹಾರಾಷ್ಟ್ರ ರಾಜಕೀಯ ಪರಿಸ್ಥಿತಿಯಿಂದ ಕರ್ನಾಟಕ ಬಿಜೆಪಿ ಏನಾದರೂ ಪಾಠ ಕಲಿಯಬೇಕಾ ಎಂಬ ಈಟಿವಿ ಭರತ್ ಪ್ರಶ್ನೆಗೆ ಉತ್ತರಿಸಿದ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ್ ಕರ್ನಾಟಕ ಬಿಜೆಪಿಗರು ಈ ವಿಷಯದಲ್ಲಿ ಪರಿಣಿತರು, ಆವಿಷ್ಕಾರಗಳು ನಾವು ಮಾಡುತ್ತೇವೆ ಎಂದು ಹಾಸ್ಯ ಮಾಡಿದರು.
ರಸ್ತೆ ಗುಂಡಿಗಳು ಮುಗಿಯದ ಕತೆ, ಒಂದು ಕಡೆ ಮುಚ್ಚಿದರೆ ಇನ್ನೊಂದು ಕಡೆ ಗುಂಡಿಯಾಗುತ್ತದೆ ,ಇದೊಂದು ದೊಡ್ಡ ಸವಾಲಾಗಿದೆ. ರಸ್ತೆ ಗುಂಡಿಗಳು ಇಲ್ಲದ ರೀತಿ ನೋಡಿಕೊಳ್ಳಬೇಕಾಗುತ್ತದೆ ಎಂದು ಡಿಸಿಎಂ ತಿಳಿಸಿದ್ರು.