ಬೆಂಗಳೂರು: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಶಂಕಿತ ವ್ಯಕ್ತಿ ಕಾಣಿಸಿಕೊಂಡ ಪ್ರಕರಣ ಅತ್ಯಂತ ಸೂಕ್ಷ್ಮ ವಿಚಾರ. ಇದರ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತರಿಂದ ವಿವರಣೆ ಪಡೆದಿದ್ದೇನೆ ಎಂದು ಗೃಹಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನಿನ್ನೆ ಇಬ್ಬರು ವ್ಯಕ್ತಿಗಳಿದ್ರು. ಒಬ್ಬ ವ್ಯಕ್ತಿ ಮೆಟಲ್ ಡಿಟೆಕ್ಟರ್ ಮೂಲಕ ಹೋದಾಗ ಬೀಪ್ ಸೌಂಡ್ ಬಂದಿದೆ. ಮತ್ತೊಬ್ಬ ವ್ಯಕ್ತಿ ಹೋದಾಗ ಬೀಪ್ ಸದ್ದು ಬರಲಿಲ್ಲ. ಮತ್ತೊಮ್ಮೆ ಕರೆದಾಗ ಆ ವ್ಯಕ್ತಿ ಬರದೇ ಹೋಗಿ ಬಿಟ್ಟ ಅನ್ನುವ ಮಾಹಿತಿ ಕೊಟ್ರು. ಸುರಕ್ಷತೆ ದೃಷ್ಟಿಯಿಂದ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ ಎಂದ ಅವರು, ಮೆಟ್ರೋದಲ್ಲಿ ಖಾಸಗಿ ಭದ್ರತೆ ಇದೆ. ಆ ವ್ಯಕ್ತಿಯ ಹುಡುಕಾಟ ನಡೆದಿದೆ. ಪೊಲೀಸ್ ಇಲಾಖೆ ಎಚ್ಚರಿಕೆಯಿಂದ ಇದೆ ಎಂದಿದ್ದಾರೆ.
ತ್ರಿಭುಜ ದೋಣಿ ದುರಂತ ಪ್ರಕರಣ ಸಂಬಂಧ ಮಾತನಾಡಿ, ದುರಂತಕ್ಕೆ ಐಎನ್ಎಸ್ ಯುದ್ಧನೌಕೆ ಕಾರಣ ಎಂಬ ಆರೋಪ ಇದೆ. ಪ್ರಮೋದ್ ಮಧ್ವರಾಜ್ ಬಳಿ ಇರುವ ಮಾಹಿತಿಯೇ ನಮ್ಮ ಬಳಿಯೂ ಇದೆ. ಯುದ್ಧನೌಕೆಯು ದುರಂತಕ್ಕೆ ಕಾರಣ ಅನ್ನುವ ಶಂಕೆ ಇದೆ. ಅದನ್ನು ಧೃಢೀಕರಿಸಬೇಕಿದೆ. ಪೊಲೀಸ್ ಇಲಾಖೆಯಿಂದ ಇದರ ಬಗ್ಗೆ ಅಧಿಕೃತವಾಗಿ ಮಾಹಿತಿ ಕೇಳಿದ್ದೇವೆ. ಕೇಂದ್ರ ಸರ್ಕಾರದಿಂದ ಹೆಚ್ಚಿನ ಮಾಹಿತಿ ಪಡೆಯುವ ಪ್ರಕ್ರಿಯೆ ನಡೀತಿದೆ ಎಂದರು.
ಸಿದ್ದರಾಮಯ್ಯರೇ ಸಿಎಂ: ಸ್ಪಷ್ಟೀಕರಣ:
ಮತ್ತೊಮ್ಮೆ ಸಿದ್ದರಾಮಯ್ಯ ಸಿಎಂ ವಿಚಾರದಲ್ಲಿ ತಮ್ಮ ಹೇಳಿಕೆ ತಪ್ಪಾಗಿ ಪ್ರಸಾರ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಗೃಹ ಸಚಿವ ಎಂ.ಬಿ.ಪಾಟೀಲ್, ನಾನು ಹೇಳಿದ್ದೇ ಒಂದು ಮಾಧ್ಯಮಗಳಲ್ಲಿ ಪ್ರಸಾರ ಆಗಿದ್ದೇ ಇನ್ನೊಂದು. ಮಾಧ್ಯಮದವರ ಪ್ರಶ್ನೆಗೆ ನಾನು ಉತ್ತರ ಕೊಟ್ಟೆ. ಮಾಧ್ಯಮದವರ ಪ್ರಶ್ನೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗೋದ್ರಲ್ಲಿ ತಪ್ಪಿಲ್ಲ ಅಂದೆ. ಐದು ವರ್ಷ ಸಿದ್ದರಾಮಯ್ಯ ಉತ್ತಮ ಕೆಲಸ ಮಾಡಿದ್ದಾರೆ. ಅವರಿಗೆ ಮತ್ತೆ ಮುಖ್ಯಮಂತ್ರಿ ಆಗುವ ಎಲ್ಲ ಅರ್ಹತೆ ಇದೆ. ಆದರೆ ಈಗ ಸಮ್ಮಿಶ್ರ ಸರ್ಕಾರ ಇದೆ. ನಾವು ಜೆಡಿಎಸ್ಗೆ ಬೇಷರತ್ ಬೆಂಬಲ ಕೊಟ್ಟಿದ್ದೇವೆ ಎಂದು ಹೇಳಿದರು.
ನಾಲ್ಕು ವರ್ಷ ಸಮ್ಮಿಶ್ರ ಸರ್ಕಾರ ಮುಂದುವರೆಯುತ್ತದೆ. ಬಳಿಕ ಕಾಂಗ್ರೆಸ್ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲಿದೆ. ಸಿದ್ದರಾಮಯ್ಯ ಮತ್ತೆ ಸಿಎಂ ಆಗಲು ಅರ್ಹತೆ ಪಡೆದುಕೊಂಡಿದ್ದಾರೆ. ಮಧ್ಯದಲ್ಲಿ ಏನಾದರೂ ಆದರೆ ಅದರ ಬಗ್ಗೆ ವರಿಷ್ಠರು ತೀರ್ಮಾನ ತಗೋತಾರೆ. ಅಂಥದ್ದು ಯಾವುದೂ ಈಗ ನಡೆದಿಲ್ಲ. ನಾನು ಮಾತಾಡಿದ್ದರಲ್ಲಿ ನಿಮಗೆ ಬೇಕಾಗಿರುವುದನ್ನು ಮಾತ್ರ ಪ್ರಸಾರ ಮಾಡ್ತೀರ. ಅರ್ಧ ಪ್ರಸಾರ ಮಾಡಿ ಇನ್ನರ್ಧ ಬಿಟ್ರೆ ಅದು ತಪ್ಪು ಸಂದೇಶ ಕೊಟ್ಟಂತೆ. ಅಂಥ ಕೆಲಸವನ್ನು ದಯವಿಟ್ಟು ಮಾಡಬೇಡಿ. ಸಂಪೂರ್ಣ ಹೇಳಿಕೆ ಪ್ರಸಾರ ಮಾಡಿ. ನಮ್ಮ ಸುರಕ್ಷತೆಗೆ ಇನ್ಮುಂದೆ ನಾವೂ ರೆಕಾರ್ಡ್ ಮಾಡಿಕೊಳ್ಳಬೇಕಾಗುತ್ತದೆ ಎಂದು ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದರು.