ಬೆಂಗಳೂರು: ಸುಮ್ಮನೆ ಶಾಸಕರು ಕ್ಷೇತ್ರದಲ್ಲಿ ಮದುವೆಗೆ ಭಾಗಿಯಾಗುವುದು, ಟೇಪ್ ಕಟ್ ಮಾಡ್ಕೊಂಡು ಇದ್ರೆ ಆಗಲ್ಲ. ಬೂತ್ ಮಟ್ಟಕ್ಕೆ ಹೋಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಸದಾಶಿವನಗರದ ನಿವಾಸದಲ್ಲಿ ಮಾತನಾಡಿದ ಅವರು, ಶಾಸಕರು ಏನೇನು ಮಾಡಬೇಕು ಅಂತ ಸುರ್ಜೆವಾಲಾ ಟಾರ್ಗೆಟ್ ಕೊಟ್ಟಿದ್ದಾರೆ. ಕೆಲಸ ಮಾಡದವರಿಗೆ ಯಾಕ್ರೀ ಟಿಕೆಟ್ ಕೊಡಕ್ಕಾಗತ್ತದೆ?.. ನನಗೆ ನಂಬರ್ ಬೇಕು, ನಮ್ಮ ಸರ್ಕಾರ ರಚನೆಯಾಗಬೇಕು. ಬೂತ್ ಮಟ್ಟಕ್ಕೆ ಹೋಗಿ ಕೆಲಸ ಮಾಡಬೇಕು ಅನ್ನೋದು ನನ್ನ ಕಾನ್ಸೆಪ್ಟ್. ಆ ರೀತಿ ಕೆಲಸ ಮಾಡಿದರೆ ಮಾತ್ರ ಸಂಘಟನೆ ಆಗುತ್ತದೆ ಎಂದು ಡಿಕೆಶಿ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಇಡಿ ವಿಚಾರಣೆಗೆ ಹಾಜರಾಗುತ್ತೇನೆ ಎಂದ ಡಿಕೆಶಿ: ನಾನು ದೆಹಲಿಗೆ ಹೋಗಿ ಇಡಿ ವಿಚಾರಣೆಗೆ ಹಾಜರಾಗ್ತೇನೆ. ಯಾವ ಕಾರಣಕ್ಕೆ ಹೊಸದಾಗಿ ನೋಟಿಸ್ ಕೊಟ್ಟಿದ್ದಾರೋ ಗೊತ್ತಿಲ್ಲ. ಅವರ ಬಳಿ ಎಲ್ಲ ಡಿಟೇಲ್ಸ್ ಇತ್ತು. ಆದರೂ ನೋಟಿಸ್ ಬಂದಿದೆ ಎಂದರು.
ನಾನು ಅಟೆಂಡ್ ಆಗದೇ ಇರಬಹುದಿತ್ತು. ಆದರೆ ಓಡಿ ಹೋದಂತಾಗುತ್ತದೆ. ಹಾಗೆ ಮಾಡುವುದಕ್ಕೆ ನಾನು ತಯಾರಿಲ್ಲ. ಮೈಸೂರಿನಿಂದ ಬಂದ ಬಳಿಕ ದೆಹಲಿಗೆ ಹೋಗ್ತೇನೆ. ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ನೋಟೀಸ್ ಕೊಟ್ಟಿದ್ದರು. ನಾನು ಅದರ ವಿರುದ್ಧ ಕೋರ್ಟ್ಗೆ ಹೋಗಿದ್ದೆ. ಆದರೆ ಈಗ ಮತ್ತೆ ಯಾಕೆ ಹೊಸ ನೊಟೀಸ್ ಕೊಟ್ಟಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದರು.
ಬಳ್ಳಾರಿಯಲ್ಲಿ ದೊಡ್ಡ ಸಮಾವೇಶ: ಬಳ್ಳಾರಿ ಭಾಗದಲ್ಲಿ ದೊಡ್ಡ ಸಮಾವೇಶ ಆಯೋಜನೆ ಆಗ್ತಾ ಇದೆ. ಪ್ರಿಯಾಂಕಾ ಗಾಂಧಿ ಬರುತ್ತಾರೆ ಎಂಬ ಮಾಹಿತಿ ಇದೆ. ನನ್ನ ಕೆಲಸದ ವೇಗ ಜಾಸ್ತಿ ಇರಬಹುದು ಅಷ್ಟೇ. ಎಲ್ಲ ನನ್ನೊಬ್ಬನ ಕೈಯ್ಯಲ್ಲೇ ಮಾಡೋದಕ್ಕಾಗಲ್ಲ ಎಂದು ಇದೇ ವೇಳೆ ತಿಳಿಸಿದರು.
ಸಂಘಟನೆ ಬಹಳ ಮುಖ್ಯ. ಯಾವ ಅಸಹಕಾರವೂ ಇಲ್ಲ. ಅಸೆಂಬ್ಲಿಯಲ್ಲಿ ಸಿದ್ದರಾಮಯ್ಯ ಮಾತ್ರ ವಿರೋಧ ಪಕ್ಷದ ಕೆಲಸ ಮಾಡಕ್ಕಾಗತ್ತಾ?. ನನ್ನನ್ನೂ ಸೇರಿದಂತೆ ಎಲ್ಲ ಎಂಎಲ್ಎಗಳೂ ಸಹಕರಿಸಬೇಕು. ಆಗ ಮಾತ್ರ ವಿರೋಧ ಪಕ್ಷವಾಗಿ ನಾವು ಕೆಲಸ ಮಾಡಬಹುದು ಎಂದು ಡಿಕೆಶಿ ಕಿವಿಮಾತು ಹೇಳಿದರು.
ಓದಿ:ಸಿಬಿಐ ಅಕ್ರಮ ಆಸ್ತಿ ಸಂಪಾದನೆ ಕೇಸ್ ದಾಖಲಿಸಿದೆ.. ಇಡಿ ಯಾವ ಎಫ್ಐಆರ್ ಹಾಕಿದೆ ಗೊತ್ತಿಲ್ಲ: ಡಿಕೆಶಿ