ಬೆಂಗಳೂರು: ರಾಮನಗರದ ಜೈಲಿನಲ್ಲಿದ್ದ ಐವರಿಗೆ ಕೊರೊನಾ ಸೋಂಕು ತಗುಲಿದ್ದು, ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಿದ್ದೇವೆ. ಉಳಿದ ಆರೋಪಿಗಳನ್ನು ಹಜ್ ಭವನಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ವಿಧಾನಸೌಧದಲ್ಲಿ ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾಧ್ಯಮದವರಿಗೆ ಮಾಹಿತಿ ನೀಡಿದ ಅವರು, ರಾಮನಗರ ಜೈಲಿನಲ್ಲಿದ್ದ ಪಾದರಾಯನಪುರ ಪ್ರಕರಣದ 112 ಆರೋಪಿಗಳನ್ನು ಪರೀಕ್ಷೆ ಮಾಡಿಸಿದ್ದೇವೆ. ಮೊದಲು ಎರಡು, ಈಗ ಮೂರು ಜನರಿಗೆ ಪಾಸಿಟಿವ್ ಬಂದಿದೆ. ಈ ಐವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರ ಮಾಡಿದ್ದೇವೆ. ಉಳಿದವರನ್ನು ಹಜ್ ಭವನಕ್ಕೆ ಕಳಿಸಲಾಗಿದೆ ಎಂದು ತಿಳಿಸಿದರು.
ಈ ಕುರಿತಂತೆ ಇಂದು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ರಾಮನಗರ ಜೈಲಿನ ಸಿಬ್ಬಂದಿಗೂ ಕ್ವಾರಂಟೈನ್ ಮಾಡಲಾಗುವುದು. ಎಲ್ಲೆಲ್ಲಿ ಕಂಟೈನ್ಮೆಂಟ್ ಝೋನ್ ಇತ್ತೋ ಅಲ್ಲೆಲ್ಲ ಹೆಚ್ಚಿನ ತಪಾಸಣೆಗೆ ನಿರ್ಧರಿಸಿದ್ದೇವೆ. ಇದಕ್ಕೆ ಗೃಹ ಇಲಾಖೆ ಮಾಡಿದ ಯಡವಟ್ಟು ಎನ್ನುವ ಆರೋಪವನ್ನು ನಾನು ಒಪ್ಪುವುದಿಲ್ಲ. ಸುಪ್ರೀಂಕೋರ್ಟ್ ಆದೇಶವಿದೆ. ಹೆಚ್ಚಿನ ಕೈದಿಗಳು ಇರುವ ಜಾಗದಲ್ಲಿ ಅವರನ್ನು ಇಡೋದು ಬೇಡವೆಂದು ನಿರ್ಧರಿಸಲಾಗಿತ್ತು. ನಾನು ಈ ಮೊದಲು ಕುಮಾರಸ್ವಾಮಿಯವರಿಗೂ ಹೇಳಿದ್ದೆ. ಪರೀಕ್ಷೆ ಮಾಡಿಸಿದ ಬಳಿಕ ಪಾಸಿಟಿವ್ ಬಂದಿದೆ. ಹೀಗಾಗಿ ಅಲ್ಲಿಂದ ಸ್ಥಳಾಂತರ ಮಾಡಿದ್ದೇವೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.