ಬೆಂಗಳೂರು : ಶಿರಾ ಕ್ಷೇತ್ರದಲ್ಲಿ ನಮ್ಮ ಶಾಸಕರಾಗಿದ್ದ ಸತ್ಯನಾರಾಯಣ ಅವರ ನಿಧನದಿಂದ ಉಪ ಚುನಾವಣೆ ಎದುರಾಗುತ್ತಿದೆ. ನಮ್ಮ ಪಕ್ಷದ ಹಿಡಿತದಲ್ಲಿದ್ದ ಕ್ಷೇತ್ರ ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಜೆಡಿಎಸ್ ಮುಖಂಡರೊಂದಿಗೆ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಸಭೆ ನಡೆಸಿದ ವೇಳೆ ಮಾತನಾಡಿದ ಅವರು, ಕಾರ್ಯಕರ್ತರು ಬಹಳ ಉತ್ಸಾಹದಿಂದ ಕೆಲಸ ಮಾಡಬೇಕಿದೆ. ರಾಷ್ಟ್ರೀಯ ಪಕ್ಷಗಳ ಯಾವುದೇ ಆಮಿಷಗಳಿಗೆ ಬಲಿಯಾಗಬೇಡಿ.
ಪ್ರಾದೇಶಿಕ ಪಕ್ಷದ ಶಕ್ತಿ ಉಳಿಸಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ. ಯಾರನ್ನು ಅಭ್ಯರ್ಥಿ ಮಾಡಬೇಕು ಎಂಬುದನ್ನು ವರಿಷ್ಠರು ನಿರ್ಧಾರ ಮಾಡುತ್ತಾರೆ. ಯಾರೇ ಅಭ್ಯರ್ಥಿ ಆದರೂ ಕಾರ್ಯಕರ್ತರು ಅವರ ಕೈ ಬಲಪಡಿಸುವ ಕೆಲಸ ಮಾಡಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಈ ಉಪಚುನಾವಣೆ ನಮಗೆ ಅತ್ಯಂತ ದೊಡ್ಡ ಮಟ್ಟದ ಸತ್ವ ಪರೀಕ್ಷೆ. ನಾನು ಎರಡು ಬಾರಿ ಸಿಎಂ ಆಗಿದ್ದೆ. ಎಂದೂ ಪಾಪದ ಹಣವನ್ನು ಮಾಡಿಲ್ಲ. ಪಕ್ಷದಲ್ಲಿ ಯಾವುದೇ ಸಮಸ್ಯೆ ಇದ್ದರೂ ಮೈಮೇಲೆ ಎಳೆದುಕೊಂಡು ಕೆಲಸ ಮಾಡಿದ್ದೇನೆ. ಶಿರಾ ಕ್ಷೇತ್ರದಲ್ಲಿ ಹಣದ ಮೇಲೆ ಎಂದೂ ಚುನಾವಣೆ ನಡೆದಿಲ್ಲ. ದೇವೇಗೌಡರ ಮೇಲಿನ ಅಭಿಮಾನದಿಂದ ಕೆಲಸ ಮಾಡುತ್ತಿದ್ದೀರಿ, ಇಂದು ನಮಗೆ ನಿಜಕ್ಕೂ ಅಗ್ನಿ ಪರೀಕ್ಷೆ ಎದುರಾಗಿದೆ.
ಬಿಜೆಪಿಯಿಂದ ನಾಯಕರ ದಂಡೇ ಅಲ್ಲಿ ಬೀಡು ಬಿಟ್ಟಿದೆ. ಚುನಾವಣೆ ಎದುರಿಸುವುದಕ್ಕಾಗಿ ಈಗಾಗಲೇ ಹಲವು ಘೋಷಣೆ ಮಾಡುತ್ತಿದ್ದಾರೆ. ದೇವಾಲಯಗಳಿಗೆ ಹಣ ಕೊಡುತ್ತಿದ್ದಾರೆ. ನಮ್ಮ ಜನರು ಬಿಜೆಪಿಯ ಆಮಿಷಕ್ಕೆ ಒಳಗಾಗಬಾರದು. ಕಾಂಗ್ರೆಸ್, ಬಿಜೆಪಿಯಲ್ಲಿ ಸಿದ್ಧತೆ ನಡೆದಿದೆ. ಆದರೆ, ಜೆಡಿಎಸ್‌ನಲ್ಲಿ ಅದಾಗುತ್ತಿಲ್ಲ ಎಂಬ ವರದಿ ಬರುತ್ತಿವೆ ಎಂದರು.
ನನಗೆ ಎರಡು ಬಾರಿ ಹೃದಯ ಚಿಕಿತ್ಸೆ ಆಗಿದೆ. ಈಗ ನನಗೆ ಹೊರಗೆ ಹೋಗಲು ವೈದ್ಯರು ಬಿಡುತ್ತಿಲ್ಲ. ಹೊರಗೆ ಹೋಗಲೇಬೇಡಿ ಎಂದು ನಮ್ಮ ವೈದ್ಯರು ಡಾ. ಮಂಜುನಾಥ್ ಹೇಳಿದ್ದಾರೆ. ಹಾಗಾಗಿ, ನಾನು ಎಲ್ಲೂ ಹೋಗಲು ಆಗುತ್ತಿಲ್ಲ. ಟಿಕೇಟ್ ಅನೌನ್ಸ್ ಮಾಡಲು ಇಂದು ಸಭೆ ಕರೆದಿಲ್ಲ. ನಿಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಭೆ ಕರೆದಿದ್ದೇನೆ. ಈ ಚುನಾವಣೆಯನ್ನು ಗೆಲ್ಲಲೇಬೇಕು. ತಾಯಿ, ಮಕ್ಕಳ ರೀತಿ ಒಂದೇ ಧ್ವನಿಯಾಗಿ ಕೆಲಸ ಮಾಡಬೇಕು. ಹೀಗೆ ಮಾಡಿದಾಗ ಮಾತ್ರ ನಮ್ಮ ಗೆಲುವು ಸಾಧ್ಯ ಎಂದು ಹೇಳಿದರು.
ನಾನು ಎರಡು ಬಾರಿ ಆಕಸ್ಮಿಕವಾಗಿ ಸಿಎಂ ಆಗಿದ್ದೇನೆ. ಮುಂದಿನ ದಿನಗಳಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರುತ್ತೇವೆ ಎಂಬ ವಿಶ್ವಾಸ ನನಗಿದೆ. ಸಿಎಂ ಆಗಿದ್ದಾಗ ನನ್ನ ಕಡೆಯಿಂದ ಕಾರ್ಯಕರ್ತರಿಗೆ ಏನೂ ಮಾಡಲು ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮೈತ್ರಿ ಸರ್ಕಾರದಲ್ಲಿ ಗುಮಾಸ್ತನ ರೀತಿ ಕೆಲಸ ಮಾಡುವಂತಾಯಿತು. ಕಾಂಗ್ರೆಸ್‌ನವರು ನನ್ನನ್ನು ಗುಮಾಸ್ತನ ರೀತಿ ನಡೆಸಿಕೊಂಡರು. ನಮ್ಮ ಕಾರ್ಯಕರ್ತರು ಕಾಂಗ್ರೆಸ್ ಜೊತೆ ಹೋಗಬೇಡಿ ಎಂದಿದ್ದರು. ಆದರೂ ಅನಿವಾರ್ಯವಾಗಿ ಹೋಗಬೇಕಾಯಿತು ಎಂದು ಹೇಳಿದರು.
ಆಕಾಂಕ್ಷಿಗಳ ಜೊತೆ ಹೆಚ್ಡಿಕೆ ಪ್ರತ್ಯೇಕ ಮಾತುಕತೆ : ಶಿರಾ ಕ್ಷೇತ್ರದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಯುತ್ತಿದ್ದ ವೇಳೆ ತಮ್ಮ ಬೆಂಬಲಿಗರಿಗೆ ಟಿಕೇಟ್ ನೀಡುವಂತೆ ಘೋಷಣೆ ಕೂಗಿದ ಪರಿಣಾಮ ಅನಿವಾರ್ಯವಾಗಿ ಪ್ರತ್ಯೇಕ ಕೊಠಡಿಯಲ್ಲಿ ಟಿಕೇಟ್ ಆಕಾಂಕ್ಷಿಗಳ ಜೊತೆ ಹೆಚ್ಡಿಕೆ ಚರ್ಚೆ ನಡೆಸಿದರು.
ಮಾಜಿ ಸಚಿವ ದಿ. ಸತ್ಯನಾರಾಯಣ ಪುತ್ರ ಸತ್ಯಪ್ರಕಾಶ್, ರವಿಕುಮಾರ್, ಉಗ್ರೇಶ್, ಸಿ.ಆರ್ ಉಮೇಶ್ ಸೇರಿದಂತೆ ಹಲವರ ಜೊತೆ ಚರ್ಚೆ ನಡೆಸಿ ಟಿಕೇಟ್ ಆಕಾಂಕ್ಷಿಗಳಲ್ಲಿ ಒಮ್ಮತ ಮೂಡಿಸಲು ಕಸರತ್ತು ನಡೆಸಿದರು.