ಬೆಂಗಳೂರು: ಎಸ್ಡಿಪಿಐ ಹಾಗೂ ಪಿಎಫ್ಐ ನಿಷೇಧ ಮಾಡುವ ಅಗತ್ಯತೆ ಕುರಿತು ಕೇಂದ್ರ ನಾಯಕರ ಗಮನಕ್ಕೆ ತಂದಿದ್ದೇವೆ. ಈ ಬಗ್ಗೆ ಕೇಂದ್ರದ ನಾಯಕರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ತಿಳಿಸಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲೆಲ್ಲಿ ಉಗ್ರಗಾಮಿಗಳು ಸಿಕ್ಕಿದ್ದಾರೆ ಅವರೆಲ್ಲರೂ ಮುಸ್ಲಿಮರೇ. ಬಂಧನವಾಗಿರುವ ಉಗ್ರಗಾಮಿಗಳು ಮುಸ್ಲಿಂ ಸಮುದಾಯದವರಾದರೂ ಎಲ್ಲ ಮುಸ್ಲಿಮರು ಉಗ್ರಗಾಮಿಗಳು ಎಂದು ನಾನು ಹೇಳುವುದಿಲ್ಲ ಎಂದು ಹೇಳಿದರು.
ಉಗ್ರಗ್ರಾಮಿಗಳನ್ನು ಬೆಳಸಬೇಡಿ ಎಂದು ನಾವು ಕಾಂಗ್ರೆಸ್ಗೆ ಹೇಳುತ್ತಾ ಬಂದಿದ್ದೇವೆ. ಕಾಂಗ್ರೆಸ್ ಈ ವಿಚಾರದಲ್ಲಿ ಗಮನ ಕೊಡದಿದ್ದರೆ ದೇಶದ್ರೋಹಿಗಳಿಗೆ ಬೆಂಬಲ ಕೊಟ್ಟಂತೆ ಆಗುತ್ತದೆ. ಕೇವಲ ಮುಸ್ಲಿಮರ ಮತ ಲೆಕ್ಕದಲ್ಲಿ ಇಟ್ಕೊಂಡು ಉಗ್ರಗಾಮಿ ಚಟುವಟಿಕೆ ಖಂಡನೆ ಮಾಡಲಿಲ್ಲ ಅಂದರೆ ಕಾಂಗ್ರೆಸ್ ಕೂಡ ಸರ್ವನಾಶ ಆಗುತ್ತದೆ ಎಂದರು.
ದೇಶಭಕ್ತ ಮುಸ್ಲಿಮರು ಬಹಳಷ್ಟು ಜನರು ಇದ್ದಾರೆ. ಉಗ್ರಗಾಮಿ ಮುಸ್ಲಿಮರನ್ನು ಮಟ್ಟ ಹಾಕಲು ನಾವೆಲ್ಲರೂ ಒಂದಾಗಬೇಕು. ಪಿಎಫ್ಐ ಸಂಘಟನೆ ಬ್ಯಾನ್ ಮಾಡಲು ಚರ್ಚೆ ಮಾಡಿದ್ದೇವೆ. ಬ್ಯಾನ್ ಮಾಡುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ ಮಾತ್ರವೇ. ಹಾಗಾಗಿ ಎಸ್ಡಿಪಿಐ ಹಾಗೂ ಪಿಎಫ್ಐ ಬ್ಯಾನ್ ಮಾಡಲು ಕೇಂದ್ರ ನಾಯಕರ ಗಮನಕ್ಕೆ ತಂದಿದ್ದೇವೆ ಎಂದು ವಿವರಿಸಿದರು.
ಮೊನ್ನೆ ಶಿವಮೊಗ್ಗದಲ್ಲಿ ಮೂರು ಜನ ಉಗ್ರಗಾಮಿಗಳು ಅರೆಸ್ಟ್ ಆದ್ರಲ್ವಾ, ಅವರು ಬಿಜೆಪಿಯವರಾ?. ಅವರಿಗೆ ಕುಮ್ಮಕ್ಕು ಕೊಟ್ಟಿದ್ದು ಯಾರು?. ರಾಷ್ಟ್ರದ್ರೋಹಿಗಳೋ ಅಥವಾ ರಾಷ್ಟ್ರ ಭಕ್ತರೋ ಎನ್ನುವ ಮನಸ್ಥಿತಿ ಅರ್ಥವಾಗಬೇಕು. ದೇಶದ್ರೋಹ ಮಾಡುವವರು ದೇಶ ಪ್ರೇಮಿಗಳ ಮೇಲೆ ಕಚ್ಚಾ ಬಾಂಬ್ ತಯಾರಿಸಿ ಎಸೆಯುತ್ತಾರೆ. ಇಲ್ಲಿ ನಾವು ಬಿಜೆಪಿ, ಜೆಡಿಎಸ್. ಕಾಂಗ್ರೆಸ್ ಅಂತ ಕಿತ್ತಾಡಬಾರದು. ಕೇವಲ ಮುಸಲ್ಮಾನರ ವೋಟ್ಗೆ ಹೀಗೆ ಕಿತ್ತಾಡಿದರೆ ರಾಷ್ಟ್ರ ದ್ರೋಹ ಕೆಲಸ ಮಾಡದಂಗೆ ಆಗುತ್ತದೆ ಎಂದೂ ಹೇಳಿದರು.
ಇದನ್ನೂ ಓದಿ: ಕೋಮುವಾದ, ಹಿಂಸಾಚಾರ ಎಲ್ಲಿಂದ ಬಂದರೂ ಒಂದೇ ಆಗಿರುತ್ತದೆ: ಪಿಎಫ್ಐ ಮೇಲೆ ಎನ್ಐಎ ದಾಳಿ ಕುರಿತು ರಾಹುಲ್ ಸ್ಪಷ್ಟ ನುಡಿ