ಬೆಂಗಳೂರು: ನಾವು ಹೊಸದಾಗಿ ಸಹಿ ಸಂಗ್ರಹ ಮಾಡಿದ್ದೇವೆ, ಇದರಲ್ಲಿ ಅರವಿಂದ ಬೆಲ್ಲದ್ ಸಹಿ ಇಲ್ಲ, ಸಚಿವರ ಸಹಿಯೂ ಇಲ್ಲ ಕೇವಲ ಶಾಸಕರ ಸಹಿ ಮಾತ್ರ ಇದೆ ಎಂದು, ಶಾಸಕರ ಸಹಿ ಪ್ರತಿ ಹಳೆಯದು ಎನ್ನುವ ಬೆಲ್ಲದ್ ಹೇಳಿಕೆಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.
ಸಿಎಂ ನಿವಾಸ ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಸಚಿವ ಈಶ್ಚರಪ್ಪ ವಿಚಾರಕ್ಕೆ ಸಂಬಂಧಿಸಿದಂತೆ ಅಂದು ಸಹಿ ಮಾಡಿದ್ದ ಶಾಸಕರ ಪತ್ರವನ್ನು ಅಂದೇ ಸಿಎಂಗೆ ಕೊಟ್ಟಿದ್ದೇವೆ. ಈಗ ಈ ವಿಚಾರ ಮಾತನಾಡಿರುವ ಶಾಸಕರು ದೊಡ್ಡವರು, ಮುಖ್ಯಮಂತ್ರಿಗಳ ರೇಸ್ನಲ್ಲಿ ಇರುವವರು (ಬೆಲ್ಲದ್), ಅವರ ಬಗ್ಗೆ ನಾವು ಮಾತನಾಡಿದರೆ ಸಣ್ಣವರಾಗುತ್ತೇವೆ.
ಅವರು ಮುಖ್ಯಮಂತ್ರಿಗಳಾಗುವವರು ಎಂದು ಬಿಂಬಿಸಿಕೊಳ್ಳುತ್ತಿರುವವರು, ನಾನು ಮುಂದಿನ ಸಿಎಂ ಎಂದು ಜೇಬಲ್ಲಿ ಚೀಟಿ ಇಟ್ಕೊಂಡು ಓಡಾಡುವವರು, ನಾನು ಅವರ ಹೆಸರು ಹೇಳಲಿಲ್ಲ. ಅವರ್ಯಾಕೆ ನಮ್ ವಿಚಾರಕ್ಕೆ ಬರ್ತಾರೆ ಎಂದು ಅರವಿಂದ ಬೆಲ್ಲದ್ ಹೇಳಿಕೆಗೆ ರೇಣುಕಾಚಾರ್ಯ ತಿರುಗೇಟು ನೀಡಿದರು.
ಅರವಿಂದ್ ಬೆಲ್ಲದ್ ತಮ್ಮ ಪಕ್ಕದ ಕ್ಷೇತ್ರ ಗೆಲ್ಲಿಸಿಕೊಂಡು ಬರಲಿ ನೋಡೋಣ, ಹಾಗೊಂದು ವೇಳೆ ಗೆಲ್ಲಿಸಿಕೊಂಡು ಬಂದಲ್ಲಿ ಸಿಎಂ ಅಭ್ಯರ್ಥಿ ಎಂದು ನಾನು ಒಪ್ಪಿಕೊಳ್ಳುತ್ತೇನೆ ಎಂದು ಸವಾಲೆಸೆದರು. ಯಡಿಯೂರಪ್ಪ ಪರ ಹೈಕಮಾಂಡ್ ಬೆಂಬಲ ಇದೆ, ಅರವಿಂದ ಬೆಲ್ಲದ್ ಸಹಿ ನಮ್ ಶಾಸಕರ ಸಹಿ ಪತ್ರದಲ್ಲಿಲ್ಲ. ಈಗ ನಾವು ಹೊಸದಾಗಿ ಸಹಿ ಸಂಗ್ರಹ ಮಾಡಿದ್ದೇವೆ. ಇದು ಹಳೆಯ ಸಹಿ ಸಂಗ್ರಹ ಅಲ್ಲ, ಹೊಸ ಸಹಿ ಸಂಗ್ರಹ ಎಂದು ಶಾಸಕರ ಸಹಿ ಇರುವ ಪ್ರತಿಯನ್ನು ತೋರಿಸಿದರು.
ನಾನೇನು ಬ್ಲಾಕ್ ಮೇಲ್ ಮಾಡ್ತಿಲ್ಲ, 65ಕ್ಕೂ ಹೆಚ್ಚು ಶಾಸಕರು ಸಹಿ ಸಂಗ್ರಹ ಮಾಡೋದು ನಿಜ. ಆ ಸಂಗ್ರಹದ ವರದಿ ನನ್ನ ಬಳಿ ಇದೆ, ನಾನು ಪಕ್ಷ ಸಂಘಟನೆ ವಿರುದ್ದ ಸಹಿ ಸಂಗ್ರಹ ಮಾಡಿದರೆ ತಪ್ಪು. ಆದರೆ ನಾನು ಸಹಿ ಸಂಗ್ರಹ ಮಾಡಿದ್ದು ನಮ್ಮ ನಾಯಕರ ಪರ, ಯಡಿಯೂರಪ್ಪಗೆ ನಮ್ಮ ಬೆಂಬಲ ಎಂಬ ಸಹಿ ಸಂಗ್ರಹ ಮಾಡಿದ್ದೇವೆ. ನಾವು ಆರ್.ಅಶೋಕ್ ಸಹಿ ಸಹ ಪಡೆದಿಲ್ಲ, ಡಿಸಿಎಂಗಳು, ಸಚಿವರ ಸಹಿ ಪಡೆಯುತ್ತಿಲ್ಲ ಎಂದು ಸಚಿವ ಆರ್.ಅಶೋಕ್ಗೂ ತಿರುಗೇಟು ನೀಡಿದರು.