ಬೆಂಗಳೂರು: ನಗರದ ಬಸವನಗುಡಿಯ ಎನ್.ಆರ್. ಕಾಲನಿ ಬಸ್ ನಿಲ್ದಾಣದ ಬಳಿ ಸ್ಕೈವಾಕ್ ನಿರ್ಮಾಣ ಕಾಮಗಾರಿಗಾಗಿ ಯಾವುದೇ ಮರಗಳನ್ನು ಕಡಿದಿಲ್ಲ ಅಥವಾ ತೆರವು ಮಾಡಿಲ್ಲ ಎಂದು ಬಿಬಿಎಂಪಿ ಹೈಕೋರ್ಟ್ಗೆ ಸ್ಪಷ್ಟಪಡಿಸಿದೆ.
ಸ್ಕೈವಾಕ್ ನಿರ್ಮಾಣಕ್ಕಾಗಿ ಮರಗಳನ್ನು ಕತ್ತರಿಸಲಾಗಿದೆ ಹಾಗೂ ಫುಟ್ ಪಾತ್ ಒತ್ತುವರಿಯಾಗಿದ್ದರೂ ಅದರ ನಡುವೆಯೇ ಕಾಮಗಾರಿ ನಡೆಸಲಾಗುತ್ತಿದೆ ಎಂದು ಆಕ್ಷೇಪಿಸಿ, ನಗರದ ವಕೀಲ ಪ್ರಶಾಂತ್ ರಾವ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ ಬಿಬಿಎಂಪಿ ಪರ ವಕೀಲ ವಿ. ಶ್ರೀನಿಧಿ, ಈ ಹಿಂದೆ ಎನ್.ಆರ್. ಕಾಲನಿಯ ಜನರು ಸ್ಕೈವಾಕ್ ನಿರ್ಮಾಣಕ್ಕಾಗಿ ಮನವಿ ಸಲ್ಲಿಸಿದ್ದರು. ಸ್ಥಳಕ್ಕೆ ತೆರಳಿ ಪರಿಶೀಲಿಸಿದ ನಂತರವೇ ಅಲ್ಲಿನ ಬಸ್ ನಿಲ್ದಾಣದ ಬಳಿ ಸ್ಕೈವಾಕ್ ಅಗತ್ಯತೆ ಮನಗಂಡು ಕಾಮಗಾರಿ ಆರಂಭಿಸಲಾಗಿದೆ. ಆದರೆ, ಅದಕ್ಕಾಗಿ ಯಾವುದೇ ಮರಗಳನ್ನು ಕತ್ತರಿಸಿಲ್ಲ ಅಥವಾ ಸ್ಥಳಾಂತರಿಲ್ಲ. ಕಾಮಗಾರಿ ನಡೆಸಲು ಮರಗಳ ಕೆಲ ರೆಂಬೆಗಳನ್ನಷ್ಟೇ ಕತ್ತರಿಸಲಾಗಿದೆ ಎಂದು ಫೋಟೋ ಸಹಿತ ಪೀಠಕ್ಕೆ ವಿವರಣೆ ನೀಡಿದರು.
ಜತೆಗೆ, ಪೀಠ ಹಿಂದಿನ ವಿಚಾರಣೆ ವೇಳೆ ನೀಡಿದ್ದ ಸೂಚನೆಯಂತೆ ಪಾಲಿಕೆ ಅಧಿಕಾರಿಯೊಬ್ಬರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅದರಂತೆ, ಅಲ್ಲಿ ಯಾವುದೇ ರೀತಿಯ ಒತ್ತುವರಿಯಾಗಿಲ್ಲ. ಫುಟ್‌ಪಾತ್ ಮೇಲೆ ಸ್ಕೈವಾಕ್‌ನ ಕಂಬಗಳನ್ನು ನಿರ್ಮಿಸಲಾಗಿದ್ದು, ಅದರಿಂದ ಪಾದಚಾರಿಗಳ ಸಂಚಾರಕ್ಕೆ ಯಾವುದೇ ತೊಂದರೆಯಾಗಿಲ್ಲ. ಸಾರ್ವಜನಿಕರು ಸುಲಭವಾಗಿ ಹಾಗೂ ಸುರಕ್ಷಿತವಾಗಿ ರಸ್ತೆ ದಾಟಲು ಅನುಕೂಲವಾಗಲೆಂದು ಸ್ಕೈವಾಕ್ ನಿರ್ಮಿಸಲಾಗುತ್ತಿದೆ. ಈಗಾಗಲೇ ಶೇ. 80ರಷ್ಟು ಕಾಮಗಾರಿ ನಡೆದಿದೆ ಎಂದು ತಿಳಿಸಿದರು.
ಲಿಖಿತ ಹೇಳಿಕೆ ದಾಖಲಿಸಿಕೊಂಡ ಪೀಠ, ಬಿಬಿಎಂಪಿ ಮಾಹಿತಿಗೆ ಪ್ರತಿ ಆಕ್ಷೇಪಣೆಗಳಿದ್ದರೆ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚಿಸಿ ವಿಚಾರಣೆಯನ್ನು ಡಿಸೆಂಬರ್ 7ಕ್ಕೆ ಮುಂದೂಡಿತು.