ಬೆಂಗಳೂರು: ಶಿರಾದ ಮದಲೂರು ಕೆರೆಗೆ ನೀರು ಹರಿಸುವ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಪರಿವರ್ತಿಸುತ್ತೇವೆ ಎಂದು ಕೇಂದ್ರ ಸಮಾಜ ಕಲ್ಯಾಣ ಇಲಾಖೆ ರಾಜ್ಯ ಖಾತೆ ಸಚಿವ ನಾರಾಯಣಸ್ವಾಮಿ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಚಿವ ಮಾಧುಸ್ವಾಮಿ, ಶಿರಾದ ಮದಲೂರು ಕೆರೆಗೆ ನೀರು ಬಿಡೋದಿಲ್ಲ ಅನ್ನುವ ಹೇಳಿಕೆ ನೀಡಿರುವ ವಿಚಾರ ಗಮನಕ್ಕೆ ಬಂದಿದೆ. ನಿನ್ನೆಯೂ ನೀರು ಬಿಟ್ಟಿದ್ದೇವೆ. ನಾಳೆಯೂ ಬಿಡುತ್ತೇವೆ. ನೀರು ಬಿಡುವುದು ಖಚಿತ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಂತಿಮ ನಿರ್ಧಾರ ಮಾಡುತ್ತಾರೆ. ಇದಕ್ಕೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.
ಸಣ್ಣ ನೀರಾವರಿ ಖಾತೆ ನಿರ್ವಹಿಸುತ್ತಿರುವ ಸಚಿವ ಮಾಧುಸ್ವಾಮಿ ಅವರು ತುಮಕೂರು ಜಿಲ್ಲೆಯ ವಿಚಾರ ಮಾತ್ರ ಮಾತನಾಡಿದ್ದಾರೆ. ಆದರೆ, ನಾವು ಮದಲೂರು ಕೆರೆಗೆ ನೀರು ಹರಿಸುವ ಯೋಜನೆಯನ್ನು ನ್ಯಾಷನಲ್ ಪ್ರಾಜೆಕ್ಟ್ ಆಗಿ ಮಾಡುತ್ತೇವೆ. ಎತ್ತಿನ ಹೊಳೆ ಅಥವಾ ಹೇಮಾವತಿ ನದಿಯಿಂದ ನೀರು ಬಿಡಿಸುವ ಕೆಲಸ ಮಾಡುತ್ತೇವೆ ಎಂದರು.
ಕಾಂಗ್ರೆಸ್ ದಲಿತರಿಗೆ ಅಧಿಕಾರ ನೀಡಿಲ್ಲ:
ಕೇಂದ್ರದ ಮೋದಿ ಸಂಪುಟದಲ್ಲಿ ನನಗೆ ಅವಕಾಶ ಸಿಗಲಿದೆ ಎಂದು ರಾಜ್ಯದ ಜನ ಕೂಡ ಊಹಿಸಿರಲಿಲ್ಲ. ನನಗಿಂತ ಅನೇಕ ಹಿರಿಯರಿದ್ದರು. ಪಕ್ಷದ ತತ್ವ - ಸಿದ್ಧಾಂತಕ್ಕೆ ಕೆಲಸ ಮಾಡಿದ ಅನೇಕರಿದ್ದರು. ಆದರೂ ನನಗೆ ಅವಕಾಶ ನೀಡಲಾಗಿದೆ. ಬಿಜೆಪಿ ಬಗ್ಗೆ ಅನೇಕ ವ್ಯಾಖ್ಯಾನ ಇತ್ತು.
ಬ್ರಾಹ್ಮಣರ ಪಕ್ಷ ಅಂತ ಹೇಳಲಾಗುತ್ತಿತ್ತು. ಆದರೆ, ಚುನಾವಣಾ ಪೂರ್ವ ಪ್ರಧಾನಿ ಅಭ್ಯರ್ಥಿ ಹೆಸರು ಘೋಷಣೆ ಮಾಡುವ ಬಿಜೆಪಿ ಪರಂಪರೆಯಂತೆ 2013ರಲ್ಲಿ ಗುಜರಾತ್‌ನ ಸಿಎಂ ಮೋದಿ ಹೆಸರನ್ನು ಪ್ರಧಾನಿಯಾಗಿ ಘೋಷಣೆ ಮಾಡಲಾಯ್ತು.
ಈ ಮೂಲಕ ಹಿಂದುಳಿದ ನಾಯಕನನ್ನು ಪ್ರಧಾನಿ ಹೆಸರಿಗೆ ಸೂಚಿಸಲಾಯಿತು. ಈ ದೇಶದಲ್ಲಿ ಅನೇಕ ವರ್ಷಗಳ ಕಾಲ ಕಾಂಗ್ರೆಸ್ ಆಡಳಿತ ಮಾಡಿದೆ. ಆದರೆ ದಲಿತರಿಗೆ ಅಧಿಕಾರ ನೀಡಿದ್ದು, ದುರ್ಬಿನ್ ಹಾಕಿ ನೋಡಿದರೂ ಸಿಗುವುದಿಲ್ಲ. ಬಿಜೆಪಿಯಲ್ಲಿ ದಲಿತರನ್ನು ರಾಷ್ಟ್ರಪತಿ, ರಾಜ್ಯಪಾಲರನ್ನ ಮಾಡಲಾಗಿದೆ ಎಂದರು.
ನಾನೇ ಉದಾಹರಣೆ:
ವಿಧಾನಸಭಾ ಚುನಾವಣೆಯಲ್ಲಿ ನಾನು ಸೋತೆ. ಸೋತ ಒಂದೇ ವರ್ಷದಲ್ಲಿ ಲೋಕಸಭೆಗೆ ಟಿಕೆಟ್ ನೀಡಿದರು. ಹೊರಗಿನವನು ಅಂತಲೂ ನೋಡದೇ ಜನ ಗೆಲ್ಲಿಸಿದರು. ದೆಹಲಿಗೆ ಬನ್ನಿ ಚರ್ಚೆ ಮಾಡಬೇಕು ಎಂದು ಮೋದಿ ಆಹ್ವಾನ ನೀಡಿದರು. ಯಾವ ಕಾರ್ಯಕರ್ತನಿಗೆ ಬದ್ಧತೆ ಇದೆಯೋ, ಹಿಂದುತ್ವ ಪ್ರತಿಪಾದನೆ ಮಾಡುತ್ತಾನೋ ಅವನಿಗೆ ಪಕ್ಷ ಜವಾಬ್ದಾರಿ ನೀಡುತ್ತದೆ. ಇದಕ್ಕೆ ನಾನೇ ಉದಾಹರಣೆ.
ಪ್ರಧಾನಿ ಮೋದಿ, ಅಮಿತ್ ಶಾ, ಸಂತೋಷ್ ಅವರು ನನ್ನನ್ನು ಗುರುತಿಸಿದ್ದಾರೆ. ಸಂಪುಟದಲ್ಲಿ ಅವಕಾಶ ಮಾಡಿ ಕೊಟ್ಟಿದ್ದಾರೆ. ಅದಕ್ಕಾಗಿ ಕೇಂದ್ರದ ಎಲ್ಲಾ ಮುಖಂಡರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕೇಂದ್ರ ಸರ್ಕಾರವನ್ನ ಸಮರ್ಥಿಸಿಕೊಂಡ ಸಚಿವ
ಕಾಶ್ಮೀರ ಪ್ರವಾಸಕ್ಕೆ ತೆರಳಿದಾಗ ಸಂಪೂರ್ಣ ಟ್ರಾಫಿಕ್ ಜಾಮ್ ಆಗಿತ್ತು. ಭಯೋತ್ಪಾದಕರ ದಾಳಿ ಆಗಿದೆಯಾ ಅಂತ ಚಾಲಕನೊಬ್ಬನನ್ನು ಕೇಳಿದೆ. ಮೋದಿ ಪ್ರಧಾನಿಯಾದ ಬಳಿಕ ಜಮ್ಮು - ಕಾಶ್ಮೀರದಲ್ಲಿ ಯಾವುದೇ ಭಯೋತ್ಪಾದನೆಗೆ ಅವಕಾಶ ಇಲ್ಲ. ಕಂಡರೆ ಅವರನ್ನು ಗುಂಡಿಕ್ಕಿ ಕೊಲ್ಲುತ್ತಾರೆ ಎಂದು ಹೇಳಿದನು ಎಂದು ಭಯೋತ್ಪಾದಕ ಚಟುವಟಿಕೆ ವಿರುದ್ಧ ಕೇಂದ್ರದ ಕ್ರಮವನ್ನು ಸಮರ್ಥಿಸಿಕೊಂಡರು.
ದಲಿತ ಮಕ್ಕಳು ಹೆಚ್ಚಿನ ಶಿಕ್ಷಣ ಪಡೆಯುವಂತಾಗಬೇಕು. ಅದಕ್ಕಾಗಿ ವಸತಿ ಶಾಲೆಗಳನ್ನು ಹೆಚ್ಚು ಹೆಚ್ಚು ತೆರೆಯಲು ಆದೇಶ ಮಾಡಿದ್ದೇನೆ. ರೆಸಿಡೆನ್ಸಿ ಶಾಲೆಗಳಿಗೆ ಹೆಚ್ಚಿನ ಅನುದಾನವನ್ನು ನೀಡಲಾಗುತ್ತಿದೆ ಎಂದರು.
ಬೆಲೆ ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಪ್ರಧಾನಿ ಜೊತೆ ಮಾತನಾಡಿಲ್ಲ. ನಾನು ರಾಜ್ಯ ಖಾತೆ ಸಚಿವ, ಹಾಗಾಗಿ ನನ್ನನ್ನು ಕ್ಯಾಬಿನೆಟ್ ಸಭೆಗೆ ಕರೆಯುವುದಿಲ್ಲ. ನನ್ನನ್ನು ಕರೆದಾಗ ಮಾತನಾಡುತ್ತೇನೆ. ಬೆಲೆ ಏರಿಕೆ ಬಗ್ಗೆ ನನ್ನ ಅಭಿಪ್ರಾಯವನ್ನು ನೇರವಾಗಿ ತಿಳಿಸುತ್ತೇನೆ ಎಂದರು.
ನಮಸ್ಕರಿಸಿ ಕಚೇರಿ ಪ್ರವೇಶ:
ಕೇಂದ್ರ ಸಚಿವರಾದ ಬಳಿಕ ಮೊದಲ ಬಾರಿಗೆ ಬಿಜೆಪಿ ಕಚೇರಿಗೆ ಆಗಮಿಸಿದ ಸಚಿವರಿಗೆ ಬಿಜೆಪಿ ಕಚೇರಿ ಬಾಗಿಲಲ್ಲೇ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸ್ವಾಗತ ಕೋರಿದರು. ಕಚೇರಿ ಬಾಗಿಲಲ್ಲೆ ಶಿರಬಾಗಿ ನಮಸ್ಕರಿಸಿ ನಾರಾಯಣ ಸ್ವಾಮಿ ನಂತರ ಕಚೇರಿ ಪ್ರವೇಶ ಮಾಡಿದರು.
ಓದಿ: 9-10ನೇ ತರಗತಿ ಪುನಾರಂಭಿಸಲು ಮಾರ್ಗಸೂಚಿ ಪ್ರಕಟ; ನಿತ್ಯವೂ ಅರ್ಧ ದಿನ ಭೌತಿಕ ಕ್ಲಾಸ್