ಬೆಂಗಳೂರು: ಇತಿಮಿತಿಗಳಿದ್ದರೂ ಶಕ್ತಿ ಮೀರಿ ನೆರೆ ಸಂತ್ರಸ್ತರಿಗೆ ಪರಿಹಾರ ನೀಡುತ್ತಿದ್ದು, ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿದರು.
ನೆರೆಗೆ ಯಾರು ಮನೆ ಕಳ್ಕೊಂಡಿದ್ದಾರೆ ಅವರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡುತ್ತಿದ್ದೇವೆ. ನೆರೆಗೆ ಹಾನಿಯಾಗಿರುವ ಒಟ್ಟು 42,893 ಎ ಮತ್ತು ಬಿ ಕೆಟಗರಿ ಮನೆಗಳನ್ನು ಪೂರ್ಣ ಪ್ರಮಾಣದಲ್ಲಿ ಹಾನಿಯಾದ ಮನೆಗಳೆಂದು ಪರಿಗಣಿಸಿ 5 ಲಕ್ಷ ರೂ ಪರಿಹಾರ ಕೊಡಲು ನಿರ್ಧರಿಸಿದ್ದೇವೆ. ಇನ್ನು 77,567 ಸಿ ಕೆಟಗರಿ ಮನೆಗಳಿಗೆ 50 ಸಾವಿರ ರೂ. ಪರಿಹಾರ ಕೊಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ರು.
ಕೃಷಿ ಬೆಳೆ ಹಾನಿಯಾದವರಿಗೆ ಎನ್‌ಡಿಆರ್‌ಎಫ್ 6,800 ರೂ, ಪ್ರತಿ ಹೆಕ್ಟೇರ್‌ಗೆ 10,000 ರೂ. ಸೇರಿಸಿ ಒಟ್ಟು 16,800 ರೂ. ಪರಿಹಾರ ಕೊಡಲು ನಿರ್ಧರಿಸಿದ್ದೇವೆ. ಇನ್ನು ನೆರೆಗೆ ಹಾನಿಯಾದ ತೋಟಗಾರಿಕೆ ಬೆಳೆಗಳಿಗೆ ಪ್ರತಿ ಹೆಕ್ಟೇರ್ 23,500 ರೂ. ಕೊಡಲು ನಿರ್ಧರಿಸಲಾಗಿದೆ. ಈವರೆಗೆ ರಾಜ್ಯದಿಂದ 2,958 ಕೋಟಿ ರೂ. ನೆರೆ ಪರಿಹಾರಾರ್ಥವಾಗಿ ಬಿಡುಗಡೆ ಮಾಡಿದ್ದೇವೆ. ತೋಟದ ಮನೆ, ದನದ ಕೊಟ್ಟಿಗೆಗೂ ಪರಿಹಾರ ನೀಡಲಾಗುತ್ತದೆ. ಒಂದು ವೇಳೆ ಒಂದು ಮನೆಯಲ್ಲಿ ಮೂರು ಕುಟುಂಬವಿದ್ದರೂ, ಅವರಿಗೂ ಮನೆ ಕಟ್ಟಲು ತೀರ್ಮಾನಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಇನ್ನು ನಗರ ಪ್ರದೇಶದಲ್ಲಿ ನೆರೆಗೆ ಅಂಗಡಿ ಹಾನಿಯಾದವರಿಗೆ ಹಾಗೂ ಕೈಮಗ್ಗ ನೇಕಾರರಿಗೆ ತಲಾ 25,000 ರೂ. ಪರಿಹಾರ ನೀಡಲು ತೀರ್ಮಾನಿಸಿದ್ದೇವೆ. ಇತಿಹಾಸದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಪರಿಹಾರವನ್ನು ಯಾರೂ ನೀಡಿಲ್ಲ. ಒಂದು ವೇಳೆ ನೊಂದ ಸಂತ್ರಸ್ತರಿಗೆ ಸಮರ್ಪಕವಾಗಿ ಪರಿಹಾರ ನೀಡಿಲ್ಲವಾದರೆ ಸರ್ಕಾರ ಇದ್ದು ಸತ್ತಂಗೆ ಎಂದರು.
ರಾಜ್ಯದಲ್ಲಿ ಇರುವ ಆರ್ಥಿಕ ಇತಿಮಿತಿಗಳೊಳಗೆ ಮಳೆ ಬಂದು ಮೂರು ದಿನಗಳಲ್ಲಿಯೇ 2,33,633 ಜನರಿಗೆ ತಲಾ 10 ಸಾವಿರ ರೂ ನಂತೆ ಹಣ ಬಿಡುಗಡೆ ಮಾಡಲಾಗಿದೆ ಎಂದು ಸಿಎಂ ತಿಳಿಸಿದ್ರು.