ಬೆಂಗಳೂರು: ನಮ್ಮ ರಾಜ್ಯದಲ್ಲಿ ಅಲ್ಪಸಂಖ್ಯಾತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿ ಶಾಂತಿ ಕಾಪಾಡಲು ಸಿಎಂ ಯಡಿಯೂರಪ್ಪನವರು ಮನವಿ ಮಾಡಿದ್ದಾರೆ. ಹಾಗಾಗಿ ಅವರ ಮನವಿಗೆ ಸ್ಪಂದಿಸಿ ನಾವು ನಾಳಿನ ಹೋರಾಟವನ್ನು ಕೈಬಿಟ್ಟಿದ್ದೇವೆ ಎಂದು ಶಾಸಕ ಎನ್.ಎ ಹ್ಯಾರಿಸ್ ಹೇಳಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಭೆ ಬಳಿಕ ಮಾತನಾಡಿದ ಕಾಂಗ್ರೆಸ್ ಶಾಸಕ ಎನ್.ಎ ಹ್ಯಾರಿಸ್, ಮುಖ್ಯಮಂತ್ರಿಗಳನ್ನು ನಮ್ಮ ಸಮುದಾಯದ ಉಲೇಮಾಗಳು ಭೇಟಿ ಮಾಡಿ ಸಿಎಎ, ಎನ್ಆರ್ಸಿ ಬಗ್ಗೆ ಚರ್ಚೆ ಮಾಡಿದ್ದಾರೆ. ಎನ್ಆರ್ಸಿ ದೇಶದ ಎಲ್ಲಾ ನಾಗರಿಕರಿಗೂ ಅನ್ವಯವಾಗಲಿದೆ. ಆದರೆ ಸಿಎಎ ಮುಸ್ಲಿಮರಿಗೆ ಹೊರತುಪಡಿಸಿ ಉಳಿದವರಿಗೆ ಪೌರತ್ವ ಕೊಡುವ ಕಾಯ್ದೆಯಾಗಿದ್ದು ಈ ಕುರಿತು ಸಿಎಂ ಜೊತೆ ಚರ್ಚೆ ಮಾಡಿದ್ದೇವೆ. ರಾಜ್ಯದ ಮುಸ್ಲಿಮರಿಗೆ ಕಾಯ್ದೆಯಿಂದ ಸಮಸ್ಯೆ ಇಲ್ಲ ಎಂದು ಸಿಎಂ ಭರವಸೆ ಕೊಟ್ಟಿದ್ದಾರೆ ಎಂದರು.
ಆದರೆ, ಸಿಎಎ ಕಾಯ್ದೆಯಲ್ಲಿ ಮುಸ್ಲಿಮರಿಗೆ ಮಾತ್ರ ಹೊರಗಿಟ್ಟಿದ್ದು ನಮಗೆಲ್ಲಾ ನೋವು ತಂದಿದೆ. ಈ ಕಾಯ್ದೆಯಲ್ಲಿ ಸಮಾನತೆ ಇಲ್ಲ ಇದರಿಂದಲೇ ಇಷ್ಟೊಂದು ಗೊಂದಲ ಸೃಷ್ಟಿಯಾಗಿದೆ. ಯಡಿಯೂರಪ್ಪ ಮೊದಲಿಂದಲೂ ಮುಸಲ್ಮಾನರನ್ನು ಜೊತೆಗೆ ಕೊಂಡೊಯ್ಯುತ್ತಿದ್ದಾರೆ, ಹಾಗಾಗಿ ಅವರ ಬಗ್ಗೆ ನಮಗೆ ನಂಬಿಕೆ ಇದೆಯೆಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನೂ, ನಾವು ಸಿಎಎ ವಿರೋಧಿಸಿ ಶಾಂತಿಯುತ ಪ್ರತಿಭಟನೆ ಮಾಡ್ತಿದ್ದೇವೆ ಹೊರತು ಗಲಾಟೆಗೆ ಪ್ರೋತ್ಸಾಹ ನೀಡುತ್ತಿಲ್ಲ. ನಾವು ಶಾಂತಿಯುತವಾಗಿ ನಮ್ಮ ವಿರೋಧ ವ್ಯಕ್ತಪಡಿಸಲು ಮುಂದಾಗಿದ್ದೆವು ಆದರೆ ಮುಖ್ಯಮಂತ್ರಿಗಳು ಶಾಂತಿ ಕಾಪಾಡಿ ಎಂದು ಮನವಿ ಮಾಡಿದ್ದಾರೆ. ಹಾಗಾಗಿ ನಾಳೆ ನಮ್ಮ ಶಾಂತಿಯುತ ಪ್ರತಿಭಟನೆಯನ್ನು ರದ್ದು ಮಾಡಿದ್ದೇವೆ ಎಂದರು.
ಕಾನೂನು ಪಾಲನೆ ಮಾಡುವುದು ಹಾಗೂ ನನ್ನ ಜನರ ಹತ್ತಿರ ಕಾನೂನು ಪಾಲನೆ ಮಾಡಿಸುವುದು ನನ್ನ ಕರ್ತವ್ಯ. ಹಾಗಾಗಿ ನಾವು ಸಿಎಂ ಬಳಿಯೇ ಮಾತನಾಡಿದ್ದೇವೆ. ಅವರು ಕೂಡಾ ನಮ್ಮನ್ನು ಅದೇ ರೀತಿ ಗೌರವ ಕೊಟ್ಟು ಮಾತನಾಡಿಸಿದ್ದಾರೆ. ಹಾಗಾಗಿ ನಾಳಿನ ನಮ್ಮ ಹೋರಾಟ ಕೈಬಿಟ್ಟಿದ್ದೇವೆ ಎಂದು ತಿಳಿಸಿದರು.