ಬೆಂಗಳೂರು: ಅಶುದ್ಧ ನೀರು ಕುಡಿದು ಸಾವನ್ನಪ್ಪುವ ಪ್ರಕರಣಗಳು ಭವಿಷ್ಯದಲ್ಲಿ ಮರುಕಳಿಸಿದರೆ ಜಿಲ್ಲಾ ಪಂಚಾಯಿತಿ ಸಿಇಒಗಳನ್ನು ನೇರವಾಗಿ ಹೊಣೆಗಾರರನ್ನಾಗಿಸಿ ಅಮಾನತು ಮಾಡಲಾಗುವುದು. ಅಲ್ಲದೇ ನಗರ ಸಭೆಗಳ ಆಯುಕ್ತರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ನೀರಿನ ಸಮಸ್ಯೆ ಕುರಿತಂತೆ ಗೃಹ ಕಚೇರಿ ಕೃಷ್ಣಾದಲ್ಲಿ ನಿನ್ನೆ (ಮಂಗಳವಾರ) ನಡೆದ ಸಭೆಯಲ್ಲಿ ಅವರು ಮಾತನಾಡಿದರು.
![CM Siddaramaiah](https://etvbharatimages.akamaized.net/etvbharat/prod-images/23-08-2023/19334463_thum-ws.jpg)
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಬಡವರು ವಾಸಿಸುವ ಕೊಳಗೇರಿಗಳಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಹಾಗೂ ಚರಂಡಿ ನೀರಿನ ಪೈಪ್ಗಳು ಪ್ರತ್ಯೇಕವಾಗಿರುವುದನ್ನು ಖಾತ್ರಿ ಪಡಿಸಬೇಕು. ಪ್ರತ್ಯೇಕ ಇಲ್ಲದಿರುವ ಸ್ಥಳಗಳನ್ನು ಗುರುತಿಸಿ ರಾಜ್ಯದಲ್ಲಿ ಈ ಕುರಿತು ನೈರ್ಮಲ್ಯ ಅಭಿಯಾನ ಕೈಗೊಂಡು 15 ದಿನಗಳಲ್ಲಿ ಈ ಕುರಿತು ವರದಿ ಸಲ್ಲಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.
ರಾಜ್ಯದಲ್ಲಿ ಕಲುಷಿತ ನೀರಿನ ಸೇವನೆಯಿಂದಾಗಿ 13-14 ಜನ ಸಾವಿಗೀಡಾಗಿದ್ದಾರೆ. ಚಿತ್ರದುರ್ಗದಲ್ಲಿಯೇ 6-7 ಜನ ಅಸುನೀಗಿದ್ದಾರೆ. ಇದನ್ನು ತಪ್ಪಿಸಲು ಸಾಧ್ಯವಿದೆ. ಕೆಲವೆಡೆ ನಿರ್ವಹಣೆ ಇಲ್ಲದೇ ಇರುವುದರಿಂದ ಈ ರೀತಿ ಅವಘಡಗಳು ಸಂಭವಿಸುತ್ತದೆ. ಕಾವಾಡಿಗರ ಹಟ್ಟಿಯಲ್ಲಿ ಇತ್ತೀಚೆಗೆ ಒಬ್ಬರು ಮರಣ ಹೊಂದಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂಥ ಪ್ರಕರಣಗಳು ಸಂಭವಿಸುತ್ತದೆ. ಗ್ರಾಮೀಣಾಭಿವೃದ್ಧಿ, ಆರೋಗ್ಯ, ಪೌರಾಡಳಿತ ಹಾಗೂ ನಗರಾಭಿವೃದ್ಧಿ- ಈ ನಾಲ್ಕು ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಸಿಎಂ ಸೂಚಿಸಿದರು.
![ಸಿಎಂ ಭೇಟಿ ಮಾಡಿದ ಉಬುಂಟು ಮಹಿಳಾ ಉದ್ಯಮಿಗಳ ನಿಯೋಗ](https://etvbharatimages.akamaized.net/etvbharat/prod-images/23-08-2023/19334463_thumssws.jpg)
ಹಾಸ್ಟೆಲ್ಗಳಲ್ಲಿಯೂ ವಿದ್ಯಾರ್ಥಿಗಳು ಕಲುಷಿತ ನೀರು ಕುಡಿದು ಆಸ್ಪತ್ರೆ ಸೇರಿದ್ದಾರೆ. ಈ ಬಗ್ಗೆ ಸಮರೋಪಾದಿಯಲ್ಲಿ ಕೆಲಸಗಳಾಗಬೇಕು. 39 ತಾಲೂಕುಗಳಲ್ಲಿ ಕುಡಿಯುವ ನೀರಿನ ಅಭಾವವಿದೆ. 121 ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಇದಕ್ಕೆ 86 ಕೋಟಿ ರೂ.ಗಳ ಅನುದಾನ ಅಗತ್ಯವಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವರು ಸಭೆಯ ಗಮನಕ್ಕೆ ತಂದರು.
ಇದನ್ನೂ ಓದಿ: ಚಿತ್ರದುರ್ಗದ ಕಾವಾಡಿಗರ ಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ಸಾವು ಪ್ರಕರಣ: ತನಿಖೆಗೆ ಆದೇಶಿಸಿದ ಸಿಎಂ
ಸಿಎಂ ಭೇಟಿ ಮಾಡಿದ ಉಬುಂಟು ಮಹಿಳಾ ಉದ್ಯಮಿಗಳ ನಿಯೋಗ: ಕಾಂಬೋಡಿಯಾ ದೇಶಕ್ಕೆ ತೆರಳುತ್ತಿರುವ ಉಬುಂಟು ಮಹಿಳಾ ಉದ್ಯಮಿಗಳ ನಿಯೋಗವು ಮಂಗಳವಾರ ಉಬುಂಟು ಅಧ್ಯಕ್ಷರು ಹಾಗೂ ಸಂಸ್ಥಾಪಕರಾದ ರತ್ನಪ್ರಭಾ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿತು.
ದೆಹಲಿ, ಜೈಪುರ, ಕೋಲ್ಕತ್ತಾ, ವಿಶಾಖ ಪಟ್ಟಣಂ, ಬೆಂಗಳೂರು, ಮೈಸೂರು, ಚೆನ್ನೈ, ಮುಂಬೈ, ಹೈದರಾಬಾದ್, ಕೋಚ್ಚಿನ್ ರಾಜ್ಯಗಳ ಮಹಿಳೆಯರು ನಿಯೋಗದಲ್ಲಿದ್ದಾರೆ. ಆಗಸ್ಟ್ 26 ರಿಂದ 29 ರವರೆಗೆ ಮೂರು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಭಾರತ ಹಾಗೂ ಕಾಂಬೋಡಿಯಾ ಸಂಸ್ಥೆಗಳ ನಡುವೆ 5 ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆ ಇದೆ ಎಂದು ನಿಯೋಗದ ಸಂಸ್ಥಾಪಕರಾದ ರತ್ನಪ್ರಭಾ ಅವರು ವಿವರಿಸಿದರು. ಉಬುಂಟು ಸಂಸ್ಥಾಪಕರಾದ ರತ್ನಪ್ರಭಾ, ವಾಣಿಜ್ಯ ಮತ್ತು ಕೈಗಾರಿಕೆಗಳ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷರಾದ ಛಾಯಾ ನಂಜಪ್ಪ, ಎಫ್.ಕೆ.ಸಿ.ಸಿ.ಐ ಸೇರಿದಂತೆ ವಿವಿಧ ಸಂಸ್ಥೆಯ ಪ್ರತಿನಿಧಿಗಳು ನಿಯೋಗದಲ್ಲಿದ್ದಾರೆ. ಕಾಂಬೋಡಿಯಾ ಪ್ರವಾಸ ಫಲಪ್ರದವಾಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಭ ಹಾರೈಸಿದರು.