ಬೆಂಗಳೂರು:ಕೇಂದ್ರ ವಕ್ಫ್ ಪರಿಷತ್ತಿನಿಂದ ರಾಜ್ಯದ ವಕ್ಫ್ ಮಂಡಳಿಯಲ್ಲಿ(Waqf Board)ಆಗುತ್ತಿರುವ ಕೆಲಸ ಕಾರ್ಯಗಳ ಪರಿಶೀಲನೆ ನಡೆಸಿದ ಸದಸ್ಯರು, ಜಂಟಿ ಸುದ್ದಿಗೋಷ್ಟಿ ನಡೆಸಿದರು.
ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ಯೂಸುಫ್, ಕೇಂದ್ರ ವಕ್ಫ್ ಪರಿಷತ್ತಿನ ಆರು ಜನ ಸದಸ್ಯರು, ಕರ್ನಾಟಕ ವಕ್ಫ್ ಮಂಡಳಿಗೆ ಭೇಟಿ ನೀಡಿ, ಮೂರು ದಿನಗಳ ಕಾಲ ಪರಿಶೀಲನೆಯನ್ನು ನಡೆಸಿದ್ದಾರೆ. ಕೇಂದ್ರ ವಕ್ಫ್ ಪರಿಷತ್ತಿಂದ, ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳ ಬಗ್ಗೆ ಕೆಲಸ ಮಾಡಲಾಗುತ್ತಿದೆ. ಕೇಂದ್ರ ವಕ್ಫ್ ಪರಿಷತ್ತಿನ ಅನುದಾನದಲ್ಲಿ ವಕ್ಫ್ ಆಸ್ತಿಗಳನ್ನು ಡಿಜಿಟಲೀಕರಣ ಮಾಡುವುದು, ವಕ್ಫ್ ಆಸ್ತಿಗಳ ಅಭಿವೃದ್ಧಿಗೆ ಸಾಲದ ಮೊತ್ತ, ಜೊತೆಗೆ ಅಭಿವೃದ್ಧಿ ಕಾರ್ಯಗಳ ಸ್ಥಳ ಪರಿಶೀಲನೆ ನಡೆಸಲಾಗಿದೆ ಎಂದರು.
ಕೆಜಿಎಫ್ನಲ್ಲಿ(KGF) ಸಮುದಾಯ ಭವನದ ಕಾಮಗಾರಿ ನಡೆಯುತ್ತಿದೆ.ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸಿದ್ದಾರೆ. ಈಗಾಗಲೇ 32 ಸಾವಿರ ವಕ್ಫ್ ಆಸ್ತಿಗಳ ದಾಖಲೆಗಳ ಡಿಜಿಟಲೀಕರಣ ಆಗಿದೆ. ಜಿಐಎಸ್, ಜಿಪಿಎಸ್ ಮಾಡುವ ಕೆಲಸದಲ್ಲಿ ಮೊದಲನೇ ಹಂತದ 27 ಸಾವಿರ ಆಸ್ತಿಗಳ ಪೈಕಿ 20 ಸಾವಿರ ಪೂರ್ಣಗೊಂಡಿದೆ ಎಂದರು.ವಕ್ಫ್ ಆಸ್ತಿಗಳ ಅಭಿವೃದ್ಧಿಗೆ ಪ್ರಧಾನಮಂತ್ರಿ ಜನವಿಕಾಸ ಯೋಜನೆಯಿಂದ 2019ರಿಂದ ಅನುದಾನ ಕೊಡುತ್ತಿದ್ದಾರೆ. ಎರಡು ಪ್ರಾಜೆಕ್ಟ್ಗಳಿಗೆ ಈಗಾಗಲೇ ಮೊದಲನೇ ಕಂತು ಬಿಡುಗಡೆ ಆಗಿದೆ. ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆ ನಿರ್ದೇಶನಾಲಯದಿಂದ ಇದರ ಮೇಲ್ವಿಚಾರಣೆ ನಡೆಯುತ್ತಿದೆ.
ವಕ್ಫ್ ಮಂಡಳಿ ವ್ಯಾಪ್ತಿಗೆ ಆಸ್ತಿ ತರುವ ಪಯತ್ನ:
ಒಂದು ಬಾರಿ ವಕ್ಫ್ ಆಸ್ತಿ ಎಂದು ತೀರ್ಮಾನ ಆದ ಮೇಲೆ ಅದನ್ನು ಪರಭಾರೆ ಮಾಡಲು ಸಾಧ್ಯವಿಲ್ಲ. ವಕ್ಫ್ ಆಸ್ತಿಗಳ ಒತ್ತುವರಿಯಾಗದಂತೆ ತಡೆಯುವ, ಅಥವಾ ಬೇರೆ ಬೇರೆ ಕಾಯ್ದೆಗಳನ್ವಯ ವಕ್ಫ್ ಸಂಸ್ಥೆಯಲ್ಲಿ ಹಿಂದಿನಿಂದ ಕೆಲಸ ಮಾಡಿಕೊಂಡು ಬಂದವರ ಪಾಲಿಗಾಗಿರುವ ಆಸ್ತಿಗಳನ್ನು ವಕ್ಫ್ ಮಂಡಳಿಗೆ ವಾಪಸ್ ಪಡೆಯಲಾಗುವುದು. ಆ ಆಸ್ತಿಯನ್ನು ಹಿಂದೆ ತೆಗೆದುಕೊಳ್ಳುವ ಪ್ರಯತ್ನ ಮಾಡಲಾಗುವುದು ಎಂದರು. 33 ಸಾವಿರ ವಕ್ಫ್ ಸಂಸ್ಥೆಗಳ ಬಳಿ 46 ಸಾವಿರಕ್ಕೂ ಹೆಚ್ಚು ಆಸ್ತಿಗಳು ಇವೆ ಎಂದರು.
ಕೇಂದ್ರ ವಕ್ಫ್ ಮಂಡಳಿ ಪ್ರಮುಖ ಸದಸ್ಯ ಟಿ.ಒ.ನೌಶದ್ ಮಾತನಾಡಿ, ದೇಶವ್ಯಾಪಿ ವಕ್ಫ್ ಮಂಡಳಿಯ ಆಸ್ತಿ ರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧವಾಗಿದ್ದು, ಈಗಾಗಲೇ ಹಲವೆಡೆ ಆಸ್ತಿಗಳ ಸರ್ವೆ ಕಾರ್ಯ ಪ್ರಗತಿಯಲ್ಲಿದೆ ಎಂದರು. ಒತ್ತುವರಿ ಮಾಡಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಜಾಮೀನುರಹಿತ ವಾರೆಟ್ ಹೊರಡಿಸಲಾಗುವುದು ಎಂದರು. ಈಗಾಗಲೇ 40% ವಕ್ಫ್ ಆಸ್ತಿ ಕಬಳಿಕೆಯಾಗಿದ್ದು, 99.9% ಮುಸಲ್ಮಾನ ಸಮುದಾಯದವರಿಂದಲೇ ಆಗಿದೆ ಎಂದರು.
ಸದಸ್ಯೆ ಎಸ್ ಮುನ್ವಾರಿ ಬೇಗಂ ಮಾತನಾಡಿ, ಅಲ್ಪಸಂಖ್ಯಾತರ ಸಮುದಾಯ ಶೈಕ್ಷಣಿಕವಾಗಿ ಪ್ರಗತಿಯಾಗಬೇಕಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳು ಪಾಲ್ಗೊಳ್ಳಲು ಕೋಚಿಂಗ್ ಸೆಂಟರ್ ಆರಂಭಿಸಿ, ಮೂರು ವರ್ಷಗಳ ಕಾಲ ತರಬೇತಿ ನೀಡಲಾಗುವುದು ಎಂದರು.
ಸುದ್ದಿಗೋಷ್ಟಿಯಲ್ಲಿ ಸದಸ್ಯರಾದ ಹನೀಫ್ ಅಲಿ, ವಸೀಮ್ ಆರ್ ಕೆ, ಡಾ.ಡಿ. ಅಂದ್ರಾಬಿ, ಮುಹಮ್ಮದ್ ಹರೋನ್, ಆರ್ ಕೆ ಪಠಾಣ್ ಭಾಗಿಯಾಗಿದ್ದರು.
ಇದನ್ನೂ ಓದಿ:Onake Obavva Jayanti: ವಿಧಾನ ಪರಿಷತ್ ಚುನಾವಣೆ- ಓಬವ್ವ ಜಯಂತಿ ಆಚರಣೆ ಮುಂದೂಡಿಕೆ