ಬೆಂಗಳೂರು: ಕಾಂಗ್ರೆಸ್ನಿಂದ ನಡೆಯುತ್ತಿರುವ ಮೇಕೆದಾಟು ಪಾದಯಾತ್ರೆ ಸೆಲ್ಫ್ ಪ್ರಮೋಷನ್ ಪ್ರೋಗ್ರಾಂ ಆಗಿದೆ. ಕಾಂಗ್ರೆಸ್ ಪಕ್ಷದ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸೆಲ್ಫ್ ಪ್ರಮೋಷನ್ಗಾಗಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಸಚಿವ ಅಶ್ವತ್ಥ್ ನಾರಾಯಣ ಟೀಕಿಸಿದ್ದಾರೆ.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ಪಾದಯಾತ್ರೆ ಮಾಡುವುದು ಬೇಡ ಎಂದು ಸರ್ಕಾರ ತಿಳಿಸಿದೆ. ಮೇಕೆದಾಟು ಯೋಜನೆ ಜಾರಿ ಮಾಡಲು ಸರ್ಕಾರ ಬದ್ಧವಾಗಿದೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಆಗಿದೆ. ಈಗ ನಿಯಮ ಉಲ್ಲಂಘಿಸಿ ಪಾದಯಾತ್ರೆ ಮಾಡಿದ ಕಾರಣ ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ಕ್ರಮ ತೆಗದುಕೊಳ್ಳಲಾಗಿದೆ. 31 ಜನರ ಮೇಲೆ ಕೇಸ್ ಆಗಿದೆ. ಕಾಂಗ್ರೆಸ್ ಜವಾಬ್ದಾರಿಯುತವಾಗಿರುವ ರಾಜಕೀಯ ಪಕ್ಷವಾಗಿದೆ. ಜನರ ಮುಂದೆ ಇವರ ನಾಟಕ ಈಗ ಬಯಲು ಆಗುತ್ತಿದೆ ಎಂದರು.
ಮೇಕೆದಾಟು ಕುಡಿಯುವ ನೀರಿನ ಯೋಜನೆ ಬೇಕು. ಈ ಭಾಗಕ್ಕೆ ನೀರಿನ ಅವಶ್ಯಕತೆಯಿದೆ. ರಾಜಕೀಯವಾಗಿ ಯಾವುದೇ ಕಾಯ್ದೆ ಮಾಡಿಲ್ಲ. ಒಂದು ವೇಳೆ ರಾಜಕೀಯ ಮಾಡಿದ್ರೆ ಸುಪ್ರೀಂ ಕೋರ್ಟ್ ನಲ್ಲಿ ಸಮಸ್ಯೆ ಆಗುತ್ತದೆ. ಜನರಿಗೆ ಅನುಕೂಲ ಮಾಡುವ ಬದಲು ಪೊಲಿಟಿಕಲ್ ಡ್ರಾಮಾ ಮಾಡುತ್ತಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ, ತಮ್ಮ ರಾಜಕೀಯ ಬೆಳವಣಿಗೆಗಾಗಿ ಪಾದಯಾತ್ರೆ ಮಾಡಲಾಗುತ್ತಿದೆ. ಇವರ ಯೋಜನೆಗಳು, ಇವರ ನಾಟಕಗಳು ಎಲ್ಲವೂ ಬಯಲಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಅಲೆಗಳ ಹೊಡೆತಕ್ಕೆ ಸಮುದ್ರಕ್ಕೆ ಬಿದ್ದ ಯುವತಿ.. ಮುಂಬೈ ಪೊಲೀಸರಿಂದ ರಕ್ಷಣೆ
ಈ ಪಾದಯಾತ್ರೆ ಖಂಡಿತವಾಗಿಯೂ ಸೂಪರ್ ಸ್ಪ್ರೆಡರ್. ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ. ಪರಿಸ್ಥಿತಿ ಕೈತಪ್ಪಬಾರದು. ಸೂಕ್ಷ್ಮವಾಗಿ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕೋ, ಅದನ್ನು ಸರ್ಕಾರ ಮಾಡುತ್ತದೆ. ಆಡಳಿತ ಮತ್ತು ರಾಜಕೀಯಾತ್ಮಕ ಉತ್ತರ ಕೊಡಬೇಕು. ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳತ್ತೇವೆ ಎಂದು ತಿಳಿಸಿದರು.
ಕೋವಿಡ್ ಟೆಸ್ಟ್ಗೆ ಹೋದವರ ವಿರುದ್ಧ ಡಿಕೆಶಿ ಗರಂ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಡಿಕೆಶಿ ಅವರು ಸಹಕರಿಸಬೇಕಿತ್ತು. ಇಷ್ಟ ಇರಲಿ, ಇಲ್ಲದೆ ಇರಲಿ ಟೆಸ್ಟ್ ಮಾಡಿಸಿಕೊಳ್ಳಲೇಬೇಕು. ವಿಪತ್ತು ನಿರ್ವಹಣಾ ಕಾಯ್ದೆ ಪ್ರಕಾರ ಟೆಸ್ಟ್ ಮಾಡಿಸಿಕೊಳ್ಳಲೇಬೇಕು. ಯಾಕೆಂದರೆ ಪ್ರಾಥಮಿಕ ಸಂಪರ್ಕಿತರು ಇರುತ್ತಾರೆ. ಅವರು ಸಹಕರಿಸಬೇಕಿತ್ತು ಎಂದರು.
ಕಾಂಗ್ರೆಸ್ ಪಕ್ಷ ಸುದ್ದಿಯಲ್ಲಿರುತ್ತದೆ ಎಂದು ಪಾದಯಾತ್ರೆ ಮಾಡುತ್ತಿದ್ದಾರೆ. ಇವರ ಅನುಕೂಲಕ್ಕಾಗಿ ಸ್ವಾರ್ಥದ ಪಾದಯಾತ್ರೆ ಮಾಡಲಾಗುತ್ತಿದೆ. ರಾಮನಗರದಲ್ಲಿ ನಡೆಯುತ್ತಿರುವ ನೀರಾವರಿ ಯೋಜನೆಗಳ ಬಗ್ಗೆ ಏನು ಮಾಡಿದ್ದಾರೆ? ಎಷ್ಟು ಭಾರಿ ಅಲ್ಲಿಗೆ ಭೇಟಿ ನೀಡಿದ್ದರು. ಅದನ್ನು ಹೇಳಬೇಕು. ಇದೇ ಮೇಕೆದಾಟು ಯೋಜನೆಗಾಗಿ ಇಲ್ಲಿಯವರೆಗೆ ಇವರೆಲ್ಲಾ ಏನು ಮಾಡಿದ್ರು? ಎಂದು ಅಶ್ವತ್ಥ್ ನಾರಯಾಣ ಪ್ರಶ್ನಿಸಿದರು.