ಬೆಂಗಳೂರು: ವೇತನ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್‌ಎಎಲ್ ನೌಕರರ ಒಕ್ಕೂಟ ನಡೆಸುತ್ತಿರುವ ಮುಷ್ಕರ 6ನೇ ದಿನಕ್ಕೆ ಮುಂದುವರೆದಿದೆ.
ವೇತನ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ (ಹೆಚ್ಎಎಲ್) ನೌಕರರು ಸೋಮವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ.
ಆಡಳಿತ ಮಂಡಳಿ ನೌಕರರ ವೇತನ ಪರಿಷ್ಕರಣೆಯ ಬಗ್ಗೆ ಮಾತನಾಡುತ್ತಿಲ್ಲ ಹಾಗೂ ನೌಕರರ ಮನವೊಲಿಸಿ ಕೆಲಸವನ್ನು ಮಾಡಿಸುತ್ತಿಲ್ಲ ಎಂದು ದೂರಿ ಕಳೆದ ಆರು ದಿನಗಳಿಂದ ಹೆಚ್ಎಎಲ್ನ 9 ವಿಭಾಗದ ಸೂಮಾರು 8000 ಸಾವಿರ ನೌಕರರು ಪ್ರತಿಭಟನೆ ಮುಂದುವರೆಸಿದ್ದಾರೆ.
ಅಧಿಕಾರಿ ವರ್ಗಕ್ಕೆ ಈಗಾಗಲೇ ಶೇ. 35ರಷ್ಟು ವೇತನ ಪರಿಷ್ಕರಣೆ ಮಾಡಿ, ವೇತನವನ್ನೂ ಬಿಡುಗಡೆ ಮಾಡಲಾಗಿದೆ. ಆದರೆ, ಕಾರ್ಮಿಕ ವರ್ಗದವರ ವೇತನ ಪರಿಷ್ಕರಣೆಗೆ ಆಡಳಿತ ಮಂಡಳಿ ಹಿಂದೇಟು ಹಾಕುತ್ತಿದೆ. ವೇತನ ಪರಿಷ್ಕರಣೆ, ಬಡ್ತಿ ಸೇರಿ ಹಲವು ಬೇಡಿಕೆಗಳ ಈಡೇರಿಕೆಗಾಗಿ 2016ರಿಂದಲೇ ಉದ್ಯೋಗಿಗಳು ಮತ್ತು ಆಡಳಿತ ಮಂಡಳಿ ನಡುವೆ ಮಾತುಕತೆ ನಡೆಯುತ್ತಿದೆ. ಜೊತೆಗೆ 2017ರ ಜನವರಿ 1ರಿಂದಲೇ ಪರಿಷ್ಕೃತ ವೇತನ ನೀಡುವಂತೆ ಉದ್ಯೋಗಿಗಳು ಒತ್ತಾಯಿಸಿದ್ದರೂ ಯಾವುದೇ ರೀತಿಯ ಸ್ಪಂದನೆಯೂ ಸಿಗುತ್ತಿಲ್ಲವಂತೆ.
ಇನ್ನು ಈ ಕುರಿತು ಹೆಚ್‌ಎಎಲ್ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಸೂರ್ಯದೇವ್ ಚಂದ್ರಶೇಖರ್ ಮಾತನಾಡಿ, ಆರು ದಿನಗಳಿಂದ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ನಮ್ಮ ಮುಷ್ಕರಕ್ಕೆ ಆಡಳಿತ ಮಂಡಳಿಯಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಆದ್ದರಿಂದ ನಾವು ಮುಷ್ಕರವನ್ನು ಮುಂದುವರೆಸುತ್ತೇವೆ. ಕೇಂದ್ರ ಸರ್ಕಾರ ಹಾಗೂ ರಕ್ಷಣಾ ಇಲಾಖೆ ಮುಂದೆ ಬಂದು ನಮ್ಮ ಬೇಡಿಕೆ ಪರಿಹರಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.