ಬೆಂಗಳೂರು: ಯಾವಾಗ ಹೈಕಮಾಂಡ್ ಜತೆ ಮಾತಾಡಬೇಕು, ಸಂಪುಟ ವಿಸ್ತರಣೆ ಮಾಡಬೇಕು ಎನ್ನುವುದು ಸಿಎಂ ವಿವೇಚನೆಗೆ ಬಿಟ್ಟಿದ್ದು. ಸಚಿವ ಸಂಪುಟ ವಿಸ್ತರಣೆ ಕುರಿತು ಸಿಎಂ ಯಡಿಯೂರಪ್ಪ ಹಾಗು ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ದರಾಗಿದ್ದೇವೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ವಿಜಯನಗರ ಕ್ಷೇತ್ರದ ಶಾಸಕರ ಕಚೇರಿ ಉದ್ಘಾಟನೆ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ನವೀಕೃತ ಕಚೇರಿ ಉದ್ಘಾಟನೆ ಕಳೆದ ತಿಂಗಳೇ ನಡೆಸಬೇಕಿತ್ತು. ಆದರೆ ರಾಜ್ಯದ ಉಸ್ತುವಾರಿ ಬರುತ್ತಾರೆ ಎನ್ನುವ ಕಾರಣಕ್ಕೆ ಇಂದು ಉದ್ಘಾಟನೆಗೆ ದಿನಾಂಕ ನಿಗದಿಪಡಿಸಿಕೊಳ್ಳಲಾಗಿದೆ. ತಾಂತ್ರಿಕವಾಗಿ ನಾವು ಚೆನ್ನಾಗಿರಬೇಕು. ಹಾಗಾಗಿ ಹೈಟೆಕ್ ವ್ಯವಸ್ಥೆಯನ್ನು ಇಲ್ಲಿ ಕಲ್ಪಿಸಲಾಗಿದೆ. ಕಾರ್ಯಕರ್ತರ ಕೆಲಸ ಕಾರ್ಯ ಮಾಡಿಕೊಡಲು ಸುಸಜ್ಜಿತವಾದ ಕಚೇರಿಯನ್ನಾಗಿ ಹಳೆಯ ಕಚೇರಿಯನ್ನ ಪರಿವರ್ತನೆ ಮಾಡಲಾಗಿದೆ. ಈ ಭಾಗದ ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶವನ್ನು ಹೊಂದಲಾಗಿದೆ ಎಂದರು.
ಸಂಪುಟ ವಿಸ್ತರಣೆ ಆಗುತ್ತದೆ. ಬೇರೆಯವರು ಒತ್ತಡ ಹಾಕುತ್ತಿದ್ದರೂ ಮುಖ್ಯಮಂತ್ರಿಗಳು ವರಿಷ್ಠರು ಏನು ತೀರ್ಮಾನ ಮಾಡುತ್ತಾರೆ. ಅದಕ್ಕೆ ನಾವೆಲ್ಲರೂ ಬದ್ದರಿದ್ದೇವೆ. ಹಾಗಾಗಿ ಇದಕ್ಕೆ ಅಷ್ಟೊಂದು ಮಹತ್ವ ಕೊಡುವುದು ಬೇಡ ಅದರ ಪಾಡಿಗೆ ಅದು ಆಗಲಿದೆ ಎಂದರು.
ನಾಳೆಯಿಂದ ಶಾಸನಸಭೆ ಆರಂಭಗೊಳ್ಳಲಿದೆ. ಚರ್ಚೆ ಮಾಡುವುದಕ್ಕೆ ಸಾಕಷ್ಟು ವಿಷಯವಿದೆ. ಯಾವಾಗ ಯಾರನ್ನ ಮಂತ್ರಿಗಳನ್ನಾಗಿ ಮಾಡಬೇಕು ಎನ್ನುವುದು ಮುಖ್ಯಮಂತ್ರಿಗಳ ಪರಮಾಧಿಕಾರ. ಹೈಕಮಾಂಡ್ ಜೊತೆ ಮಾತನಾಡುವುದು ಅವರ ಪರಮಾಧಿಕಾರ. ಅವರ ರಾಜಕೀಯ ಅನುಭವ ಯಾವಾಗ ಮಾತನಾಡಬೇಕೋ ಮಾತನಾಡುತ್ತಾರೆ. ಆದರೆ ಯಾವಾಗ ವಿಸ್ತರಣೆ ಎನ್ನುವುದು ನಮಗೆ ಮಾತ್ರ ಗೊತ್ತಿಲ್ಲ ಕಾದು ನೋಡಬೇಕು ಎಂದರು.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಶಾಸಕರ ಸಭೆಯನ್ನು ಕರೆದಿರುವ ಬಗ್ಗೆ ಮಾಹಿತಿ ಇಲ್ಲ. ಆದರೆ ನಾಳೆ ಸಂಜೆ ಸಚಿವ ಸಂಪುಟ ಸಭೆಯಲ್ಲಿ ಸಭೆಯಲ್ಲಿ ಭಾಗವಹಿಸುತ್ತೇವೆ. ನಮ್ಮ ನಾಯಕರು ಸಭೆ ಕರೆದಲ್ಲಿ ಭಾಗಿಯಾಗುತ್ತೇವೆ ಎಂದರು.
ಬಿಬಿಎಂಪಿ ಚುನಾವಣೆಗೆ ಪೂರ್ವಭಾವಿ ಸಭೆಗಳನ್ನು ಮಾಡುತ್ತಿದ್ದೇವೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಕಾನೂನು ಪರಿಪಾಲನೆ ಮಾಡಬೇಕಿರುವುದು. ನಮ್ಮ ಕರ್ತವ್ಯ ಹೈಕೋರ್ಟ್ ಆದೇಶದ ಹಿನ್ನಲೆಯಲ್ಲಿ ಯಾವ ರೀತಿ ಮಾಡಬೇಕು ಎನ್ನುವ ಕುರಿತು ಚರ್ಚೆ ನಡೆಯುತ್ತಿದೆ. ಸುಪ್ರೀಂಕೋರ್ಟಿಗೆ ಹೋಗಬೇಕೋ ಅಥವಾ ಚುನಾವಣೆ ಮಾಡಬೇಕೋ ಎನ್ನುವ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ. ಅದನ್ನೆಲ್ಲ ಕುಳಿತು ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.
ಲವ್ ಜಿಹಾದ್, ಗೋ ಹತ್ಯೆ ನಿಷೇಧ ಕಾಯ್ದೆ ಬಗ್ಗೆ ಈಗ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಬಾರಿಯ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆದು ಕಾಯ್ದೆಜಾರಿಗೆ ಬರುವ ಆತ್ಮವಿಶ್ವಾಸ ಎಲ್ಲರಲ್ಲೂ ಹೊರಹೊಮ್ಮಿದೆ ಆಗುತ್ತೆ ಎನ್ನುವ ವಿಶ್ವಾಸ ನನಗೂ ಇದೆ ಎಂದರು.