ಬೆಂಗಳೂರು: ಚಿಲುಮೆ ಮತದಾನ ದತ್ತಾಂಶ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ಮೂವರು ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಆಂತರಿಕ ವರದಿಯಂತೆ, ಅಧಿಕಾರಿಗಳ ಕರ್ತವ್ಯಲೋಪ ಸಾಬೀತಾಗಿದ್ದು, ಮೊದಲು ಮಹಾದೇವಪುರ ಕಂದಾಯ ಅಧಿಕಾರಿ (ಆರ್.ಒ) ಚಂದ್ರಶೇಖರ್ ಅವರನ್ನು ಅಮಾನತು ಮಾಡಲಾಗಿತ್ತು.
ಇದೀಗ 174-ಮಹದೇವಪುರ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕಂದಾಯ ಅಧಿಕಾರಿ (ಮಹದೇವಪುರ) ಕೆ.ಚಂದ್ರಶೇಖರ್, ಶಿವಾಜಿನಗರ ಕ್ಷೇತ್ರದಲ್ಲಿ ವಿಶೇಷ ಕರ್ತವ್ಯಾಧಿಕಾರಿ ಹುದ್ದೆಯಲ್ಲಿರುವ ಸುಹೇಲ್ ಅಹ್ಮದ್ ಹಾಗೂ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ವಿ.ಬಿ ಭೀಮಾಶಂಕರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಈ ಜಾಗಗಳಿಗೆ ಬಿಬಿಎಂಪಿ ಬೇರೆ ಅಧಿಕಾರಿಗಳನ್ನು ನೇಮಿಸಿದೆ.
ಭಾರತ ಚುನಾವಣಾ ಆಯೋಗದ ನಿಯಮ ಉಲ್ಲಂಘಿಸಿರುವುದರಿಂದ 1957ರ ಸಿಸಿಎ ನಿಯಮಾವಳಿ 10ರ ಅನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ಇಲಾಖಾ ವಿಚಾರಣೆ ನಿರೀಕ್ಷಿಸಿ, ಸೇವೆಯಿಂದ ಅಮಾನತು ಮಾಡಿ ಆದೇಶಿಸಲಾಗಿದೆ. ಅಕ್ರಮದಲ್ಲಿ ಇನ್ನೂ ಸಾಕಷ್ಟು ಅಧಿಕಾರಿಗಳು ಭಾಗಿಯಾಗಿರುವ ಶಂಕೆಯಿದ್ದು, ಆಂತರಿಕ ವಿಚಾರಣೆ ನಡೆಯುತ್ತಿದೆ. ಇನ್ನಷ್ಟು ಅಧಿಕಾರಿಗಳು ಅಮಾನತಾಗುವ ಸಾಧ್ಯತೆ ಹೆಚ್ಚಿದೆ ಎಂದು ಪಾಲಿಕೆಯ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಮತದಾರರ ಮಾಹಿತಿ ಸೋರಿಕೆ ಹಗರಣ.. ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲು ಕೈ ನಾಯಕರು ದೆಹಲಿಗೆ ಪ್ರಯಾಣ
ಚಿಲುಮೆ ಸಂಸ್ಥೆಯ ಸಿಬ್ಬಂದಿ ಹುದ್ದೆ ಜಾಗದಲ್ಲಿ ತಿದ್ದುಪಡಿ ಮಾಡಿರುವುದರಿಂದ ಅವರ ವಿರುದ್ಧವೂ ದೂರು ದಾಖಲಾಗಿದೆ. ಸಂಸ್ಥೆಯ ಲೋಕೇಶ್ ಕೆ.ಎಂ ಇವರ ವಿರುದ್ಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ನ.15 ರಂದು ದೂರು ನೀಡಿದ್ದು ಕ್ರಮ ಕೈಗೊಳ್ಳಲು ಮನವಿ ಮಾಡಲಾಗಿದೆ.
ಪ್ರಜಾಪ್ರತಿನಿಧಿ ಕಾಯ್ದೆಯ ಉಲ್ಲಂಘನೆ: ಚಿಲುಮೆ ಸಂಸ್ಥೆಯ ಲೋಕೇಶ್ ಕೆ.ಎಂ. ಎಂಬ ಅನಧಿಕೃತ ವ್ಯಕ್ತಿಯು 174-ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ, ಶಿವಕುಮಾರ್ ಹಾಗೂ ಪುನೀತ್, ಗುರುಬಸ್ಸು, ವಿನಾಯಕ್ ಹೆಚ್ ಹೆಚ್ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲೂ ಮತ್ತು ಶಿವಾಜಿನಗರ ಕ್ಷೇತ್ರದಲ್ಲಿ 14 ಗುರುತಿನ ಚೀಟಿಗಳನ್ನು ಮತದಾರರ ನೋಂದಣಾಧಿಕಾರಿ ಚಂದ್ರಶೇಖರ್ ಅವರಿಂದ ಪಡೆದು ಕಾರ್ಯ ನಿರ್ವಹಿಸಿದ್ದಾರೆ.
ಚಿಲುಮೆ ಸಂಸ್ಥೆಗೆ ಮತಗಟ್ಟೆ ಮಟ್ಟದ ಸಮನ್ವಯ ಅಧಿಕಾರಿ ಎಂಬುದಾಗಿ ಮಾತ್ರ ಗುರುತಿನ ಚೀಟಿ ವಿತರಿಸಲಾಗಿತ್ತು. ಆದರೆ ಚಿಲುಮೆ ಸಂಸ್ಥೆಯವರು ಈ ಗುರುತಿನ ಚೀಟಿಯಲ್ಲಿ ಹುದ್ದೆಯ ಸ್ಥಳದಲ್ಲಿ ಬಿ.ಎಲ್.ಓ ಎಂದು ನಮೂದಿಸಿಕೊಂಡಿದ್ದಾರೆ. ಈ ಸಂಸ್ಥೆಯ ಸಿಬ್ಬಂದಿ ಬಿ.ಎಲ್.ಓ ಹೆಸರಿನಲ್ಲಿ ಕೆಲಸ ಮಾಡಿದ್ದಾರೆ.
ಪ್ರಜಾಪ್ರತಿನಿಧಿ ಕಾಯ್ದೆಯ ಪ್ರಕಾರ ಚುನಾವಣೆ ಕಾರ್ಯದಲ್ಲಿ ಯಾವುದೇ ಖಾಸಗಿ ಸಂಸ್ಥೆ ಅಥವಾ ವ್ಯಕ್ತಿಗೆ ಚುನಾವಣೆಗೆ ಸಂಬಂಧಿಸಿದ ಕಾರ್ಯಗಳಿಗೆ ಗುರುತಿನ ಚೀಟಿ ನೀಡಲು ಸಾಧ್ಯವಿಲ್ಲ. ಇದನ್ನು ಉಲ್ಲಂಘಿಸಿ ಇ.ಆರ್.ಓ. ರವರು ಗುರುತಿನ ಚೀಟಿ ನೀಡಿರುವುದು ಹಾಗೂ ಸಂಸ್ಥೆಯವರು ಬಿ.ಎಲ್.ಓ ಎಂದು ಪರೋಕ್ಷವಾಗಿ ನಮೂದಿಸಿಕೊಂಡಿರುವುದು ಕಂಡು ಬಂದಿರುವುದರಿಂದ ಪ್ರಜಾಪ್ರತಿನಿಧಿ ಕಾಯ್ದೆಯ ಸ್ಪಷ್ಟ ಉಲ್ಲಂಘನೆ ಆಗಿದೆ.
ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ: ಸ್ವೀಪ್(ಮತದಾನ ಜಾಗೃತಿ ಅಭಿಯಾನದ) ಕಾರ್ಯಕ್ರಮದಲ್ಲಿ ಸಂಘ ಸಂಸ್ಥೆಗಳೊಂದಿಗೆ ಸಾರ್ವಜನಿಕರು ಹೆಚ್ಚಾಗಿ ಸೇರುವ ಸ್ಥಳಗಳಲ್ಲಿ (ಉದ್ಯಾನವನ, ಬಸ್ ನಿಲ್ದಾಣ, ಮೆಟ್ರೋ ನಿಲ್ದಾಣ ಹಾಗೂ ಇನ್ನಿತರ ಸ್ಥಳಗಳಲ್ಲಿ) ಸಾರ್ವಜನಿಕ ಉದ್ದಿಮೆಗಳಲ್ಲಿ, ಕೇಂದ್ರ ಸರ್ಕಾರದ ಕಛೇರಿಗಳಲ್ಲಿ, ಬ್ಯಾಂಕ್‌ಗಳಲ್ಲಿ, ಖಾಸಗಿ ಕಛೇರಿಗಳಲ್ಲೂ ಸಹ ಬಿ.ಎಲ್.ಓ ಗಳೊಂದಿಗೆ ಹಾಗೂ ಮತದಾರರ ನೋಂದಣಾಧಿಕಾರಿಗಳ ಸಹಯೋಗದೊಂದಿಗೆ ಕಾರ್ಯಕ್ರಮ ಅನುಷ್ಠಾನಕ್ಕೆ ಮಾತ್ರ ಮುಖ್ಯ ಆಯುಕ್ತರು, ಚಿಲುಮೆ ಸಂಸ್ಥೆಗೆ ಕಾರ್ಯಾದೇಶ ನೀಡಿದ್ದರು. 174-ಮಹದೇವಪುರ ವಿಧಾನ ಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿಗಳು ಮತಗಟ್ಟೆ ಸಮನ್ವಯ ಅಧಿಕಾರಿ ಎಂದು ಗುರುತಿನ ಚೀಟಿ ನೀಡಿರುವುದರಿಂದ ಮತದಾರರ ನೋಂದಣಾಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ಇದನ್ನೂ ಓದಿ: ಮತದಾರರ ಮಾಹಿತಿ ಸಂಗ್ರಹ ಆರೋಪ: ಮುಂದುವರೆದ ಚಿಲುಮೆ ಸಂಸ್ಥೆ ಮುಖ್ಯಸ್ಥನ ವಿಚಾರಣೆ