ಮೈಸೂರು : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆ ಆಯೋಗ ಹಾಗೂ ವಿವಿಧ ಸಂಘ ಸಂಸ್ಥೆಗಳು ರಾಜ್ಯದಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ವಿವಿಧ ರೀತಿಗಳಲ್ಲಿ ಮತದಾನ ಜಾಗೃತಿ ಮೂಡಿಸುತ್ತಿವೆ. ಮತದಾನಕ್ಕೆ ಉತ್ತೇಜನ ನೀಡಲು ಚಾಮುಂಡಿಪುರಂನಲ್ಲಿರುವ ಸ್ಥಳೀಯ ಪ್ರತಿಷ್ಠಿತ ಕೆಫೆ ಗುಡ್ ವೈಬ್ಸ್ ರವರು ಕರ್ನಾಟಕ ವಿಧಾನಸಭಾ ಚುನಾವಣೆ 2023 ಮತದಾನದ ಉತ್ತೇಜನಕ್ಕಾಗಿ ಮೇ 10 ಬುಧವಾರದಂದು ಮತದಾನ ಮಾಡಿದ ಗುರುತು ತೋರಿಸಿದ 18 ರಿಂದ 30 ವರ್ಷದ ಯುವ ತರುಣ ಮತದಾರರಿಗೆ ಸುವರ್ಣವಕಾಶ ನೀಡಿದೆ.
![ಮೈಸೂರಿನ ಗುಡ್ ವೈಬ್ಸ್ ಕೆಫೆ ಶೇ.50 ರಷ್ಟು ರಿಯಾಯಿತಿ](https://etvbharatimages.akamaized.net/etvbharat/prod-images/18462844_thumb670.jpg)
ತಮ್ಮ ಕೆಫೆಯಲ್ಲಿ ಯಾವುದೇ ತಿನಿಸುಗಳು ಸೇವಿಸುವ ಪ್ರತಿ ಗ್ರಾಹಕನಿಗೆ ಬೆಳಗ್ಗೆ 7ರಿಂದ ಮಧ್ಯಾಹ್ನ 2 ಗಂಟೆಯವರೆಗೂ ಒಟ್ಟು ಬಿಲ್ಸ್ ನಲ್ಲಿ ಶೇಕಡ 50% ರಿಯಾಯಿತಿ ನೀಡಲಾಗುವುದು. ಮತದಾನ ನಮ್ಮ ಹಕ್ಕು, ತಪ್ಪದೇ ಮತ ಚಲಾಯಿಸಿ, ಸಮೃದ್ಧ ಭಾರತ ನಿರ್ಮಿಸೋಣ ಎಂದು ಘೋಷಿಸಿರುವ ಬ್ಯಾನರ್ ವನ್ನು ಕೆಫೆ ಮುಂಬಾಗ ಪ್ರದೇರ್ಶಿಸುವ ಮೂಲಕ ಗ್ರಾಹಕರ ಗಮನ ಸೆಳೆದಿದ್ದಾರೆ.
![ವಿಶೇಷಚೇತನರೇ ಮತಗಟ್ಟೆಗಳು](https://etvbharatimages.akamaized.net/etvbharat/prod-images/18462844_thumb67.jpg)
ಈ ಕುರಿತು ಹೋಟೆಲ್ ಮಾಲೀಕರಾದ ಸುರೇಶ್ ಅವರು ಮಾತನಾಡಿ, ದಿನಸಿ, ತರಕಾರಿ, ಗ್ಯಾಸ್ ಸಿಲಿಂಡರ್ ಬೆಲೆ ಗಗನಕ್ಕೇರಿರುವ ಈ ಸಂದರ್ಭದಲ್ಲಿಯೂ ಕೂಡ ನಾವು ಮತದಾನದ ಉತ್ತೇಜನಕ್ಕಾಗಿ ಚುನಾವಣಾ ಆಯೋಗದೊಂದಿಗೆ ಕೈಜೋಡಿಸಲು ಸಜ್ಜಾಗಿದ್ದೇವೆ. ಮತದಾರರು ಒಂದು ಮತ ಚಲಾಯಿಸಿರುವ ಗುರುತಿನ ಬೆರಳಿನ ಮೇಲಿನ ಶಾಯಿ ತೋರಿಸದರೆ ಅವರಿಗೆ ತಿಂಡಿ ಪದಾರ್ಥಗಳಲ್ಲಿ ಶೇ. 50 ರಿಯಾಯತಿ ನೀಡಲಾಗುವುದು ಎಂದು ಹೇಳಿದರು.
![ಮತದಾನದಲ್ಲಿ ನಾವು ಭಾಗವಹಿಸಿದ್ದೇವೆ. ನೀವೂ ಪಾಲ್ಗೊಳ್ಳಿ](https://etvbharatimages.akamaized.net/etvbharat/prod-images/18462844_thumb.jpg)
ವಿಶೇಷಚೇತನರೇ ಮತಗಟ್ಟೆಗಳ ಐಕಾನ್ : ಪ್ರಜಾಪ್ರಭುತ್ವ ಹಬ್ಬದಲ್ಲಿ ವಿಶೇಷಚೇತನರಿಗಾಗಿಯೇ ಮತಗಟ್ಟೆಯನ್ನು ತೆರೆಯಲಾಗಿದೆ. ಈ ವಿಶೇಷ ಚೇತನರ ಮತಗಟ್ಟೆಯಲ್ಲಿ ಮತದಾರರು ಹಾಗೂ ಮತದಾನ ಪ್ರಕ್ರಿಯೆ ಯಶಸ್ಸಿಗೆ ಶ್ರಮಿಸುವವರೂ ವಿಶೇಷಚೇತನರೇ ಆಗಿರುವುದು ವಿಶೇಷವಾಗಿದೆ. ಹೌದು, ವಿಶೇಷಚೇತನರು ಸಹ ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಅನುಕೂಲವಾಗುವಂತೆ ಹಾಗೂ ಅವರಲ್ಲೂ ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ 11 ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳಲ್ಲಿ ತಲಾ ಒಂದರಂತೆ ವಿಶೇಷ ಚೇತನರ ಮತಗಟ್ಟೆಗಳನ್ನು ನಿರ್ಮಿಸಲಾಗಿದೆ.
![ವಿಶೇಷಚೇತನರೇ ಮತಗಟ್ಟೆಗಳ ಐಕಾನ್](https://etvbharatimages.akamaized.net/etvbharat/prod-images/18462844_thumb12.jpg)
ಎಲ್ಲೆಲ್ಲಿವೆ ವಿಶೇಷ ಚೇತನರ ಮತಗಟ್ಟೆಗಳು : ಹುಣಸೂರಿನ ಧರ್ಮಪುರದ ಸರ್ಕಾರಿ ಪ್ರೌಢಶಾಲೆ, ತಿ.ನರಸೀಪುರ ವ್ಯಾಪ್ತಿಯ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಮತಗಟ್ಟೆ, ಪಿರಿಯಾಪಟ್ಟಣ ಬೈಲುಕುಪ್ಪೆಯ ಜಿಎಚ್‌ಪಿಎಸ್ ಶಾಲೆ, ನಂಜನಗೂಡಿನ ಸರ್ಕಾರಿ ಪದವಿಪೂರ್ವ ಕಾಲೇಜು, ಮೈಸೂರಿನ ತಾಲ್ಲೂಕಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿರುವ ಶೆಟ್ಟನಾಯಕನ ಹಳ್ಳಿಯ ಸರ್ಕಾರಿ ಪ್ರೌಢಶಾಲೆ, ಕೆ.ಆರ್. ನಗರ ತಾಲ್ಲೂಕಿನ ಹೆಬ್ಬಾಳು ಗ್ರಾ.ಪಂ ಕಚೇರಿ, ಎಚ್.ಡಿ. ಕೋಟೆಯ ಸರ್ಕಾರಿ ಪದವಿಪೂರ್ವ ಕಾಲೇಜು, ನರಸಿಂಹರಾಜ ಕ್ಷೇತ್ರದ ರಾಜೇಂದ್ರ ನಗರದ ಇನ್ಸ್ಟಿಟ್ಯೂಟ್ ಆಫ್ ಎಜುಕೇಷನ್ ಪ್ರೌಢಶಾಲೆ, ಚಾಮರಾಜ ಕ್ಷೇತ್ರ ಮೇಟಗಳ್ಳಿಯ ಜೆಎಸ್ ಎಸ್ ಪ್ರೌಢಶಾಲೆ, ಕೃಷ್ಣರಾಜ ಕ್ಷೇತ್ರದ ದೇವಯ್ಯನ ಹುಂಡಿ ಗ್ರಾಮದ ಸ.ಹಿ.ಪ್ರಾ. ಶಾಲೆಗಳಲ್ಲಿ ವಿಶೇಷಚೇತನರಿಗಾಗಿ ವಿಶೇಷ ಮತಗಟ್ಟೆ ತೆರೆಯಲಾಗಿದೆ.
ವಿಶೇಷ ಚೇತನ ನೌಕರರೇ ಮತಗಟ್ಟೆ ಅಧಿಕಾರಿಗಳು : ವಿವಿಧ ಬಣ್ಣಗಳಿಂದ ಅವರಿಗೆ ತಿಳಿಯುವಂತೆ ವ್ಹೀಲ್ ಚೇರ್, ಸಹ್ನೆಯ ಚಿತ್ತಾರ ಹಾಗೂ ಮತದಾನ ಮಾಡುವ ಚಿತ್ರಗಳನ್ನು ಬರೆದು ಮತಗಟ್ಟೆಯನ್ನು ಅಲಂಕರಿಸಲಾಗಿದೆ. ಈ ಮತಗಟ್ಟೆ ಅಧಿಕಾರಿಗಳಾಗಿ ಸ್ವಯಂ ಪ್ರೇರಿತರಾಗಿ ವಿಶೇಷ ಚೇತನ ನೌಕರರೇ ಭಾಗವಹಿಸಿರುವುದು ವಿಶೇಷವಾಗಿರುತ್ತದೆ. ವಿಶೇಷಚೇತನರು ಈ ಮೂಲಕ ಎಲ್ಲರಲ್ಲೂ ಮತದಾನದಲ್ಲಿ ನಾವು ಭಾಗವಹಿಸಿದ್ದೇವೆ. ನೀವೂ ಪಾಲ್ಗೊಳ್ಳಿ ಎಂಬ ಸಂದೇಶ ಸಾರಲಿದ್ದಾರೆ.
ಇದನ್ನೂ ಓದಿ : ಪ್ರಜಾಪ್ರಭುತ್ವ ಹಬ್ಬಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಸಕಲ ಸಿದ್ಧ: 1137 ಮತಗಟ್ಟೆಗಳ ಸ್ಥಾಪನೆ