ಬೆಂಗಳೂರು : ನೀರು ಉಳಿಸ್ಬೇಕು ಅಂತಾರೆ, ಆದ್ರೆ ಹೇಗೆ ? ಯಾವ ರೀತಿ ? ಅಂತೆಲ್ಲ ಗೊಂದಲ ಇದ್ರೆ ಈ ಸುದ್ದಿ ನೀವು ಓದಲೇಬೇಕು. ಹನಿ ನೀರೂ ವ್ಯರ್ಥವಾಗದಂತೆ ಜೋಪಾನ ಮಾಡುವ ಮೂಲಕ, ನಮ್ಮೆಲ್ಲರಿಗೂ ಮಾದರಿಯಾಗುವ ಮನೆಯೊಂದು ಸಿಲಿಕಾನ್ ಸಿಟಿಯಲ್ಲಿದೆ.
ಹಚ್ಚಹಸುರಾಗಿ ಕಂಗೊಳಿಸ್ತಿರೋ ಮನೆ ಆವರಣ. ಮನೆ ತಾರಸಿ ಮೇಲೆ ರಾಗಿ, ಭತ್ತ, ತರಕಾರಿ ಗಿಡಗಳು, ಜೊತೆಗೆ ಪರಿಸರ ಸ್ನೇಹಿ ಶೌಚಾಲಯ, ಮನೆಯ ಟ್ಯಾಂಕ್, ಸಂಪ್ ಎಲ್ಲವೂ ನೀರಿಂದ ತುಂಬಿ ತುಳುಕ್ತಿದೆ. ಅಂದಹಾಗೆ ಸಿಲಿಕಾನ್ ಸಿಟಿಯಲ್ಲೂ ಇಂತಹಾ ಮನೆ ಇರೋಕೆ ಸಾಧ್ಯನಾ ? ಅಂತ ನೀವು ಯೋಚಿಸಿದ್ರೆ ಖಂಡಿತಾ ಇದು ಸಾಧ್ಯ.
ವಿದ್ಯಾರಣ್ಯಪುರದಲ್ಲಿರುವ ಎಸ್. ವಿಶ್ವನಾಥ್ ಹಾಗೂ ಚೈತ್ರಾ ವಿಶ್ವನಾಥ್ ದಂಪತಿ ಬೋರ್ ವೆಲ್ ಅಥವಾ ಜಲಮಂಡಳಿಯ ನೀರಿಗೆ ಡಿಪೆಂಡ್ ಆಗದೆ ಮಳೆನೀರಲ್ಲೇ ಕುಡಿಯಲು ಮತ್ತು ಅಡುಗೆ ಮಾಡಲು, ಪಾತ್ರೆ, ಬಟ್ಟೆ ಒಗೆಯಲು, ಹಾಗೂ ಇಪ್ಪತ್ತೈದಕ್ಕೂ ಹೆಚ್ಚು ವಿವಿಧ ಗಿಡಗಳನ್ನು ನೆಟ್ಟು ಬೆಳೆಸಲು ಮಳೆ ನೀರನ್ನೇ ಉಳಿಸಿ, ಮರುಬಳಕೆ ಮಾಡ್ತಿದ್ದಾರೆ. ಸಾವಿರ ಚದರಡಿಯಲ್ಲಿರುವ ತಮ್ಮ ಮನೆಯಲ್ಲಿ ವರ್ಷಕ್ಕೆ ಹತ್ತು ಲಕ್ಷ ಲೀಟರ್ ನೀರನ್ನು ಮಳೆ ನೀರು ಕೊಯ್ಲಿನ ಮೂಲಕ ಸಂಗ್ರಹಿಸ್ತಾರೆ.
ಮನೆ ತಾರಸಿಯ ಮೇಲೆ ಬೀಳುವ ನೀರು ವ್ಯರ್ಥವಾಗದಂತೆ ಪೈಪ್ ಮೂಲಕ ಟ್ಯಾಂಕ್ ಗಳಿಗೆ ಹರಿಸ್ತಾರೆ. ಎರಡು ವಿಭಾಗದಲ್ಲಿ ನೀರನ್ನು ಶುದ್ಧೀಕರಿಸುವ ವಿಶ್ವನಾಥ್ , ಒಂದು ಟ್ಯಾಂಕ್ ಗೆ ಬಿಳಿಯ ಬಟ್ಟೆ ಕಟ್ಟುವ ಮೂಲಕವೂ, ಮತ್ತೊಂದು ರೀತಿಯಲ್ಲಿ ಟ್ಯಾಂಕ್ ನಲ್ಲಿ ಇದ್ದಿಲು ಹಾಗೂ ಮರಳು ಹಾಕಿ ನೀರನ್ನು ಶುದ್ಧೀಕರಿಸಿ ಅಡುಗೆ ಹಾಗೂ ಕುಡಿಯುವುದಕ್ಕೆ ಬಳಸ್ತಿದ್ದಾರೆ.
1994 ರಲ್ಲಿ ಮನೆ ನಿರ್ಮಾಣ ಮಾಡಿದ್ದಾಗಿನಿಂದಲೂ ಮಳೆ ನೀರು ಸಂಗ್ರಹಿಸೋದಷ್ಟೇ ಅಲ್ಲದೆ ಬಟ್ಟೆ ಒಗೆದ ನೀರು, ಪಾತ್ರೆ ತೊಳೆದ ನೀರು, ವಾಷಿಂಗ್ ಮೆಷಿನ್ ಹಾಗೂ ಬಾತ್ ರೂಂ ನೀರನ್ನೂ ಕೂಡಾ ಶುದ್ಧೀಕರಿಸಿ ಮರುಬಳಕೆ ಮಾಡುತ್ತಿದ್ದಾರೆ. ಇದಕ್ಕಾಗಿ ಸೋಪುನೀರನ್ನು ಶುದ್ಧ ಮಾಡುವ ಗಿಡಗಳಾದ ಕ್ಯಾಟ್ ಟೇಲ್ ಹಾಗೂ, ಪೆಪ್ಪಾಯಿರಸ್ ಗಿಡ ಬೆಳೆಸಿ ನೀರಿನ ನೈಟ್ರೇಟ್ ಹಾಗೂ ಫಾಸ್ಪೇಟ್ ಅಂಶ ಕಡಿಮೆ ಮಾಡಿ ಮರುಬಳಕೆಗೆ ಅರ್ಹವಾಗಿಸುತ್ತಾರೆ.
ಇನ್ನೂ ವಿಶೇಷ ಅಂದ್ರೆ ಪರಿಸರ ಸ್ನೇಹಿ ಶೌಚಾಲಯ ಬಳಸುವ ಮೂಲಕ, ಮಾನವ ತ್ಯಾಜ್ಯವನ್ನೂ ಸಂಗ್ರಹಿಸಿ ಗೊಬ್ಬರವನ್ನಾಗಿಸಿ ತಮ್ಮ ಗಾರ್ಡನ್ ಗಳಿಗೆ ಬಳಸ್ತಿದ್ದಾರೆ. ರಾಗಿ, ಭತ್ತ, ಬದನೆ, ಮೆಣಸಿನಕಾಯಿ, ನಿಂಬೆಹಣ್ಣು, ಮಾವು ಅಷ್ಟೇ ಅಲ್ಲದೆ ವಿವಿಧ ಬಗೆಯ ಹೂವಿನ ಗಿಡಗಳನ್ನು ನೆಟ್ಟು ತಮಗೂ, ವಿವಿದ ಬಗೆಯ ಚಿಟ್ಟೆಗಳು, ಜೆನುನೊಣ ಹಾಗೂ ಕ್ರಿಮಿ ಕೀಟಗಳಿಗೂ ಆಹಾರ ದೊರೆಯುವಂತೆ ಮಾಡ್ತಿದ್ದಾರೆ.
ಇನ್ನು ಮನೆಯ ಮುಂದೆ ಇಂಗು ಬಾವಿ (ಇಂಗು ಗುಂಡ) ಮಾಡಿರುವ ವಿಶ್ವನಾಥ್ ಅವರು ಚರಂಡಿ ನೀರನ್ನೂ ಇಂಗುವಂತೆ ಮಾಡಿ ಅಂತರ್ಜಲ ಹೆಚ್ಚಿಸುವುದಕ್ಕೆ ಸಹಕಾರಿಯಾಗಿದ್ದಾರೆ.
ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚೆಚ್ಚು ಜನ ಮಳೆ ನೀರು ಸಂಗ್ರಹಕ್ಕೆ ಮುಂದಾಗ್ತಿದಾರೆ, ಈ ಬಗ್ಗೆ ಹೆಚ್ಚೆಚ್ಚು ಜನರಿಗೆ ತಿಳಿ ಹೇಳಿದ್ರೆ ಎಲ್ಲರೂ ನೀರು ಉಳಿಸಲು ಮುಂದಾಗ್ತಾರೆ ಅನ್ನೋದು ವಿಶ್ವನಾಥ್ ಅವರ ಅಭಿಪ್ರಾಯ.