ಬೆಂಗಳೂರು: ಇತ್ತೀಚೆಗಷ್ಟೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ ಎಂದು ಅನಾಮದಾಯ ಪತ್ರ ಹರಿದಾಡಿದ್ದ ಬೆನ್ನಲ್ಲೇ ಇಂದು ಮತ್ತೊಂದು ಅನಾಮಧೇಯ ಪತ್ರ ಸೋಷಿಯಲ್ ಮೀಡಿಯಾ ಸೇರಿದಂತೆ ಎಲ್ಲೆಡೆ ಹರಿದಾಡುತ್ತಿದೆ. ಬಿ.ವೈ. ವಿಜಯೇಂದ್ರರನ್ನು ಗುರಿಯಾಗಿಟ್ಟುಕೊಂಡ ಪತ್ರ ಬಿಡುಗಡೆ ಮಾಡಿದ್ದು, ಸೂಪರ್ ಸಿಎಂ ಬಿ.ವೈ. ವಿಜಯೇಂದ್ರ ದರ್ಬಾರ್ ನಡೆಸುತ್ತಿದ್ದಾರೆ ಎನ್ನುವ ಆರೋಪ ಮಾಡಿರುವ ಪತ್ರ ವೈರಲ್ ಆಗಿದೆ.
ಪತ್ರದ ಸಾರಾಂಶ:
'ವಿಎಸ್ಟಿ ಟ್ಯಾಕ್ಸ್ ಮೂಲಕ ಭ್ರಷ್ಟಾಚಾರ ಸಂಗ್ರಹಣೆ ವ್ಯಾಪಕವಾಗಿದೆ. ಯಡಿಯೂರಪ್ಪನವರ ಮುಪ್ಪಿನ ಲಾಭ ಪಡೆದು ಪರ್ಯಾಯ ಕೂಟ ರಚಿಸಿಕೊಂಡಿದ್ದಾರೆ. ಕುಟುಂಬ ಸದಸ್ಯರು ಕಮಿಷನ್ ಆಧಾರದ ಮೇಲೆ ಸರ್ಕಾರಿ ಕೆಲಸಗಳನ್ನು ಮಾಡಿಸಿಕೊಡುತ್ತಿದ್ದಾರೆ. ಯಡಿಯೂರಪ್ಪನವರ ರಾಜಕೀಯ ಯುಗವನ್ನು ಮುಗಿಸಿಸಲು ವಿಜಯೇಂದ್ರ ವಾಮಮಾರ್ಗ ಹಿಡಿದಿದ್ದಾರೆ. ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಹಾಗೂ ವಂಶ ಪಾರಂಪರಿಕ ಆಡಳಿತ ಮೇಳೈಸುತ್ತಿದೆ. ಅನುವಂಶೀಯ ಆಡಳಿತಕ್ಕೆ ಸ್ವತಃ ಬಿಎಸ್ವೈ ಒತ್ತಾಸೆಯಾಗಿದ್ದಾರೆ. ಮಗನ ಕಾರ್ಯವೈಖರಿಯ ಬಗ್ಗೆ ತಂದೆ ಮೆಚ್ಚುಗೆ ವ್ಯಕ್ತಪಡಿಸಿರುವುದು ದುರಾದೃಷ್ಟಕರ ಸಂಗತಿ. ದೇವೇಗೌಡರ ಪುತ್ರ ವ್ಯಾಮೋಹವನ್ನು ಟೀಕಿಸುತ್ತಿದ್ದ ರಾಜಾಹುಲಿ ಇಂದು ತಮ್ಮ ಅಧಿಕಾರವನ್ನು ಕುಟುಂಬಕ್ಕೆ ದಯಪಾಲಿಸಿ ದೃತೃರಾಷ್ಟ್ರ ಪ್ರೇಮ ತೋರಿಸುತ್ತಿದ್ದಾರೆ. ಸಿಎಂ ಯಡಿಯೂರಪ್ಪ ಕೇವಲ ಉತ್ಸವ ಮೂರ್ತಿ. ವಿಜಯೇಂದ್ರ ತನ್ನದೇ ಆದ ಕೂಟ ರಚಿಸಿ ಸೂಪರ್ ಸಿಎಂ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಧ್ಯವರ್ತಿಗಳು ಹಾಗೂ ಹಣ ಕೊಟ್ಟು ಕೆಲಸ ಮಾಡಿಕೊಳ್ಳಲು ಇಚ್ಚಿಸುವರು ಈ ಕೂಟವನ್ನು ಸಂಪರ್ಕಿಸಿ ಕಮಿಷನ್ ಆಧಾರದ ಮೇಲೆ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಪಕ್ಷದ ಪ್ರಾಮಾಣಿಕ ಕಾರ್ಯಕರ್ತರು ಮುಖ್ಯಮಂತ್ರಿಗಳ ಆದೇಶ ಇದ್ದರೂ ಕೆಲಸ ಆಗದೆ ಪರಿತಪಿಸುತ್ತಿದ್ದಾರೆ. ವಿಜಯೇಂದ್ರ ಒಪ್ಪಿಗೆ ಹಾಗೂ ಆದೇಶ ಇಲ್ಲದೆ ಸರ್ಕಾರದಲ್ಲಿ ಏನೂ ನಡೆಯದು ಎನ್ನುವುದು ಶಾಸಕರ ಅನುಭವ.
ಪುತ್ರನನ್ನು ಭೇಟಿ ಮಾಡುವಂತೆ ಬಿಎಸ್ವೈ ಸೂಚನೆ ನೀಡುವುದು ನಮ್ಮ ಆತ್ಮಗೌರವಕ್ಕೆ ಧಕ್ಕೆ ಉಂಟುಮಾಡಿದೆ. ಸರ್ಕಾರವನ್ನು ಪ್ರೈ. ಲಿ. ಕಂಪನಿಯಂತೆ ಕಾರ್ಪೋರೇಟ್ ಸ್ಟೈಲ್ನಲ್ಲಿ ನಡೆಸುತ್ತಿದ್ದಾರೆ. ಮುಂದಿನ ಮುಖ್ಯಮಂತ್ರಿ ಎನ್ನುವ ಭ್ರಮೆಯಲ್ಲಿ ಉತ್ತರಾಧಿಕಾರಿಯೆಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಬಿಜೆಪಿ ಶಾಸಕರುಗಳ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಆಗುತ್ತಿಲ್ಲ. ಪ್ರತಿಪಕ್ಷಗಳ ಮುಖಂಡರುಗಳ ಕ್ಷೇತ್ರಗಳಿಗೆ ನೂರಾರು ಕೋಟಿ ಅನುದಾನ ಬಿಡುಗಡೆಗೆ ಶಿಫಾರಸು ಮಾಡಿದ್ದು ಈ ಮೂಲಕ ಭ್ರಷ್ಟಾಚಾರದ ವಿರುದ್ಧ ಪ್ರತಿಪಕ್ಷಗಳ ಧ್ವನಿಯನ್ನು ಕೊಂಡುಕೊಂಡಿದ್ದಾರೆ. ತಂದೆ ಮಕ್ಕಳ ಈ ವರ್ತನೆಗೆ ಶಾಸಕರು ಬೇಸತ್ತಿದ್ದೇವೆ. ಕ್ಷೇತ್ರದ ಮತದಾರರ ಮುಂದೆ ತಲೆತಗ್ಗಿಸುವಂತಾಗಿದೆ. ನಮ್ಮ ಅಳಲನ್ನು ಪಕ್ಷದ ಆಂತರಿಕ ಹಾಗೂ ಶಾಸಕಾಂಗ ಸಭೆಯಲ್ಲಿ ಹೇಳಲೂ ಅವಕಾಶ ಸಿಗುತ್ತಿಲ್ಲ. ಮುಖ್ಯಮಂತ್ರಿ ಸ್ಥಾನದ ಸಂವಿಧಾನ ಬದ್ಧ ಅಧಿಕಾರವನ್ನು ವಿಜಯೇಂದ್ರ ಚಲಾಯಿಸುತ್ತಿದ್ದಾರೆ. ಪ್ರತಿಯೊಂದು ಕೆಲಸಕ್ಕೆ ವಿಜಯೇಂದ್ರ ಮುಂದೆ ತಲೆತಗ್ಗಿಸಿ ನಿಲ್ಲುವಂತ ಅನಿವಾರ್ಯತೆ ಶಾಸಕರಿಗೆ ಬಂದೊದಗಿದೆ. ಸ್ವಾಭಿಮಾನ ಮೂಲ ಮಂತ್ರವಾಗಿರುವ ಬಿಜೆಪಿ ಪಕ್ಷದ ಶಾಸಕರು ಸಿಎಂ ಪುತ್ರನ ಮುಂದೆ ಅಂಗಲಾಚುವುದು ನಾಚಿಗೇಡಿನ ಸಂಗತಿ'. ಇಂತಹದೊಂದು ಅನಾಮಧೇಯ ಪತ್ರವೊಂದು ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಚರ್ಚೆಗೆ ಕಾರಣವಾಗಿದೆ.