ಬೆಂಗಳೂರು: ಹೃದಯ ವೈಫಲ್ಯದಿಂದ ಬಳಲುತ್ತಿದ್ದ ಮಹಿಳೆಗೆ ಬಿಐ-ವಿಎಡಿ ಯಂತ್ರ ಅಳವಡಿಸಿ ನಗರದ ವಿಕ್ರಮ್ ಆಸ್ಪತ್ರೆಯ ವೈದ್ಯರು ನಡೆಸಿದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.
ಆಶಾ(ಹೆಸರು ಬದಲಾಯಿಸಲಾಗಿದೆ)ಶಸ್ತ್ರಚಿಕಿತ್ಸೆಗೊಳಗಾದವರು. ಈಕೆ 2017ರಿಂದ ಗಂಭೀರ ಸ್ವರೂಪದ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದರಂತೆ. ವಿಕ್ರಮ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದ ಬಳಿಕ ಅವರಿಗೆ ವೈದ್ಯಕೀಯ ತಪಾಸಣೆ ನಡೆಸಲಾಗಿತ್ತು. ಟ್ಯಾಚಿ ಕಾರ್ಡಿಯಾ ಎಂಬ ಗಂಭೀರ ರೋಗದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿತ್ತು.
ಚಿಕಿತ್ಸೆ ಮುಂದುವರೆಸಿದ ವೈದ್ಯರು, ಕೃತಕ ಹೃದಯ ಅಳವಡಿಸುವ ಉದ್ದೇಶದಿಂದ ಬಿಐ-ವಿಎಡಿ ಯಂತ್ರವನ್ನು ಅಳವಡಿಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ್ದಾರೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಈ ಯಂತ್ರ ಅಳವಡಿಸಿ 155 ದಿನ ಸುದೀರ್ಘ ಶಸ್ತ್ರಚಿಕಿತ್ಸೆ ನಡೆಸಿರುವ ಹೆಗ್ಗಳಿಕೆ ವಿಕ್ರಮ್ ಆಸ್ಪತ್ರೆಯ ವೈದ್ಯರದ್ದಾಗಿದೆ.
ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಪಿ.ರಂಗನಾಥ್ ಮಾತನಾಡಿ, ರೋಗಿಯ ಹೃದಯ ಸಂಬಂಧಿ ಕಾಯಿಲೆ ಗಂಭೀರ ಸ್ವರೂಪದ್ದಾಗಿತ್ತು. ಶಸ್ತ್ರ ಚಿಕಿತ್ಸೆ ಕೂಡ ಸವಾಲಿನದ್ದಾಗಿತ್ತು. ಮಹಿಳೆಯ ಹೃದಯ ದುರ್ಬಲಗೊಂಡಿದ್ದರಿಂದ ಜೀವಕ್ಕೆ ಅಪಾಯಕಾರಿಯಾಗಿತ್ತು. ಇದನ್ನೆಲ್ಲಾ ಮೆಟ್ಟಿನಿಂತು ಸುದೀರ್ಘ ಶಸ್ತ್ರಚಿಕಿತ್ಸೆ ಮಾಡಿದ್ದೇವೆ. ಈಗ ಮಹಿಳೆಯು ಸಂಪೂರ್ಣ ಗುಣಮುಖರಾಗಿದ್ದಾರೆ ಅಂತಾ ವೈದ್ಯರು ಹೇಳಿಕೊಂಡಿದ್ದಾರೆ.