ಬೆಂಗಳೂರು: ಖಾಸಗಿ ಕಾರಣಕ್ಕಾಗಿ ದೆಹಲಿಗೆ ಹೋಗಿ ಬಂದಿದ್ದೇನೆಯೇ ಹೊರತು, ಯಾವುದೇ ರಾಜಕೀಯ ಉದ್ದೇಶದಿಂದ ದೆಹಲಿಗೆ ತೆರಳಿರಲಿಲ್ಲ ಎಂದು ಬಿಜೆಪಿ ಉಪಾಧ್ಯಕ್ಷ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.
ಸಿಎಂ ಅಧಿಕೃತ ನಿವಾಸ ಕಾವೇರಿ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೆಹಲಿಗೆ ಹೋಗಿ ಬಂದಿದ್ದು ನಿಜ. ವೈಯಕ್ತಿಕ ಕಾರ್ಯ ನಿಮಿತ್ತ ದೆಹಲಿಗೆ ತೆರಳಿದ್ದೆ. ಯಾವುದೇ ನಾಯಕರನ್ನು ಭೇಟಿ ಮಾಡಲು ಹೋಗಿರಲಿಲ್ಲ, ರಾಜಕಾರಣಕ್ಕಾಗಿಯೂ ಹೋಗಿರಲಿಲ್ಲ ಎಂದು ತಿಳಿಸಿದರು.
ಸಂಪುಟ ವಿಸ್ತರಣೆ ಕುರಿತು ರಾಷ್ಟ್ರೀಯ ಅಧ್ಯಕ್ಷರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಅವರು ಯಾವಾಗ ನಿರ್ಧಾರ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಹೈಕಮಾಂಡ್ ನಾಯಕರು ಸೂಚನೆ ನೀಡಿದಾಗ ಮುಖ್ಯಮಂತ್ರಿಗಳು ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮಾಡಲಿದ್ದಾರೆ ಎಂದು ವಿಜಯೇಂದ್ರ ಹೇಳಿದ್ರು.
ಸದ್ಯದಲ್ಲೇ ಮಸ್ಕಿ ಹಾಗೂ ಬಸವಕಲ್ಯಾಣ ಉಪ ಚುನಾವಣೆಗಳು ನಡೆಯುವ ಸಾಧ್ಯತೆಯಿದೆ. ನನಗೆ ಬಸವಕಲ್ಯಾಣದ ಕಡೆ ಓಡಾಡಿಕೊಂಡು ಕೆಲಸ ಮಾಡುವಂತೆ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೂಚನೆ ನೀಡಿದ್ದಾರೆ. ಅದರಂತೆ ನಾನು ಹಾಗೂ ಸಂಸದ ಭಗವಂತ ಖೂಬಾ ಬಸವಕಲ್ಯಾಣದಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ತಿಳಿಸಿದರು.
ಮರಾಠ ಪ್ರಾಧಿಕಾರಕ್ಕೆ ಸಮರ್ಥನೆ:
ಮರಾಠ ಪ್ರಾಧಿಕಾರವನ್ನು ಭಾಷಾಧಾರಿತವಾಗಿ ಮಾಡಿಲ್ಲ, ಮರಾಠಿಗರು ಕರ್ನಾಟಕದಲ್ಲಿ ಬಹಳ ವರ್ಷಗಳಿಂದ ವಾಸವಿದ್ದಾರೆ. ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಇದರಲ್ಲಿ ಯಾವುದೇ ತಪ್ಪು ಕಲ್ಪನೆ ಬೇಡ, ಎಲ್ಲವನ್ನು ವಿವಾದಕ್ಕೆ ಲಿಂಕ್ ಮಾಡುವುದು ಸರಿಯಲ್ಲ. ತಿರುವಳ್ಳುವರ್ ಮತ್ತು ಸರ್ವಜ್ಞನ ಪ್ರತಿಮೆಯನ್ನು ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ನಿರ್ಮಿಸಿದರು. ದಶಕಗಳ ವಿವಾದವನ್ನು ಮುಖ್ಯಮಂತ್ರಿಗಳು ಸೌಹಾರ್ದಯುತವಾಗಿ ತಮಿಳುನಾಡಿನ ಜೊತೆ ಮಾತಾಡಿ ಬಗೆಹರಿಸಿದರು. ಈಗ ಮರಾಠ ಅಭಿವೃದ್ಧಿ ಪ್ರಾಧಿಕಾರದ ವಿಷಯದಲ್ಲಿ ತಪ್ಪು ಕಲ್ಪನೆ ಮೂಡಿರುವುದು ಸಮಂಜಸವಲ್ಲ.
ಕಾಂಗ್ರೆಸ್ ದಿವಾಳಿ:
ಮಸ್ಕಿಯಲ್ಲಿ ಬಿಜೆಪಿ ಪರಾಜಿತ ಅಭ್ಯರ್ಥಿ ತುರುವಿಹಾಳ್ರನ್ನು ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್ ಕೊಡಲು ಕಾಂಗ್ರೆಸ್ ಮುಂದಾಗಿದೆ. 40-50 ವರ್ಷ ಅಧಿಕಾರದಲ್ಲಿದ್ದ ಪಕ್ಷಕ್ಕೆ ಅಭ್ಯರ್ಥಿ ಸಿಕ್ಕಿಲ್ಲ ಎಂದರೆ ನಾಚಿಕೆಗೇಡು. ಕಾಂಗ್ರೆಸ್ ದಿವಾಳಿಯಾಗಿದೆ, ಕಾಂಗ್ರೆಸ್ನಿಂದ ಯಾರೇ ಅಭ್ಯರ್ಥಿ ನಿಂತರೂ, ಬಿಜೆಪಿ ಅಭ್ಯರ್ಥಿ ಹೇಗೆ ಗೆಲ್ಲಬೇಕು ಎನ್ನುವ ತಂತ್ರಗಾರಿಕೆಯನ್ನು ರಾಜ್ಯಾಧ್ಯಕ್ಷರು ಮತ್ತು ಮುಖ್ಯಮಂತ್ರಿಗಳು ಮಾಡಲಿದ್ದಾರೆ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.