ಬೆಂಗಳೂರು: ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ನಮ್ಮ ಪಕ್ಷಕ್ಕೆ ದೊಡ್ಡ ಬಾಹುಬಲಿ ಇದ್ದಂತೆ ಎಂದು ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮಲು, ವಿಜಯೇಂದ್ರ ಅವರನ್ನು ಹಾಡಿ ಹೊಗಳಿದ್ದಾರೆ.
ಸಿಎಂ ನಿವಾಸ ಕಾವೇರಿಯಲ್ಲಿ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಕೆಲಸ ವಿಜಯೇಂದ್ರ ಮಾಡಿದ್ದಾರೆ. ಎಲ್ಲೆಲ್ಲಿ ವಿಜಯೇಂದ್ರ ಹೋಗುತ್ತಾರೋ ಅಲ್ಲೆಲ್ಲಾ ಗೆಲುವಾಗುತ್ತದೆ ಎಂದು ಈ ಹಿಂದೆ ಹೇಳಿದ್ದೆ, ಈಗಲೂ ಸಹ ಅದೇ ರೀತಿ ಆಗಿದೆ. ಬಿಜೆಪಿಯನ್ನು ಗೆಲ್ಲಿಸಿದ ಎರಡೂ ಕ್ಷೇತ್ರದ ಜನರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಜನ ನಮ್ಮ ಸಿಎಂ ಯಡಿಯೂರಪ್ಪ ಮೇಲೆ ಪ್ರೀತಿ, ವಿಶ್ವಾಸ ಇಟ್ಟಿದ್ದಾರೆ ಎಂಬುವುದಕ್ಕೆ ಈ ಉಪಚುನಾವಣೆ ಫಲಿತಾಂಶವೇ ಸಾಕ್ಷಿ ಎಂದು ಸಂತಸ ವ್ಯಕ್ತಪಡಿಸಿದರು.
ಕಾಂಗ್ರೆಸ್ನವರಿಗೆ ಬೇರೇನೂ ಕಾರಣಗಳಿಲ್ಲ, ಏನೇನು ಮಾತನಾಡಬಾರದೋ ಎಲ್ಲವನ್ನೂ ಮಾತಾಡಿದ್ದಾರೆ. ಉಪಚುನಾವಣೆ ನಂತರ ಬಿಜೆಪಿ ಸರ್ಕಾರ ಬೀಳುತ್ತದೆ ಅಂದಿದ್ದರು, ಪುನಃ ಸಿಎಂ ಆಗ್ತೀವಿ ಅಂತ ಸಿದ್ದರಾಮಯ್ಯ ಅಂದುಕೊಂಡಿದ್ರು. ಸಿಎಂ ಕುರ್ಚಿ ಇರೊಲ್ಲ ಹೀಗೆ ಹತ್ತು ಹಲವು ಊಹಾಪೋಹದ ಮಾತುಗಳನ್ನು ಹುಟ್ಟು ಹಾಕಿದ್ದರು. ಆದರೆ, ಈ ಉಪ ಚುನಾವಣೆ ಫಲಿತಾಂಶದಿಂದ ಅವರಿಗೆ ಸ್ಪಷ್ಟ ಉತ್ತರ ಸಿಕ್ಕಿದೆ ಎಂದರು.
ಇನ್ನು ಕಾಂಗ್ರೆಸ್ ಪಕ್ಷದವರ ಕಾಲೆಳೆದ ರಾಮುಲು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆದ್ದರೆ, ಅವರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ, ಎಲ್ಲವೂ ಸರಿಯಾಗಿಯೇ ಇರುತ್ತದೆ. ಆದರೆ ಸೋತರೆ ಮಾತ್ರ ಇವಿಎಂ ಮೇಲೆ ಅನುಮಾನ ವ್ಯಕ್ತಪಡಿಸುತ್ತಾರೆ ಎಂದು ಟೀಕಿಸಿದರು.