ಬೆಂಗಳೂರು: ಬಸವಕಲ್ಯಾಣ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ವಿಜಯ ಸಿಂಗ್ ಇಂದು ರಣದೀಪ್ ಸುರ್ಜೇವಾಲಾ ಅವರನ್ನು ಭೇಟಿಯಾಗಿ ಚರ್ಚಿಸಿದರು.
ರಾಜ್ಯದ ಕಾಂಗ್ರೆಸ್ ನಾಯಕರ ಜೊತೆ ವೈಯಕ್ತಿಕವಾಗಿ ಚರ್ಚಿಸುವ ಉದ್ದೇಶದಿಂದ ಎರಡು ದಿನದ ಭೇಟಿಗಾಗಿ ಬೆಂಗಳೂರಿಗೆ ಆಗಮಿಸಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಬೆಂಗಳೂರಿನ ಕುಮಾರಕೃಪ ಅತಿಥಿ ಗೃಹದಲ್ಲಿ ತಂಗಿದ್ದಾರೆ. ಇಂದು ಸಹೋದರ ಹಾಗೂ ವಿಧಾನಸಭೆ ಕಾಂಗ್ರೆಸ್ ಸಚೇತಕ ಆನಂದ ಸಿಂಗ್ ಜೊತೆ ಆಗಮಿಸಿದ ವಿಜಯ ಸಿಂಗ್ ಸುದೀರ್ಘವಾಗಿ ಸುರ್ಜೇವಾಲಾ ಜೊತೆ ಚರ್ಚೆ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ಆಕಾಂಕ್ಷಿಗಳನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಹೇಗಾದರೂ ಟಿಕೆಟ್ ಗಿಟ್ಟಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದಾರೆ ಎನ್ನಲಾಗ್ತಿದೆ. ಬಸವಕಲ್ಯಾಣ ಶಾಸಕರಾಗಿದ್ದ ನಾರಾಯಣರಾವ್ ನಿಧನದಿಂದ ತೆರವಾಗಿರುವ ಕ್ಷೇತ್ರಕ್ಕೆ ಚುನಾವಣೆ ನಡೆಯಬೇಕಿದೆ. ಈಗಾಗಲೇ ಸಿದ್ದರಾಮಯ್ಯ ತಮ್ಮ ಆಪ್ತರಾಗಿದ್ದ ನಾರಾಯಣರಾವ್ ಅವರಿಂದ ತೆರವಾಗಿರುವ ಕ್ಷೇತ್ರಕ್ಕೆ ಅವರ ಪತ್ನಿ ಮಲ್ಲಮ್ಮ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಡ ಹೇರಿದ್ದಾರೆ.
ಓದಿ: ಕುಮಾರಕೃಪಾದಲ್ಲಿ ಬೆಂಗಳೂರು ನಾಯಕರ ಜೊತೆ ಸುರ್ಜೇವಾಲಾ ಸಭೆ ಆರಂಭ
ಇನ್ನೊಂದೆಡೆ ಮಾಜಿ ಸಚಿವ ರಾಜಶೇಖರ್ ಪಾಟೀಲ್ ತಮ್ಮ ಸೋದರ ಹಾಗೂ ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ ಪಾಟೀಲರನ್ನು ಕಣಕ್ಕಿಳಿಸಲು ದೊಡ್ಡ ಮಟ್ಟದಲ್ಲಿ ಲಾಬಿ ನಡೆಸಿದ್ದಾರೆ. ಈ ಮಧ್ಯೆ ಹೇಗಾದರೂ ತಮ್ಮ ಸೋದರನಿಗೆ ಟಿಕೆಟ್ ಕೊಡಿಸಲು ಅಜಯ ಸಿಂಗ್ ಮುಂದಾಗಿದ್ದು, ಸಾಕಷ್ಟು ನಾಯಕರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಇದರ ಭಾಗವಾಗಿಯೇ ಇಂದು ವಿಜಯ ಸಿಂಗ್ ಜೊತೆ ಅಜಯ ಸಿಂಗ್ ಕುಮಾರಕೃಪ ಅತಿಥಿ ಗೃಹಕ್ಕೆ ಆಗಮಿಸಿದ್ದರು ಎಂದು ತಿಳಿದು ಬಂದಿದೆ.