ಬೆಂಗಳೂರು : ಕೋವಿಡ್ನಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ಸರ್ಕಾರಕ್ಕೆ ಸಹಾಯ ಹಸ್ತ ನೀಡಬೇಕಿದ್ದ ಖಾಸಗಿ ಆಸ್ಪತ್ರೆ ಮತ್ತು ಕಾಲೇಜುಗಳು ದೂರ ಸರಿಯುತ್ತಿವೆ. ಈಗಾಗಲೇ ಮನವಿ- ಎಚ್ಚರಿಕೆ ನೀಡಿದರೂ ಸರಿಯಾದ ಸಮಯಕ್ಕೆ ಕೊರೊನಾ ಚಿಕಿತ್ಸೆ ನೀಡದೇ, ಲಭ್ಯವಿರುವ ಹಾಸಿಗೆಗಳ ಮಾಹಿತಿ ನೀಡದೇ ನುಣುಚಿಕೊಳ್ಳುತ್ತಿವೆ. ಹೀಗಾಗಿ ಖಾಸಗಿ ಆಸ್ಪತ್ರೆಗಳು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಮೂಗುದಾರ ಹಾಕಲು ಸರ್ಕಾರ ಪ್ಲಾನ್ ಮಾಡಿಕೊಂಡಿದೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆ ಮೆಡಿಕಲ್ ಕಾಲೇಜುಗಳಿಗೆ ಉಸ್ತುವಾರಿಗಳ ನೇಮಕ ಮಾಡಿದ್ದು, ಐಎಎಸ್ ಹಾಗೂ ಐಪಿಎಸ್ ಇಬ್ಬರು ಅಧಿಕಾರಿಗಳ ತಂಡ ರಚನೆ ಮಾಡಲಿದೆ. ಇದಕ್ಕಾಗಿ 7 ತಂಡಗಳನ್ನು ರಚಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಆದೇಶ ಹೊರಡಿಸಿದ್ದಾರೆ. ಒಂದು ತಂಡದಲ್ಲಿ ಒಬ್ಬರು ಐಎಎಸ್ ಒಬ್ಬರು ಐಪಿಎಸ್ ಅಧಿಕಾರಿ ಇರಲಿದ್ದಾರೆ. 31 ಖಾಸಗಿ ಆಸ್ಪತ್ರೆ ಹಾಗೂ ಖಾಸಗಿ ಮೆಡಿಕಲ್ ಕಾಲೇಜುಗಳ ಉಸ್ತುವಾರಿಗೆ 7 ತಂಡ ರಚನೆ ಮಾಡಲಾಗುತ್ತೆ.
ಸರ್ಕಾರ ಶಿಫಾರಸು ಮಾಡುವ ರೋಗಿಗಳನ್ನು ದಾಖಲು ಮಾಡುವುದು, ಗುಣಮುಖರಾಗಿ ಡಿಸ್ಚಾರ್ಜ್ ಆಗುವ ರೋಗಿಗಳ ಮಾಹಿತಿ ಸಂಗ್ರಹ ಮಾಡುವುದು, ಇನ್ನು ಬೆಡ್ಗಳ ಲಭ್ಯತೆ ಬಗ್ಗೆ ತಂಡವು ಮಾಹಿತಿ ಕಲೆಹಾಕಲಿದೆ. ಅಲ್ಲದೇ ರೋಗಿಗಳನ್ನು ದಾಖಲು ಮಾಡಿಕೊಳ್ಳುವುದು ನಿರಾಕರಿಸಿದರೆ ಕ್ರಮಕೈಗೊಳ್ಳುವ ಅಧಿಕಾರ ಕೂಡ ಈ ತಂಡಕ್ಕಿರಲಿದೆ.
ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪೆಟ್ಟು ಎಂಬಂತೆ ಇದೀಗ ಎಲ್ಲಾ ಮಾತುಕತೆ ನಡೆಸಿ ಸಭೆ ಎಚ್ಚರಿಕೆ ನಂತರ ಅಧಿಕಾರಿಗಳ ಮೂಲಕ ಪಾಠ ಹೇಳಲು ಸರ್ಕಾರ ಮುಂದಾಗಿದೆ.