ಬೆಂಗಳೂರು: ವಿಧಾನ ಪರಿಷತ್ ಕಲಾಪದಲ್ಲಿ ಸ್ವಾತ್ರಂತ್ಯ ಹೋರಾಟಗಾರ ದೊರೆಸ್ವಾಮಿ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆ ಕುರಿತ ವಿಷಯಕ್ಕೆ ಬಲಿಯಾಯಿತು. ಬೆಳಗಿನ ಕಲಾಪ ಒಂದೂವರೆ ಗಂಟೆ ಮುಂದೂಡಿಕೆಯಾಗಿ ಮತ್ತೆ ಆರಂಭಗೊಂಡರೂ ಸದನದಲ್ಲಿ ಮತ್ತೆ ಗದ್ದಲ ಕೋಲಾಹಲ ಸೃಷ್ಟಿಯಾಯಿತು. ಮತ್ತೆ ಕಾಂಗ್ರೆಸ್ ನಾಯಕರು ಯತ್ನಾಳ್ ವಿರುದ್ಧ ಘೊಷಣೆ ಕೂಗಿದ ಪರಿಣಾಮ ಒಂದೇ ನಿಮಿಷದಲ್ಲಿ ಕಲಾಪು ಮುಗಿಸಿ, ಅಧಿವೇಶನವನ್ನು ನಾಳೆಗೆ ಮುಂದೂಡಿಕೆಯಾಯಿತು.
ಬೆಳಗ್ಗೆ ಮುಂದೂಡಲ್ಪಟ್ಟ ಕಲಾಪ ಮಧ್ಯಾಹ್ನ 1 ಗಂಟೆಗೆ ಆರಂಭಗೊಳ್ಳುತ್ತಿದ್ದಂತೆ ಸದನದ ಬಾವಿಯಲ್ಲಿ ಕಾಂಗ್ರೆಸ್ ಸದಸ್ಯರು ಧರಣಿ ಮುಂದುವರೆಸಿದರು. ಯತ್ನಾಳ್ ಕ್ಷಮೆ ಯಾಚಿಸುವಂತೆ ಆಗ್ರಹಿಸಿದರು.
ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್, ಈ ಸದನದ ಸದಸ್ಯರಲ್ಲದವರು ಸದನದ ಹೊರಗೆ ಮಾತನಾಡಿದ ಬಗ್ಗೆ ಇಲ್ಲಿ ಕ್ಷಮೆಕೇಳಬೇಕು ಎಂದು ಒತ್ತಡ ಹೇರಲು ಸಾಧ್ಯವಿಲ್ಲ, ಕೆಟ್ಟ ಮೇಲ್ಪಂಕ್ತಿಯನ್ನು ಹುಟ್ಟುಹಾಕಬಾರದು, ಇಂತಹ ಅವಕಾಶ ನಿಯಮಾವಳಿಯಲ್ಲಿ ಇಲ್ಲ ಹಾಗಾಗಿ ಚರ್ಚೆಗೆ ಒಂದು ಚೌಕಟ್ಟು ಹಾಕಬೇಕು ಎಂದರು.
ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ ಸರ್ಕಾರದಿಂದ ಉತ್ತರ ಬೇಕು ಎಂದರೆ ನೋಟಿಸ್ ಕೊಟ್ಟು ಮಾತನಾಡಿ ಎಂದರು.
ಇದಕ್ಕೆ ಕಿಡಿಕಾರಿದ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ನಿಯಮಾವಳಿ ಪುಸಕ್ತದಲ್ಲಿನ ಉಲ್ಲೇಖವನ್ನು ಪ್ರದರ್ಶಿಸಿದರು. ಸದನದ ಒಳಗೆ ಮತ್ತು ಹೊರಗೆ ಉತ್ತಮ ನಡವಳಿಕೆ ಇರಬೇಕು ಎಂದು ಸಂವಿಧಾನದಲ್ಲಿ ಇದೆ. ಸದಸ್ಯರ ನಡವಳಿಕೆ ಹೇಗಿರಬೇಕು ಎಂದು ಸ್ಪಷ್ಟ ನಿಯಮಾವಳಿ ಇಲ್ಲದೇ ಇದ್ದರೂ ಸದನದ ಗೌರವಕ್ಕೆ ಚ್ಯುತಿ ಬಂದರೆ ಸದನದ ನಿಂದನೆ ಎಂದು ಪರಿಗಣಿಸಬಹುದು ಎನ್ನುತ್ತಾ ಯತ್ನಾಳ್ ಹೇಳಿಕೆ ಕುರಿತು ಚರ್ಚೆಗೆ ಪಟ್ಟುಹಿಡಿದರು.
ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಎರಡೂ ಮನೆಯಲ್ಲಿ ಯಾವುದಾದರೂ ಮನೆಯ ಸದಸ್ಯರಾದರೂ ಒಂದೇ, ಎರಡೂ ಕಡೆ ಒಂದೇ ರೀತಿ ಕಲಾಪ ನಡೆಯಲಿದೆ. ಅವರು ನೋಟಿಸ್ ಕೊಡಿ ಅಂತಾರೆ ಇವರು ಕೊಡಲ್ಲ ಅಂತಾರೆ. ಹೀಗಾದರೆ, ಇದು ಮುಗಿಯೋದು ಹೇಗೆ? ಸಭಾನಾಯಕರು ಎಲ್ಲದಕ್ಕೂ ಜವಾಬ್ದಾರಿ ನೀವು ಸರ್ಕಾರದ ಪರ ನಿಲುವು ಹೇಳಬೇಕು ಎಂದರು.
ಈ ವೇಳೆ, ಮತ್ತೆ ಮಾತನಾಡಿದ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್, ದೊರೆಸ್ವಾಮಿ ಅವರ ಬಗ್ಗೆ ನಮಗೂ ಗೌರವ ಇದೆ, ಅವರು ಸ್ವಾತಂತ್ರ್ಯ ಹೋರಾಟಗಾರರು ಎನ್ನುವುದರಲ್ಲಿ ಅನುಮಾನ ಇಲ್ಲ. ಆದರೆ, ಅವರು ನೀಡುತ್ತಿರುವ ಎಲ್ಲ ಹೇಳಿಕೆಗಳು ಮತ್ತು ಅವರ ಎಲ್ಲ ಚಟುವಟಿಕೆಗಳನ್ನು ಸ್ವಾತಂತ್ರ್ಯ ಹೋರಾಟಗಾರ ಎನ್ನುವ ದೃಷ್ಟಿಯಲ್ಲಿ ನೋಡಬೇಕಾ ಹೇಗೆ? ಕನ್ನಯ್ಯ ಕುಮಾರ್ ಜೊತೆ ಇದ್ದಾಗ ತುಕ್ಡೆ ತುಕ್ಡೆ ಕರೆಂಗೆ, ತುಡ್ಕೆ ಗ್ಯಾಂಗ್ ಅಂತಾರೆ ಎನ್ನುತ್ತಿದ್ದಂತೆ ಸದನದಲ್ಲಿ ಗದ್ದಲ ಕೋಲಾಹಲವೆದ್ದಿತು ಸದನ ಸಹಜ ಸ್ಥಿತಿಗೆ ಬರಲಿಲ್ಲ ಪರಿಣಾಮವಾಗಿ ಸಂಜೆ 4 ಗಂಟೆಗೆ ಕಲಾಪವನ್ನು ಮುಂದೂಡಲಾಗಿತ್ತು. ಮತ್ತೆ ಕಲಾಪ ಆರಂಭವಾದಾಗ ಕಾಂಗ್ರೆಸ್ ನಾಯಕರು ತಮ್ಮ ಘೋಷಣೆ ನಿಲ್ಲಿಸದ ಪರಿಣಾಮ ನಾಳೆಗೆ ಅಧಿವೇಶನವನ್ನು ಮುಂದೂಡಲಾಯಿತು.