ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ ಕಾರ್ಯಪಡೆ ಅಧ್ಯಕ್ಷರನ್ನಾಗಿ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ನೇಮಕವನ್ನು ಸದನದಲ್ಲಿ ಆಡಳಿತ ಪಕ್ಷದ ಸದಸ್ಯರೇ ಪ್ರಶ್ನಿಸುವ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ ಘಟನೆ ಇಂದು ವಿಧಾನ ಪರಿಷತ್ನಲ್ಲಿ ನಡೆಯಿತು.
ಬಿಜೆಪಿ ಸದಸ್ಯ ಹೆಚ್ ವಿಶ್ವನಾಥ್ ಅವರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಯಾವ ಮೊರಾಲಿಟಿ ಮೇಲೆ ನೇಮಕ ಮಾಡಿದ್ದೀರಿ, ಕೂಡಲೇ ಅವರನ್ನು ಬದಲಾಯಿಸಿ ಎಂದು ಒತ್ತಾಯಿಸಿ ಸರ್ಕಾರಕ್ಕೆ ಮುಜುಗರವನ್ನುಂಟು ಮಾಡಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದ ವೇಳೆ ಮಹಾಂತೇಶ್ ಕವಟಗಿಮಠ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, 34 ವರ್ಷದ ನಂತರ ರಾಷ್ಟ್ರೀಯ ಶಿಕ್ಷಣ ನೀತಿ ಬದಲಾಗಿದೆ. ನಮ್ಮ ರಾಜ್ಯದಲ್ಲಿ ಕಾರ್ಯರೂಪಕ್ಕೆ ತರಲು ಕಾರ್ಯಪಡೆ ರಚಿಸಲಾಗಿದೆ. ಯಾವ ರೀತಿ ನೀತಿಯನ್ನು ಕಾರ್ಯರೂಪಕ್ಕೆ ತರಬೇಕು ಎಂದು ಅನುಷ್ಠಾನ ಯೋಜನೆಯ ರೂಪುರೇಷೆಗಳನ್ನು ಕಾರ್ಯಪಡೆ ನೀಡಿದೆ. ಅದರ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. 2021ಕ್ಕೆ ಶಿಕ್ಷಣ ನೀತಿಯನ್ನು ಅನುಷ್ಠಾನ ಮಾಡಲಾಗುತ್ತದೆ. ಹಂತ ಹಂತವಾಗಿ ಕಾರ್ಯರೂಪಕ್ಕೆ ತರಲಾಗುತ್ತದೆ. ವ್ಯವಸ್ಥಿತವಾಗಿ ಕಾಯ್ದೆ ಮೂಲಕ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುತ್ತೇನೆ. ಪ್ರಾಥಮಿಕ, ಪ್ರೌಢ, ಉನ್ನತ ಶಿಕ್ಷಣ ಎರಡೂ ಇಲಾಖೆ ಜೊತೆ ಜೊತೆಯಾಗಿ ಅನುಷ್ಠಾನ ಮಾಡಲಿದ್ದೇವೆ ಎಂದರು.
ಶಿಕ್ಷಣ ಆಯೋಗ ರಚನೆ ಮಾಡಿದ್ದು, ಸಿಎಂ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗುತ್ತಿದೆ. ಪ್ರೌಢ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಇಲಾಖೆಯ ಇಬ್ಬರು ಸಚಿವರು ಉಪಾಧ್ಯಕ್ಷರಾಗಿರಲಿದ್ದಾರೆ.
ಐದು ವರ್ಷದ ಟಾರ್ಗೆಟ್ ಇರಿಸಿಕೊಂಡಿದ್ದೇವೆ. ಪ್ರೀ ನರ್ಸರಿಯಿಂದ ನೂತನ ಶಿಕ್ಷಣ ನೀತಿ ಅಳವಡಿಕೆ ಮಾಡಲಾಗುತ್ತದೆ ಎಂದರು.
ಈ ವೇಳೆ ಮಾತನಾಡಿದ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್, ಆರ್ಥಿಕ ಅಪರಾಧ ಹೊತ್ತ ಕಾಫಿ ಡೇ ಮಾಲೀಕರಿಗೂ ಕಾರ್ಯಪಡೆ ಅಧ್ಯಕ್ಷರಿಗೂ ಸಂಬಂಧ ಇದೆ. ಆರ್ಥಿಕ ಅಪರಾಧ ಎದುರಿಸುತ್ತಿರುವ ಕಂಪನಿಯ ಜೊತೆ ಸಂಬಂಧ ಇರುವ ಎಸ್.ವಿ. ರಂಗನಾಥ್ ಅವರನ್ನು ಯಾಕೆ ನೇಮಕ ಮಾಡಿದ್ದೀರಿ? ಯಾವ ಮೊರಾಲಿಟಿ ಮೇಲೆ ನೇಮಿಸಿದ್ದೀರಿ? ಬೇರೆ ಯಾರು ಇರಲಿಲ್ಲವೇ? ಶಿಕ್ಷಣ ಅಪವಿತ್ರ, ಆರ್ಥಿಕ ಅಪರಾಧದ ಹಿನ್ನೆಲೆಯಿರುವ ವ್ಯಕ್ತಿಯನ್ನು ಬದಲಿಸಿ ಬೇರೆಯವರನ್ನು ನೇಮಕ ಮಾಡಿ ಎಂದು ಒತ್ತಾಯಿಸಿದರು.
ಬಿಜೆಪಿ ಸದಸ್ಯ ವಿಶ್ವನಾಥ್ ಹೇಳಿಕೆಯನ್ನು ಪ್ರತಿಪಕ್ಷ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು. ಕಾಂಗ್ರೆಸ್ ಸದಸ್ಯ ಹರಿಪ್ರಸಾದ್ ಅವರು ಮಾತನಾಡಿ, ವಿಶ್ವನಾಥ್ ಹೇಳಿಕೆ ಸ್ವಾಗತಾರ್ಹ. ನಾನು ಹಿಂದಿ ಮಾತನಾಡುತ್ತೇನೆ, ಆದರೆ ಯಾರೂ ನನ್ನ ಮೇಲೆ ಹಿಂದಿ ಹೇರಲು ಸಾಧ್ಯವಿಲ್ಲ. ಇದು ಮಕ್ಕಳ ಭವಿಷ್ಯದ ವಿಷಯ, ಭಾಷೆಯ ವಿಚಾರದಲ್ಲಿ ಚರ್ಚಿಸಬೇಕು ಎಂದರು.
ಇದಕ್ಕೆ ಉತ್ತರ ನೀಡಿದ ಡಿಸಿಎಂ, ಭಾಷೆ ಬಗ್ಗೆ ತಕರಾರು ಇಲ್ಲ. ಮಾತೃಭಾಷೆಯಲ್ಲಿ ಕನಿಷ್ಠ 5 ನೇ ತರಗತಿವರೆಗೆ ಶಿಕ್ಷಣ ಕಡ್ಡಾಯ, 8 ರವರೆಗೆ ವಿಸ್ತರಿಸುವ ಚಿಂತನೆ ಇದೆ. ಆದರೆ ಹಿಂದಿ ಹೇರಿಕೆ ಪ್ರಶ್ನೆಯೇ ಇಲ್ಲ. ಅಗ್ರ ಸ್ಥಾನ ಕನ್ನಡ ಭಾಷೆ, ಕನ್ನಡ ನಾಡು, ಕನ್ನಡದಲ್ಲೇ ಶಿಕ್ಷಣ ಕೊಡಬೇಕು ಎನ್ನುವುದೇ ಆಗಿದೆ ಎಂದು ಸ್ಪಷ್ಟಪಡಿಸಿದರು. ಎಸ್.ವಿ ರಂಗನಾಥ್ ಮೇಲೆ ಆಪಾದನೆ ಸರಿಯಲ್ಲ. ಅವರು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ, ಯಾವುದೇ ಆಪಾದನೆಗೆ ಒಳಗಾದವರಲ್ಲ. ಹಾಗಾಗಿ ವಿಶ್ವನಾಥ್ ಬಳಸಿರುವ ಪದವನ್ನು ಕಡತದಿಂದ ತೆಗೆದುಹಾಕಬೇಕು, ನಾಡಿಗೆ ಉತ್ತಮ ಕೊಡುಗೆ ಕೊಟ್ಟಿದ್ದಾರೆ, ಅರ್ಹತೆ ಆಧಾರದಲ್ಲೇ ನೇಮಕ ಮಾಡಲಾಗಿದೆ ಎಂದು ಡಿಸಿಎಂ ಸ್ಪಷ್ಟಪಡಿಸಿದರು.
ಮಹಾರಾಣಿ ಕ್ಲಸ್ಟರ್ ವಿವಿ ವಿಶೇಷಾಧಿಕಾರಿ ವಿರುದ್ಧ ತನಿಖೆ:
ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದಲ್ಲಿ 136 ಬೋಧಕ ಬೋಧಕೇತರ ಸಿಬ್ಬಂದಿ ಅಕ್ರಮ ನೇಮಕಾತಿಯನ್ನು ರದ್ದುಪಡಿಸಿದ್ದು, ಈ ಅಕ್ರಮ ಎಸಗಿದ್ದ ವಿಶೇಷಾಧಿಕಾರಿ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ ಎಂದು ಡಿಸಿಎಂ ಡಾ. ಅಶ್ವತ್ಥ ನಾರಾಯಣ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಬಸವರಾಜ ಹೊರಟ್ಟಿ ಪರ ಶ್ರೀಕಂಠೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಮಹಾರಾಣಿ ಕ್ಲಸ್ಟರ್ ವಿವಿಗೆ ತಾತ್ಕಾಲಿಕವಾಗಿ 136 ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಂಡಿದ್ದರು. ಆದರೆ ಸರ್ಕಾರದ ಅನುಮತಿಯಿಲ್ಲದೆ ನೇಮಕಾತಿ ಮಾಡಿಕೊಂಡಿದ್ದರಿಂದ ಅವರನ್ನು ತೆಗೆದು ಹಾಕಲಾಗಿದೆ. ಕಾನೂನು ಬಾಹಿರ ನೇಮಕಾತಿಯನ್ನು ಮುಂದುವರೆಸಲು ಸಾಧ್ಯವಿಲ್ಲ, ಹಾಗಾಗಿ ಅವರನ್ನು ಉದ್ಯೋಗದಿಂದ ತೆರವು ಮಾಡಲಾಗಿದೆ. ವಿಶೇಷ ಅಧಿಕಾರಿ ವಿರುದ್ಧ ತನಿಖೆ ಮಾಡಲಾಗುತ್ತದೆ ಸದನಕ್ಕೆ ತಿಳಿಸಿದರು.
ಸಿಬ್ಬಂದಿಗೆ ಬಾಕಿ ವೇತನ ನೀಡಬೇಕಿದ್ದು, ತ್ವರಿತವಾಗಿ ವೇತನ ನೀಡುವ ಕೆಲಸವನ್ನು ಸರ್ಕಾರ ಮಾಡಲಿದೆ. ಮುಂದೆ ಅವಶ್ಯತೆ ಇದ್ದಲ್ಲಿ ಸರ್ಕಾರದ ಅನುಮತಿ ಪಡೆದು ಖಾಯಂ ಸಿಬ್ಬಂದಿ ನೇಮಕ ಮಾಡಲಾಗುತ್ತದೆ ಎಂದರು.
ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಶ್ರೀಕಂಟಡೇಗೌಡ, ಸರಿಯಾಗಿ ಉತ್ತರ ನೀಡುತ್ತಿಲ್ಲ, ಅತಿಥಿ ಉಪನ್ಯಾಸಕರನ್ನು ತೆಗೆದುಹಾಕಿದರೆ ಅವರ ಜಾಗಕ್ಕೆ ಯಾರನ್ನ ನೇಮಿಸಿದ್ದೀರಿ, ಯಾರು ಬಂದು ಪಾಠ ಮಾಡುತ್ತಾರೆ ಎಂದು ಪ್ರಶ್ನಿಸಿದರು. ಎರಡು ವರ್ಷ ಪಾಠ ಮಾಡಿದ ಸಿಬ್ಬಂದಿಯನ್ನು ಏಕಾಏಕಿ ಮನೆಗೆ ಕಳಿಸಿದರೆ ಹೇಗೆ? ಇದು ಅನ್ಯಾಯ ಎಂದು ಸದನದ ಬಾವಿಗಿಳಿದು ಧರಣಿ ನಡೆಸಿದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಇದು ಕ್ವಶ್ಚನ್ಅವರ್ ಆಗಬೇಕೆ ಹೊರತು ಕ್ವಶ್ಚನ್ ಡೇ ಆಗಬಾರದು, ಈ ವಿಚಾರದಲ್ಲಿ ಕುಳಿತು ಚರ್ಚಿಸಿ ಎಂದು ಸಲಹೆ ನೀಡಿ ಸದನದಲ್ಲಿನ ಸುದೀರ್ಘ ಚರ್ಚೆಗೆ ತೆರೆ ಎಳೆದರು.
ಖಾಸಗಿ ಶಾಲಾ ಶಿಕ್ಷಕರಿಗೆ ಆಹಾರ ಪದಾರ್ಥಗಳ ಕಿಟ್:
ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ಶಾಲಾ ಶಿಕ್ಷಕರಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡುವ ಸಂಬಂಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜೊತೆ ಚರ್ಚಿಸಿ ನಿರ್ಧರಿಸುವುದಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ರಮೇಶ್ ಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೋವಿಡ್ ವರ್ಷದಲ್ಲಿ ಸಮಾಜದ ಎಲ್ಲಾ ವರ್ಗದ ಮೇಲೆ ಪರಿಣಾಮ ಬೀರಿದೆ. ಶಿಕ್ಷಣ ಕ್ಷೇತ್ರದಲ್ಲಿ ಪೋಷಕರು ಕೂಡ ಆರ್ಥಿಕ ಜರ್ಜರಿತರಾಗಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳವರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಹಾಗಾಗಿ ಶುಲ್ಕವನ್ನು ಕಳೆದ ವರ್ಷಕ್ಕಿಂತ ಜಾಸ್ತಿ ಮಾಡಬೇಡಿ ಸಾಧ್ಯವಾದರೆ ಕಡಿಮೆ ಮಾಡಿ ಎಂದು ಖಾಸಗಿ ಶಾಲೆಗಳಿಗೆ ಸೂಚನೆ ನೀಡಿದ್ದೇವೆ. ಪ್ರಾಥಮಿಕ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಪೋಷಕರು ಸಿದ್ಧರಿಲ್ಲ, ಈ ದೃಷ್ಟಿಯಿಂದ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಜೊತೆ ಎರಡು ಸುತ್ತಿನ ಮಾತುಕತೆ ಸರ್ಕಾರ ನಡೆಸಿದೆ ಎಂದರು.
ಪೋಷಕರ ಪರಿಸ್ಥಿತಿ ನೋಡಬೇಕು ಅದೇ ರೀತಿ ಖಾಸಗಿ ಶಾಲೆಗಳ ಶಿಕ್ಷಕರ ಬಗ್ಗೆಯೂ ನೋಡಬೇಕು. ಯಾವ ರೀತಿ ಸಹಾಯ ಮಾಡಬಹುದು ಎಂದು ಸಭೆ ನಡೆಸಿದ್ದೇವೆ. ಖಾಸಗಿ ಶಾಲೆ ಶಿಕ್ಷಕರಿಗೆ ಆಹಾರ ಪದಾರ್ಥಗಳ ಕಿಟ್ ಕೊಡುವ ಬಗ್ಗೆ ಸಿಎಂ ಜೊತೆ ಚರ್ಚೆ ನಡೆಸಲಾಗುತ್ತದೆ ಎಂದರು.
ಫೈರ್ ಸೇಫ್ಟಿ ಸರ್ಕಾರದ ನಿಲುವಲ್ಲ, ಅದು ಕೋರ್ಟ್ ಆದೇಶ ಆದರೂ ಕೋವಿಡ್ ಕಾರಣದಿಂದ ಅಗ್ನಿ ಸುರಕ್ಷತಾ ಕ್ರಮ ಅಳವಡಿಕೆಗೆ ಈ ವರ್ಷ ಮೂರು ತಿಂಗಳು ಸಮಯ ಕೊಡಲಾಗುತ್ತದೆ ಎಂದರು.