ಬೆಂಗಳೂರು: ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ 275 ಜನರು ಸಾವನ್ನಪ್ಪಿದ್ದು ಇಡೀ ವಿಶ್ವವನ್ನೇ ದಂಗು ಬಡಿಸಿದೆ. ಇತ್ತ ಕರ್ನಾಟಕದಲ್ಲಿ ಅಪ್ರಾಪ್ತ ಬಾಲಕನೊಬ್ಬ ರೈಲ್ವೇ ಹಳಿಗಳ ಮೇಲೆ ಕಲ್ಲಿನ ತುಂಡುಗಳನ್ನು ಇಟ್ಟಿರುವ ಶಾಕಿಂಗ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಟೀಕೆಗೆ ಗುರಿಯಾಗಿದೆ. ಆದರೆ ಈ ವಿಡಿಯೋ ಐದು ವರ್ಷಗಳ ಹಿಂದಿನದ್ದು ಎನ್ನಲಾಗಿದೆ. ಆದರೆ ಸ್ಥಳ ಯಾವುದು ಅನ್ನುವುದು ಗೊತ್ತಿಲ್ಲ.
ರೈಲು ಹಳಿಗಳ ಮೇಲೆ ಸುಮಾರು ದೂರ ಕಲ್ಲುಗಳನ್ನು ಇಡಲಾಗಿದೆ. ಹೀಗೆ ಕಲ್ಲು ಇಟ್ಟಿದ್ದು ಬಾಲಕ ಎಂಬುದು ಆಘಾತಕಾರಿ ಸಂಗತಿ. ಅಪಾಯಕಾರಿ ಕೃತ್ಯದಲ್ಲಿ ತೊಡಗಿದ್ದ ವೇಳೆ ಜನರು ಬಾಲಕನನ್ನು ಹಿಡಿದು ವಿಚಾರಿಸುತ್ತಿರುವುದು ವಿಡಿಯೋದಲ್ಲಿದೆ. ಅಲ್ಲದೇ, ಆ ಬಾಲಕನಿಂದಲೇ ರೈಲು ಹಳಿಯ ಮೇಲಿನ ಕಲ್ಲಿನ ತುಂಡಗಳನ್ನು ತೆಗೆಸಿ, ನಡೆಯಬಹುದಾಗಿದ್ದ ಮತ್ತೊಂದು ಅಪಘಾತವನ್ನು ತಪ್ಪಿಸಿದ್ದಾರೆ.

ಕ್ಷಮೆ ಕೋರಿದ ಬಾಲಕ: ಜನರು ಬಾಲಕನನ್ನು ಹಿಡಿದು ಗದರಿಸಿ ಕೇಳಿದಾಗ, ತಾನು ಇದೇ ಮೊದಲ ಬಾರಿಗೆ ಈ ರೀತಿ ಮಾಡಿದ್ದೇನೆ. ತಪ್ಪಾಯ್ತು ಕ್ಷಮಿಸಿ ಎಂದು ಗೋಗರೆದಿದ್ದಾನೆ. ತನಗೆ ಯಾರೂ ಈ ರೀತಿ ಮಾಡುವಂತೆ ಹೇಳಿಲ್ಲ. ನಾನೇ ಈ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾನೆ. ಇನ್ನೊಬ್ಬಾತ ಪೊಲೀಸರಿಗೆ ಕರೆ ಮಾಡಿ ಹಿಡಿದುಕೊಡಿ ಎಂದು ಗದರಿದಾಗ, ಬಾಲಕ ಪೊಲೀಸರಿಗೆ ಒಪ್ಪಿಸಬೇಡಿ, ತಪ್ಪಾಯ್ತು ಎಂದು ಅಳುತ್ತಾ ಕೇಳಿಕೊಳ್ಳುತ್ತಿರುವುದು ದೃಶ್ಯಗಳಲ್ಲಿದೆ.
ಬಾಲಕನ ಈ ಅಪಾಯಕಾರಿ ಕೆಲಸದ ವಿಡಿಯೋವನ್ನು ಉದ್ಯಮಿಯಾದ ಅರುಣ್ ಪುದ್ದೂರ್ ಎಂಬುವವರು ಟ್ವೀಟ್ ಮಾಡಿಕೊಂಡಿದ್ದಾರೆ. ಅಲ್ಲದೇ ಇದು ತುಂಬಾ ಗಂಭೀರವಾದ ವಿಚಾರ, ಶೀಘ್ರವೇ ಪರಿಶೀಲಿಸುವಂತೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಇತರ ಅಧಿಕಾರಿಗಳಿಗೆ ಟ್ಯಾಗ್ ಮಾಡಿ ಒತ್ತಾಯಿಸಿದ್ದಾರೆ.
ಕರ್ನಾಟಕದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಇದೊಂದು ಗಂಭೀರವಾದ ಸಂಗತಿ. ಅಪ್ರಾಪ್ತ ಬಾಲಕನೊಬ್ಬ ರೈಲ್ವೇ ಹಳಿಗಳ ಮೇಲೆ ಕಲ್ಲುಗಳನ್ನಿಟ್ಟು ಅಪಾಯಕ್ಕೆ ಎಡೆ ಮಾಡಿಕೊಟ್ಟಿದ್ದಾನೆ. ನಮ್ಮಲ್ಲಿ ಹತ್ತಾರು ಕಿಲೋಮೀಟರ್ ರೈಲ್ವೆ ಹಳಿಗಳಿವೆ. ದೊಡ್ಡವರಲ್ಲದೇ, ಮಕ್ಕಳನ್ನೂ ಸಾವಿಗೆ ಕಾರಣವಾಗಲು ಬಳಸಿಕೊಳ್ಳಲಾಗುತ್ತಿದೆ" ಎಂದು ಬರೆದುಕೊಂಡಿದ್ದಾರೆ. ಈ ರೀತಿಯ ದುಷ್ಕೃತ್ಯ ಎಸಗಲು ಮಕ್ಕಳಿಗೆ ತರಬೇತಿ ನೀಡಿದವರು ಯಾರೆಂಬುದು ಮತ್ತೆ ಹಚ್ಚಲು ಪುದ್ದೂರು ಒತ್ತಾಯಿಸಿದ್ದಾರೆ.
ಒಡಿಶಾದಲ್ಲಿ ನರಕ ಸೃಷ್ಟಿಸಿದ ದುರಂತ: ಜೂನ್ 2 ರಂದು ಒಡಿಶಾದಲ್ಲಿ ಸಂಭವಿಸಿದ ತ್ರಿವಳಿ ರೈಲು ದುರಂತ ನರಕ ಸೃಷ್ಟಿಸಿದೆ. ದುರ್ಘಟನೆಯಲ್ಲಿ 275 ಪ್ರಯಾಣಿಕರು ದುರ್ಮರಣಕ್ಕೀಡಾಗಿದ್ದಾರೆ. ಶುಕ್ರವಾರ ಸಂಜೆ 7 ಗಂಟೆ ಸುಮಾರಿನಲ್ಲಿ ಒಡಿಶಾದ ಬನಹಗಾ ರೈಲು ನಿಲ್ದಾಣದ ಬಳಿ ಹೌರಾದಿಂದ ಚೆನ್ನೈಗೆ ಹೊರಟಿದ್ದ ಕೋರಮಂಡಲ್ ರೈಲು ಚಲಿಸುತ್ತಿದ್ದಾಗಲೇ ಹಳಿ ತಪ್ಪಿದೆ.
ಇದರಿಂದ ಇನ್ನೊಂದು ಲೈನ್ನಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಇದರ ರಭಸಕ್ಕೆ ಗೂಡ್ಸ್ ಮತ್ತು ಕೋರಮಂಡಲ್ ರೈಲಿನ ಬೋಗಿಗಳು ಮತ್ತೊಂದು ಹಳಿಯ ಮೇಲೆ ಬಿದ್ದಿವೆ. ಅದೇ ಸಮಯಕ್ಕೆ ವಿರುದ್ಧ ದಿಕ್ಕಿನಿಂದ ಎಸ್‌ಎಂವಿಪಿ-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಯಶವಂತಪುರದಿಂದ ಬಂದ ಹೌರಾ ಎಕ್ಸ್‌ಪ್ರೆಸ್ ಹಳಿ ಮೇಲೆ ಬಿದ್ದಿದ್ದ ಬೋಗಿಗಳಿಗೆ ವೇಗವಾಗಿ ಡಿಕ್ಕಿಯಾಗಿದೆ. ಇದರಿಂದ ಭೀಕರತೆ ಉಂಟಾಗಿದೆ.
ಇದನ್ನೂ ಓದಿ: ಒಡಿಶಾ ರೈಲು ಅಪಘಾತ:ಇನ್ನೂ ಸಿಗದ 101 ಮೃತದೇಹಗಳ ಗುರುತು..55 ಶವ ಸಂಬಂಧಿಕರಿಗೆ ಹಸ್ತಾಂತರ