ಬೆಂಗಳೂರು: ಕೊರೊನಾ ಭೀತಿ ಹಿನ್ನೆಲೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ತುರ್ತು ಕ್ರಮ ವಹಿಸುವಂತೆ ಪೌರಾಡಳಿತ ಸಚಿವ ನಾರಾಯಣಗೌಡ ಸೂಚನೆ ನೀಡಿದ್ದಾರೆ.
ವಿಕಾಸಸೌಧದಲ್ಲಿ ಆಯಾ ಜಿಲ್ಲೆಯ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ, ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೊರೊನಾ ವೈರಸ್ ಸೋಂಕು ಕುರಿತಂತೆ ಇಲಾಖಾ ವತಿಯಿಂದ ಕೈಗೊಳ್ಳಬೇಕಾದ ತುರ್ತುಕ್ರಮದ ಬಗ್ಗೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳಾದ ರೈಲು ನಿಲ್ದಾಣ, ಬಸ್ ನಿಲ್ದಾಣ, ಮಾರುಕಟ್ಟೆ, ಮಾಲ್‍ಗಳು, ನಾಟಕ, ಸಿನಿಮಾ ಮಂದಿರ, ದೇವಸ್ಥಾನ, ಮಸೀದಿ, ಚರ್ಚ್ ಮುಂತಾದ ಜನನಿಬಿಡ ಸ್ಥಳಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ, ನೆಲಹಾಸುಗಳನ್ನು, ಕಟ್ಟೆಗಳಿಗೆ ಸ್ಪ್ರೇಯಿಂಗ್ ಮತ್ತು ಫಾಗಿಂಗ್ ಮುಂತಾದವುಗಳನ್ನು ಉಪಯೋಗಿಸಿ ಸ್ವಚ್ಛವಾಗಿರಿಸಿಕೊಳ್ಳಲು ಸೂಚಿಸಿದರು.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿಶೇಷ ಕಾರ್ಯಪಡೆ: ತುರ್ತಾಗಿ ನಗರಸಭೆಯಲ್ಲಿ ಪೌರಾಯುಕ್ತರು, ಪರಿಸರ ಅಭಿಯಂತರರು, ಹಿರಿಯ, ಕಿರಿಯ ಆರೋಗ್ಯ ಸಹಾಯಕರು, ಸಮುದಾಯ ಸಂಘಟಕರು, ಪುರಸಭೆ ಮತ್ತು ಪಟ್ಟಣ ಪಂಚಾಯತ್ಗಳಲ್ಲಿ ಮುಖ್ಯಾಧಿಕಾರಿಗಳು, ಪರಿಸರ ಅಭಿಯಂತರರು, ಹಿರಿಯ- ಕಿರಿಯ ಆರೋಗ್ಯ ಸಹಾಯಕರು, ಸಮುದಾಯ ಸಂಘಟಕರನ್ನೊಳಗೊಂಡಂತೆ ವಿಶೇಷ ಕಾರ್ಯಪಡೆ ರಚಿಸಲು ಸಚಿವರು ನಿರ್ದೇಶನ ನೀಡಿದ್ರು.
ಪ್ರತಿದಿನ ಘನತ್ಯಾಜ್ಯ ಸಂಗ್ರಹಣೆ ಮತ್ತು ಸಾಗಣಿಕೆಗಾಗಿ ಮನೆ-ಮನೆಗಳಿಗೆ ತೆರಳುವ ಸಂದರ್ಭದಲ್ಲಿ ವಾಹನಗಳಲ್ಲಿ ಧ್ವನಿವರ್ಧಕಗಳ ಮೂಲಕ ಘೋಷಣೆಗಳನ್ನು ಕೂಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕೈತೊಳೆದುಕೊಳ್ಳುವುದು ಸೇರಿದಂತೆ ಇತರೆ ವಿಧಾನಗಳನ್ನು ಅನುಸರಿಸುವ ಸಂಬಂಧ ಜನಜಾಗೃತಿ ಮೂಡಿಸಲು ಸೂಚಿಸಿದರು.
ಪೌರಕಾರ್ಮಿಕರ ಬಗ್ಗೆ ವಿಶೇಷ ಗಮನ: ಪೌರಕಾರ್ಮಿಕರ ಕರ್ತವ್ಯ ಅವಧಿಯು ಬೆಳಗ್ಗೆ 6.30 ರಿಂದ 10.30ರವರೆಗೆ. ದಿನನಿತ್ಯ ಘನತ್ಯಾಜ್ಯ ವಸ್ತುಗಳ ನಿರ್ವಹಣೆಗಾಗಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರು ವೈಯುಕ್ತಿಕ ಸುರಕ್ಷತಾ ಸಾಧನೆಗಳನ್ನು ಧರಿಸಿ ಕಾರ್ಯನಿರ್ವಹಿಸುವುದು. ಪೌರಕಾರ್ಮಿಕರಿಗೆ ದಿನನಿತ್ಯ ಉಪಯೋಗಿಸುವ ಹ್ಯಾಂಡ್ ಗ್ಲೌಸ್, ಮಾಸ್ಕ್, ಗಮ್ ಬೂಟ್ಸ್, ಇತರೆ ಸುರಕ್ಷಾ ಕವಚಗಳ ಪೂರೈಸುವಲ್ಲಿ ಯಾವುದೇ ಕೊರತೆಯಾಗದಂತೆ ಆಯಾ ಪುರಸಭಾ ನಿಧಿಯಿಂದ ವೆಚ್ಚವನ್ನು ಭರಿಸಲಾಗುವುದು. ಪೌರಕಾರ್ಮಿಕರಿಗೆ ನೀಡುವ ಆಹಾರವು (ಉಪಹಾರ) ಪೌಷ್ಠಿಕಯುಕ್ತ ಮತ್ತು ಸ್ವಚ್ಛವಾಗಿ ಇರುವಂತೆ ನೋಡಿಕೊಳ್ಳಬೇಕು. ಪೌರಕಾರ್ಮಿಕರು ಹಾಗೂ ಸಾರ್ವಜನಿಕರು ಒಮ್ಮೆ ಬಳಸಿದ ಮುಖಕವಚವನ್ನು ಮತ್ತೊಮ್ಮೆ ಬಳಸದಂತೆ ತಿಳಿ ಹೇಳಬೇಕು. ಪೌರಕಾರ್ಮಿಕರಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆ ಸೇರಿದಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದರು.