ಬೆಂಗಳೂರು : ಪ್ರತಿಯೊಬ್ಬರೂ ಮಹಿಳೆಯರ ಘನತೆ ಎತ್ತಿ ಹಿಡಿಯಬೇಕು. ಸುರಕ್ಷಿತ ವಾತಾವರಣವನ್ನು ಖಾತ್ರಿಪಡಿಸಬೇಕು ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ರಕ್ಷಾಬಂಧನದ ಸಂದರ್ಭದಲ್ಲಿ ಕರೆ ನೀಡಿದರು.
ರಾಜಭವನದಲ್ಲಿ ವಿವಿಧ ಶಾಲೆಗಳ ಮಕ್ಕಳೊಂದಿಗೆ ವೆಂಕಯ್ಯ ನಾಯ್ಡು ರಕ್ಷಾಬಂಧನವನ್ನು ಆಚರಿಸಿದರು. ಈ ಶುಭ ಸಂದರ್ಭದಲ್ಲಿ ಜನರಿಗೆ ಶುಭಾಶಯ ಕೋರಿದರು. ರಕ್ಷಾ ಬಂಧನವು ಸೋದರ-ಸೋದರಿಯರ ನಡುವಿನ ಪ್ರೀತಿ, ಗೌರವದ ವಿಶೇಷ ಮತ್ತು ಗಾಢ ಅನುಬಂಧದ ಆಚರಣೆಯಾಗಿದೆ ಎಂದರು.
ಪ್ರತಿಯೊಬ್ಬರನ್ನು ತಮ್ಮ ಸಹೋದರ-ಸಹೋದರಿಯರಂತೆ ಪರಿಗಣಿಸಬೇಕು ಎಂದು ಜನರಿಗೆ ಕರೆ ನೀಡಿದ ನಾಯ್ಡು, ರಕ್ಷಾ ಬಂಧನ ನಾಗರಿಕರಲ್ಲಿ ಸಹೋದರತ್ವ ಮತ್ತು ಸಾಮರಸ್ಯವನ್ನು ಉತ್ತೇಜಿಸುತ್ತದೆ. ರಾಷ್ಟ್ರವನ್ನು ಬಲಿಷ್ಠವಾಗಿಸುತ್ತದೆ ಎಂದರು.
ಭಾರತದ ಹಳೆಯ ಕುಟುಂಬ ವ್ಯವಸ್ಥೆಯನ್ನು ಶ್ಲಾಘಿಸಿ, ಹಿರಿಯರಿಗೆ ಗೌರವ ನೀಡುವುದನ್ನು ರಾಕಿ ಹಬ್ಬ ನಮಗೆ ಕಲಿಸುತ್ತದೆ. ಯುವಕರಲ್ಲಿ ಕಾಳಜಿ ವಹಿಸುವ ಮನೋಭಾವವನ್ನು ಬೆಳೆಸುತ್ತದೆ ಎಂದು ತಿಳಿಸಿದರು.
ಸಹೋದರಿಯರು ಮನೆಯಲ್ಲಿ ಹರ್ಷ ಮತ್ತು ಸಂತೋಷವನ್ನು ತರುತ್ತಾರೆ. ಅನೇಕ ಭಾರತೀಯ ಹಬ್ಬಗಳು ಕುಟುಂಬ ಸಂಬಂಧಗಳನ್ನು ಮತ್ತು ಬಾಂಧವ್ಯವನ್ನು ಬಲಪಡಿಸುತ್ತವೆ ಎಂದರು.
ವೆಂಕಯ್ಯ ನಾಯ್ಡು ಕನ್ನಡ, ಹಿಂದಿ, ತೆಲುಗು, ಮಲಯಾಳಂ, ತಮಿಳು, ಮರಾಠಿ, ಕೊಂಕಣಿ, ಒಡಿಯಾ, ಬಂಗಾಳಿ, ಅಸ್ಸಾಮಿ, ಗುಜರಾತಿ, ಪಂಜಾಬಿ ಸೇರಿದಂತೆ 13 ಭಾಷೆಗಳಲ್ಲಿ ರಕ್ಷಾಬಂಧನ ಶುಭಾಶಯಗಳನ್ನು ಟ್ವೀಟ್ ಮಾಡಿರುವುದು ವಿಶೇಷವಾಗಿದೆ.