ಬೆಂಗಳೂರು : ನಗರದ ಬಾಣಸವಾಡಿ ಹೆಚ್.ಬಿ.ಆರ್ ಲೇಔಟ್ ಬಳಿಯ ಅಯೋಧ್ಯಾ ಮೈದಾನದಲ್ಲಿ ಪೊಲೀಸರು ಸೀಜ್ ಮಾಡಿ ಇರಿಸಿದ್ದ ಕಾರುಗಳಿಗೆ ಬೆಂಕಿ ತಗುಲಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕೆಜಿಹಳ್ಳಿ ಪೊಲೀಸ್ ಠಾಣೆಯಲ್ಲಿ ಸೀಜ್ ಆಗಿದ್ದ ಕಾರುಗಳನ್ನ ಮೈದಾನದಲ್ಲಿ ಪಾರ್ಕ್ ಮಾಡಲಾಗಿತ್ತು. ಒಟ್ಟು 30 ಕಾರುಗಳನ್ನ ಪಾರ್ಕ್ ಮಾಡಲಾಗಿತ್ತು. ಅವಘಡದಲ್ಲಿ 6 ಕಾರುಗಳಿಗೆ ಬೆಂಕಿ ತಗುಲಿದೆ ಎಂದು ಪೊಲೀಸರು, ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಮೈದಾನದಲ್ಲಿ ಇದ್ದ ಒಣ ಹುಲ್ಲಿನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಂಕಿ ಅವಘಡ
ಬಿಸಿಲಿನ ಝಳಕ್ಕೆ ಹುಲ್ಲಿಗೆ ತಾಕಿದ ಬೆಂಕಿ ಪೊಲೀಸರು ಜಫ್ತಿ ಮಾಡಿದ್ದ ಹಳೆ ವಾಹನಗಳನ್ನ ಆಹುತಿ ಪಡೆದ ಘಟನೆ ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ದ್ವಿಚಕ್ರ ವಾಹನಗಳು, ಕಾರುಗಳು ಸೇರಿದಂತೆ ಪೊಲೀಸರು ಜಪ್ತಿ ಮಾಡಿದ್ದ ತೀರಾ ಹಳೆಯದಾದ 50ಕ್ಕೂ ಅಧಿಕ ವಾಹನಗಳನ್ನ ಠಾಣೆಯ ಹಿಂಭಾಗದಲ್ಲಿ ನಿಲ್ಲಿಸಲಾಗಿತ್ತು.
ಮಧ್ಯಾಹ್ನ 1:30ರ ಸುಮಾರಿಗೆ ಬಿಸಿಲಿನ ಝಳದಿಂದ ಹೊತ್ತಿಕೊಂಡ ಬೆಂಕಿ ನೋಡು ನೋಡುತ್ತಿದ್ದಂತೆ ದ್ವಿಚಕ್ರ ವಾಹನ, ಕಾರುಗಳ ಸಹಿತ ಸುಮಾರು 15 ವಾಹನಗಳನ್ನ ಆಹುತಿ ಪಡೆದಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದೆ.
ಓದಿ: ಹಿಂದುತ್ವ ಅಂದರೆ ಕೇಸರಿ ಶಾಲೂ, ಟೋಪಿ ಎರಡರ ಸಮಾಗಮ : ಸಿ ಟಿ ರವಿ ವ್ಯಾಖ್ಯಾನ