ಬೆಂಗಳೂರು: ಹಣ ಮಾಡುವ ಆಸೆಯಿಂದ ಬಿಜೆಪಿಗೆ ಹೋಗಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳಿವೆ. ಎಲ್ಲಾ ಸೇರಿ ಮತ್ತಷ್ಟು ಶ್ರೀಮಂತರಾಗೋಣ ಅಂತ ಬಿಜೆಪಿಗೆ ಹೋಗಿದ್ದಾರೆ ಎಂದು ಬೈರತಿ ಬಸವರಾಜ್ ವಿರುದ್ಧ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಕಿಡಿಕಾರಿದ್ದಾರೆ.
ಉಪ ಚುನಾವಣೆಯಲ್ಲಿ 8 ಸ್ಥಾನ ಬಂದರೆ ಮಾತ್ರ ಯಡಿಯೂರಪ್ಪ ಸಿಎಂ ಆಗಿ ಉಳಿಯುತ್ತಾರೆ. ಈ ಬಾರಿ ಕಾಂಗ್ರೆಸ್ 13 ಸ್ಥಾನ ಗೆಲ್ಲುವ ಮೂಲಕ ಯಡಿಯೂರಪ್ಪ ಸಿಎಂ ಸ್ಥಾನದಿಂದ ಇಳಿಯುತ್ತಾರೆ ಎಂದು ಭವಿಷ್ಯ ನುಡಿದರು. ಗೆದ್ದರೆ ಬಸವರಾಜ್ ಅವರಿಗೆ ಮಂತ್ರಿ ಸ್ಥಾನ ಸಿಗಲಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿ, ಭೈರತಿ ಬಸವರಾಜ್ ಗೆದ್ದರೆ ತಾನೇ ಸಚಿವರಾಗುವುದು. ಯಡಿಯೂರಪ್ಪ ಸರ್ಕಾರ ಇದ್ದರೆ ತಾನೇ ಮಂತ್ರಿ ಆಗೋದು. ಭೈರತಿ ಗೆಲುವುದಿಲ್ಲ, ಯಡಿಯೂರಪ್ಪ ಸಿಎಂ ಆಗಿ ಇರುವುದಿಲ್ಲ ಎಂದರು.
ಕಾಂಗ್ರೆಸ್ ಪರ ಜನರಿಗೆ ಒಲವಿದೆ. ಕಾಂಗ್ರೆಸ್ ಗೆದ್ದೇ ಗೆಲ್ಲುತ್ತೆ. ಕಾಂಗ್ರೆಸ್ಗೆ ಮೋಸ ಮಾಡಿದವರಿಗೆ ಜನ ಸರಿಯಾಗಿ ಪಾಠ ಕಲಿಸುತ್ತಾರೆ. ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಖಾಲಿ ಮಾಡುತ್ತೇನೆಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಮುಖ್ಯಮಂತ್ರಿಯಾಗಿದ್ದಾಗ ಅವರೆಲ್ಲ ಎಲ್ಲಿದ್ರು? ಅವರು ಬೆಳಕಿಗೆ ಬಂದಿದ್ದೇ ಇತ್ತೀಚೆಗೆ. ಅವರು ಕಾಂಗ್ರೆಸ್ಗೆ ಪ್ರಾಮಾಣಿಕವಾಗಿ ದುಡಿದವರೇ ಅಲ್ಲ. 35 ಜನ ಯಾರು ಹೋಗ್ತಾರೆ? ಹೋಗೋ ಹಾಗಿದ್ದಿದ್ದರೆ ಆವತ್ತೇ ಹೋಗುತ್ತಿದ್ದರು. ರಮೇಶ್ ಜಾರಕಿಹೊಳಿ ಒಳ್ಳೆಯ ಮುಖಂಡನೂ ಅಲ್ಲ, ಒಳ್ಳೆಯ ಚಾರಿತ್ರ್ಯ ಉಳ್ಳವರೂ ಅಲ್ಲ ಎಂದು ಟೀಕಿಸಿದರು.