ಬೆಂಗಳೂರು : ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿಕೆಯನ್ನು ಖಂಡಿಸಿ ಇಂದು ನಗರದ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣದ ಬಳಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ರೈಲ್ ಚಳವಳಿ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಎಂಇಎಸ್ ನಿಷೇಧ ಮಾಡಬೇಕು. ಮರಾಠ ಅಭಿವೃದ್ಧಿ ಪ್ರಾಧಿಕಾರ ರದ್ದು ಮಾಡಬೇಕು. ನಮ್ಮ ರಾಜ್ಯದ ಸಿಎಂ ಯಡಿಯೂರಪ್ಪ ರಾಜೀನಾಮೆ ಕೊಡಬೇಕೆಂದು ಪ್ರತಿಭಟನೆ ಮಾಡ್ತಿದ್ದೇವೆ. ಪೊಲೀಸರು ಸರ್ಪಗಾವಲು ಹಾಕಿ ನಮ್ಮನ್ನು ತಡೆ ಹಿಡಿದಿದ್ದನ್ನು ನಾವು ಖಂಡಿಸುತ್ತೇವೆ ಎಂದರು.
ಶಿವಸೇನೆ ನಾಯಕ ಉದ್ಧವ್ ಠಾಕ್ರೆಗೆ ಎಚ್ಚರಿಕೆ ಕೊಡುತ್ತಿದ್ದೇವೆ. ಫೆ. 21 ರಂದು ಬೆಳಗಾವಿಗೆ ಹೋಗುತ್ತೀವಿ. ಮಹಾರಾಷ್ಟ್ರ ಗಡಿಗೆ ಸುಮಾರು ಒಂದು ಲಕ್ಷ ಮಂದಿ ನುಗ್ಗುತ್ತೇವೆ. ಬೆಳಗಾವಿಯಲ್ಲಿ ಮರಾಠ ನಾಮಫಲಕಗಳನ್ನು ಕಿತ್ತು ಹಾಕುತ್ತೀವಿ. ಕಾಂಗ್ರೆಸ್,ಬಿಜೆಪಿ ,ಜೆಡಿಎಸ್ ಎಲ್ಲರೂ ಎಂಇಎಸ್ ಏಜೆಂಟ್ ಆಗಿದ್ದಾರೆ. ಕರ್ನಾಟಕದಲ್ಲೂ ನ್ಯಾಯಾಂಗ ಹೋರಾಟ ಮಾಡಬೇಕು. ರಾಜ್ಯದಲ್ಲಿ ಬೆಂಕಿ ಬಿದ್ದಿದ್ದರು ಮುಖ್ಯಮಂತ್ರಿ ಯಡಿಯೂರಪ್ಪ ಇನ್ನೂ ಸಭೆ ಕರೆದಿಲ್ಲ ಎಂದು ವಾಟಾಳ್ ಕಿಡಿಕಾರಿದರು.
ಓದಿ: ನಾವು ಕರ್ನಾಟಕದಲ್ಲಿರುವುದು ದೇವರ ದಯೆ.. ಮಹಾ ಸಿಎಂಗೆ ಮರಾಠಿ ಭಾಷಿಕರಿಂದಲೇ ಪ್ರತ್ಯುತ್ತರ
ಬಳಿಕ ಹೋರಾಟಗಾರ ಸಾ.ರಾ. ಗೋವಿಂದ್ ಮಾತನಾಡಿ, ರಾಜ್ಯ ಸರ್ಕಾರ ಹೋರಾಟಗಾರರ ಮೇಲೆ ದ್ವೇಷ ಕಾರುತ್ತಿದೆ. ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಬಾಯಿಗೆ ಬಂದಂಗೆ ಮಾತನಾಡುತ್ತಿದ್ದಾರೆ. ಇದಕ್ಕೆ ನೇರ ಹೊಣೆ ಯಡಿಯೂರಪ್ಪ, ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ್ದೇ ಇದಕ್ಕೆಲ್ಲ ಕಾರಣವಾಗಿದೆ. ಫೆ.21 ರಂದು ಇಡೀ ಕನ್ನಡಿಗರು ಬೆಳಗಾವಿಗೆ ಬಂದು ಹೋರಾಟ ಮಾಡಬೇಕೆಂದು ಕರೆ ನೀಡಿದರು.
ನಂತರ ಕರವೇ ರಾಜ್ಯಾಧ್ಯಕ್ಷ ಶಿವರಾಮೇಗೌಡ ಮಾತನಾಡಿ, ಉದ್ಧವ್ ಠಾಕ್ರೆ ಪದೇ ಪದೇ ಕ್ಯಾತೆ ತೆಗೆಯುತ್ತಿದ್ದಾರೆ. ಫೆ.21 ರಂದು ನಾವೂ ಅವರಿಗೆ ಸರಿಯಾಗಿ ಬುದ್ಧಿ ಕಲಿಸುತ್ತೇವೆ. ಸೊಲ್ಲಾಪುರ ಬಿಡಲೇಬೇಕು, ಬಾಂಬೆ ಅರ್ಧಭಾಗ ನಮಗೆ ಬಿಟ್ಟು ಕೊಡಲೇಬೇಕು. ಇವತ್ತಿನಿಂದ ನಿರಂತರವಾಗಿ ಉದ್ಧವ್ ಠಾಕ್ರೆ ವಿರುದ್ಧ ಹೋರಾಟ ಮಾಡ್ತಿವಿ ಎಂದು ಎಚ್ಚರಿಕೆ ರವಾನಿಸಿದರು.