ಬೆಂಗಳೂರು : ವಾರಾಂತ್ಯ ಕರ್ಫ್ಯೂ ವಿರೋಧಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು. ನಗರದಲ್ಲಿರುವ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟಿಸಿದ ಅವರು, ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರಿಗಾಗಿ ಮತ್ತು ಯಾವ ಕಾರಣಕ್ಕೆ ಈ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಎರಡು ದಿನ ಎಲ್ಲಾ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿದರೆ ಬಡವರ ಗತಿಯೇನು, ದಿನನಿತ್ಯ ಸಂಪಾದನೆ ಮಾಡಿ ಜೀವನ ನಡೆಸುವವರ ಗತಿಯೇನು, ಬೀದಿ ಬದಿಯ ವ್ಯಾಪಾರಿಗಳ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ಅರಿತು ಸರ್ಕಾರ ಗಂಭೀರವಾದ ನಿರ್ಧಾರ ಕೈಗೊಳ್ಳಬೇಕು ಎಂದರು.
ನೈಟ್ ಕರ್ಫ್ಯೂ ಬಗ್ಗೆ ಪುನರ್ ಪರಿಶೀಲನೆ ಅಗತ್ಯ : ಕೋವಿಡ್ ತಡೆಗಟ್ಟುವ ಮೊದಲು ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ದರೋಡೆ ನಿಲ್ಲಿಸಿ. ಆಸ್ಪತ್ರೆಯಲ್ಲಿ ಸೋಂಕಿತರಿಗೆ ಸರಿಯಾದ ವ್ಯವಸ್ಥೆ ಮಾಡಬೇಕು. ಬಿಬಿಎಂಪಿ ವ್ಯಾಪ್ತಿಯ ಪ್ರತಿ ವಾರ್ಡಿನಲ್ಲಿ 3 ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿ, ಸರಿಯಾದ ಕ್ರಮದಲ್ಲಿ ಔಷಧಿ ಪೂರೈಸಬೇಕು. ಸಮಯಕ್ಕೆ ಸರಿಯಾಗಿ ಕೋವಿಡ್ ಲಸಿಕೆ ಹಾಕುವ ಮೂಲಕ ಜನರ ಆರೋಗ್ಯದ ಮೇಲೆ ನಿಗಾ ಇಡಬೇಕು. ಅದನ್ನು ಬಿಟ್ಟು ಈ ಕರ್ಫ್ಯೂ ಯಾಕೆ, ಸರ್ಕಾರ ಮತ್ತೊಮ್ಮೆ ಈ ಕುರಿತಂತೆ ಪುನರ್ ಪರಿಶೀಲಿಸಬೇಕೆಂದು ಆಗ್ರಹಿಸಿದರು.
ಶ್ರೀಮಂತರ ಸರ್ಕಾರ : ಆಡಳಿತ ಪಕ್ಷ ಜಾರಿಗೆ ತರುವ ನಿಯಮಗಳನ್ನು ವಿರೋಧ ಪಕ್ಷ ಪ್ರಶ್ನೆ ಮಾಡಬೇಕು. ಆದರೆ, ವಿಪಕ್ಷಗಳು ಸತ್ತು ಹೋಗಿವೆ. ಕಾಂಗ್ರೆಸ್, ಜೆಡಿಎಸ್ ಪಕ್ಷದವರು ಮೌನವಹಿಸಿದ್ದು, ಬಿಜೆಪಿ ನಾಟಕವಾಡುತ್ತಿದೆ. ರಾಜ್ಯದ ಜನತೆ ಕರ್ಫ್ಯೂಯಿಂದ ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ತರಕಾರಿ ವ್ಯಾಪಾರಿಗಳ ನೋವು ತಾರಕಕ್ಕೇರಿದೆ. ಇದು ಶ್ರೀಮಂತರ ಸರ್ಕಾರ ಆಗಿದೆ ಎಂದು ಕಿಡಿಕಾರಿದರು.
ಸಚಿವ ಸುಧಾಕರ್ ವಿರುದ್ಧ ಕಿಡಿ : ಆರೋಗ್ಯ ಸಚಿವರ ಬಗ್ಗೆ ಗೌರವವಿದೆ. ಆದರೆ, ಅವರ ನಡೆ-ನುಡಿ ನೋಡಿದರೆ ಹಿಟ್ಲರ್ ತರ ಕಾಣುತ್ತಿದೆ. ಆರೋಗ್ಯ ಸಚಿವರು ಹೇಳಿದ್ರೆ ಮನೆಗೆ ಹೋಗಬೇಕು, ಅವರ ಹೇಳಿದ್ರೆ ಲಾಕ್ಡೌನ್, ಸಚಿವರು ಹೇಳಿದ್ರೆ ಕರ್ಫ್ಯೂ ಜಾರಿಯಾಗುತ್ತದೆ. ರಾಜ್ಯದಲ್ಲಿ ಬೇರೆ ಯಾರು ಅಧಿಕಾರದಲ್ಲಿ ಇಲ್ವಾ?, ಸರ್ಕಾರದಲ್ಲಿ ಸಂಪುಟ ಇಲ್ಲವಾ?ಅಧಿಕಾರಿಗಳು ಏನು ಮಾಡುತ್ತಿದ್ದಾರೆ. ಬಡವರ ಜೀವನಕ್ಕೆ ಸಂಚಕಾರ ಮಾಡಬೇಡಿ. ಹಾಗಾಗಿ, ಯೋಚನೆ ಮಾಡಿ ಸರಿಯಾದ ನಿರ್ಧಾರ ಕೈಗೊಳ್ಳಿ ಎಂದರು.
ಕನ್ನಡಪರ ಸಂಘಟನೆಗಳು ಹೋರಾಟ ಮಾಡಿದಾಗ ಹೋಟೆಲ್, ಬಾರ್ಗಳು, ಸಿನಿಮಾದವರು ನಮಗೆ ಬೆಂಬಲ ಕೊಡುತ್ತಿರಲಿಲ್ಲ. ಇದೀಗ ಸರ್ಕಾರ ಹೇಳಿದ ಕೂಡಲೇ ಸಿನಿಮಾದವರೂ, ಹೋಟೆಲ್ನವರು, ಬಾರ್ ಮಾಲೀಕರು ಬಾಲ ಮುದುರಿಕೊಂಡು ಕುಳಿತುಕೊಂಡಿದ್ದಾರೆ. ಧೈರ್ಯ ಇದ್ದರೆ ಬೀದಿಗೆ ಬರಲಿ ನೋಡೋಣ ಎಂದು ಸವಾಲು ಹಾಕಿದರು.
ಸಾರಿಗೆ ಬಸ್ಗಳ ವಿರುದ್ಧ ಅಸಮಾಧಾನ : ಬಸ್ ಓಡಾಡುತ್ತಿವೆ, ವಿಮಾನ ಹಾರಾಡುತ್ತಿವೆ. ಅಲ್ಲೆಲ್ಲ ಸೋಂಕು ಹರಡುವುದಿಲ್ಲ ಅನಿಸುತ್ತದೆ. ಅದೇ ಬಡವರು, ಸಾಮಾನ್ಯರು ರಸ್ತೆಯಲ್ಲಿ ಓಡಾಡಿದರೆ ಕರ್ಫ್ಯೂ ನೆಪದಲ್ಲಿ ಜೈಲಿಗೆ ಹಾಕುತ್ತೀರಾ ಎಂದು ಸರ್ಕಾರದ ವಿರುದ್ಧ ಗುಡುಗಿದರು.