ಬೆಂಗಳೂರು: ಮುಂದಿನ 15 ದಿನಗಳಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಚಾಮರಾಜನಗರಕ್ಕೆ ಭೇಟಿ ನೀಡಲಿ ಎಂದು ಕನ್ನಡ ಚಳವಳಿ ಪಕ್ಷದ ನಾಯಕ ವಾಟಾಳ್ ನಾಗರಾಜ್ ಸವಾಲು ಹಾಕಿದ್ದಾರೆ.
ವಿಧಾನಸೌಧದ ಮುಖ್ಯ ದ್ವಾರದ ಮುಂಭಾಗ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡ ನಂತರ ಯಡಿಯೂರಪ್ಪ ಇದುವರೆಗೂ ಚಾಮರಾಜನಗರಕ್ಕೆ ಭೇಟಿ ನೀಡಿಲ್ಲ. ಗಡುವು ಮೀರುವುದರೊಳಗೆ ಭೇಟಿ ನೀಡದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತೆ ಎಂದು ಎಚ್ಚರಿಸಿದರು.
ಬಸವಣ್ಣನವರು ಮೂಢನಂಬಿಕೆಯ ವಿರುದ್ಧ ಕ್ರಾಂತಿ ನಡೆಸಿದ್ದರು. ಅವರ ಹೆಸರಲ್ಲಿ ಅಧಿಕಾರ ಸ್ವೀಕರಿಸಿದ ನೀವು, ಚಾಮರಾಜನಗರಕ್ಕೆ ಬಾರದಿರುವುದು ಸರಿಯಲ್ಲ. ಮಠಾಧೀಶರು ಯಡಿಯೂರಪ್ಪಗೆ ಚಾಮರಾಜನಗರಕ್ಕೆ ಹೋಗಿ ಅಂತ ಹೇಳಬೇಕು. ಹೇಳದಿದ್ದರೆ, ನೀವೂ ಮೂಢನಂಬಿಕೆಗೆ ಬೆಂಬಲ ಕೊಟ್ಟಂತೆ ಆಗಲಿದೆ. ಭೇಟಿ ದಿನಾಂಕವನ್ನು ಸಿಎಂ ಪ್ರಕಟಿಸಬೇಕು. ಸಿಎಂ ಚಾಮರಾಜನಗರಕ್ಕೆ ಬಂದರೆ ಜಿಲ್ಲೆಯ ಬಾಗಿಲಲ್ಲಿ ನಿಂತು ಸ್ವಾಗತಿಸುತ್ತೇನೆ ಎಂದರು. ಪ್ರತಿಭಟನೆ ವೇಳೆ ವಾಟಾಳ್ ನಾಗರಾಜ್ ಅವರನನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ದರು.