ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನಾಪ್ ಮತ್ತು ಹಲ್ಲೆ ಪ್ರಕರಣದ ಸುತ್ತ ಅನುಮಾನದ ಹುತ್ತ ಬೆಳೆದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ವರ್ತೂರು ಪ್ರಕಾಶ್ ಮೊದಲ ಪತ್ನಿ 2017ರಲ್ಲಿ ಡೆಂಗ್ಯೂನಿಂದ ಸಾವನ್ನಪ್ಪಿದ್ದರು. ವರ್ತೂರು ಪ್ರಕಾಶ್ಗೆ ಇಬ್ಬರು ಗಂಡು ಮಕ್ಕಳು. ಪತ್ನಿ ತೀರಿಕೊಂಡ ಬಳಿಕ ಫಾರ್ಮ್ಹೌಸ್ ನೋಡಿಕೊಳ್ಳುತ್ತಿದ್ದ ಮಹಿಳೆಯನ್ನು ಮದುವೆಯಾಗಿದ್ದ ಪ್ರಕಾಶ್ಗೆ ಮತ್ತಿಬ್ಬರು ಗಂಡು ಮಕ್ಕಳು ಜನಿಸಿದರು. ನಂತರ ಕುಟುಂಬದಲ್ಲಿ ಗಲಾಟೆಯಾಗಿ ಫಾರ್ಮ್ಹೌಸ್ ಬೇರೆಯವರಿಗೆ ಕೊಡಲು ನಿರ್ಧಾರ ಮಾಡಲಾಗಿತ್ತು. ಇದೇ ವಿಚಾರದಲ್ಲಿ ಎರಡನೇ ಹೆಂಡತಿಯ ಮೊದಲ ಪತಿಯ ಮಗ ಅಪಹರಣ ಮಾಡಿಸಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಓದಿ: ಸಿನಿಮೀಯ ಶೈಲಿಯಲ್ಲಿ ಅಪಹರಣ: ವರ್ತೂರು ಪ್ರಕಾಶ್ ನೀಡಿದ ದೂರಿನ ಸಂಪೂರ್ಣ ಮಾಹಿತಿ....
ಮತ್ತೊಂದೆಡೆ ಆರೋಪಿಗಳಿಂದ ಪೊಲೀಸರು ಕೆಲ ಮಾಹಿತಿಗಳನ್ನು ಸಂಗ್ರಹಿಸಿದ್ದು, ಫೋನ್ನಲ್ಲಿ ಮಾತನಾಡುವಾಗ ಬೆಂಗಳೂರು ಬಾಸ್ ಮಾತನಾಡ್ತಾರೆ ಎಂದು ಕಿಡ್ನಾಪರ್ ಗ್ಯಾಂಗ್ ತಿಳಿಸಿತ್ತು ಎಂಬುದನ್ನು ವರ್ತೂರು ಹೇಳಿದ್ದರು. ಆ ಬೆಂಗಳೂರು ಬಾಸ್ ಪ್ರಕಾಶ್ ಅವರ ಎರಡನೇ ಹೆಂಡತಿಯ ಮೊದಲ ಮಗ ಎಂದು ತಿಳಿದುಬಂದಿದೆ. ಈ ವಿಚಾರದ ಮೇಲೆ ತನಿಖೆ ಮುಂದುವರೆದಿದ್ದು, ವರ್ತೂರು ಪ್ರಕಾಶ್ ಫೋನ್ ಕಾಲ್ ಡೀಟೆಲ್ಸ್ ಸಂಗ್ರಹಿಸಲಾಗಿದೆ. ಈ ಮೂಲಕ ಇಂಚಿಂಚೂ ಮಾಹಿತಿಯನ್ನು ಪೊಲೀಸರು ಪಡೆದಿದ್ದಾರೆ. ಸದ್ಯ ವೈಟ್ ಫೀಲ್ಡ್ ವಿಭಾಗದ ಪೊಲೀಸರು ಮಾಹಿತಿ ಕಲೆ ಹಾಕಿ ಕೋಲಾರ ಪೊಲೀಸರಿಗೆ ಒಪ್ಪಿಸಿದ್ದಾರೆ.