ಬೆಂಗಳೂರು: ರಾಜ್ಯದ 30 ಜಿಲ್ಲೆಗಳ ಪೈಕಿ 13 ಜಿಲ್ಲೆಗಳ ಮಣ್ಣಿನಲ್ಲಿ ಆಮ್ಲೀಯ ಪ್ರಮಾಣದಲ್ಲಿ ವ್ಯತ್ಯಾಸ ಕಂಡು ಬಂದಿದೆ. ಏಳು ಜಿಲ್ಲೆಗಳಲ್ಲಿ ಹೆಚ್ಚು ಆಮ್ಲೀಯ ಮಣ್ಣು ಕಂಡು ಬಂದಿದ್ದು, 5 ಜಿಲ್ಲೆಗಳಲ್ಲಿ ಹೆಚ್ಚು ಲವಣಾಂಶದ ಮಣ್ಣು ಕಂಡು ಬಂದಿದೆ.
ಓದಿ: ಎಲ್ಎಸಿಯಿಂದ ಹಿಂದೆ ಸರಿಯುತ್ತಿದೆ ಚೀನಾ: ವಿಡಿಯೋ ಬಿಡುಗಡೆ ಮಾಡಿದ ಭಾರತೀಯ ಸೇನೆ
ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ದಕ್ಷಿಣ ಕನ್ನಡ, ಕೊಡಗು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಜಿಲ್ಲೆಗಳು ಹೆಚ್ಚು ಆಮ್ಲೀಯ ಮಣ್ಣು ಹೊಂದಿದ್ದು, ಪಿಹೆಚ್ ಮಟ್ಟ 5.5 ಇದೆ. ತರಕಾರಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಪಿಹೆಚ್ ಮಟ್ಟ 6-7ರ ನಡುವೆ ಇದ್ದಲ್ಲಿ ಸೂಕ್ತವಾಗಿರಲಿದೆ. ಪೋಷಕಾಂಶಗಳು ಸೂಕ್ತವಾಗಿ ಲಭ್ಯವಾಗಲಿವೆ. ಆದರೆ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಪಿಹೆಚ್ ಮಟ್ಟವನ್ನು ಈ ಜಿಲ್ಲೆಗಳು ಹೊಂದಿರುವುದು ಆತಂಕಕಾರಿಯಾಗಿದೆ.
ಗದಗ, ವಿಜಯಪುರ, ಕೊಪ್ಪಳ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಮಣ್ಣು ಹೆಚ್ಚು ಲವಣಾಂಶ ಹೊಂದಿದ್ದು, ಪಿಹೆಚ್ ಮಟ್ಟ 8.5 ಇದೆ. ಇದು ಕೂಡ ತರಕಾರಿ ಮತ್ತು ತೋಟಗಾರಿಕಾ ಬೆಳೆಗೆ ಸೂಕ್ತವಾದ ಪಿಹೆಚ್ ಮಟ್ಟವನ್ನು ದಾಟಿದ್ದು, ಪೋಷಕಾಂಶಗಳ ಕೊರತೆ ಎದುರಿಸುತ್ತಿದೆ.
ಪಿಹೆಚ್ ಮಟ್ಟದಲ್ಲಿನ ವ್ಯತ್ಯಾಸದ ಹಿನ್ನೆಲೆಯಲ್ಲಿ ಈ ಜಿಲ್ಲೆಗಳಲ್ಲಿ ಮಣ್ಣಿನ ಫಲವತ್ತತೆ ಹಾಗೂ ಮಣ್ಣಿನ ಆರೋಗ್ಯ ಕಾರ್ಡನ್ನು ವಿತರಿಸಲಾಗಿದ್ದು, ಫಲವತ್ತತೆ ಹೆಚ್ಚಿಸಲು ಪೂರಕ ಸಲಹೆ ನೀಡುತ್ತಿದೆ. ಉಡುಪಿಯಲ್ಲಿ 1,85,598, ಉತ್ತರ ಕನ್ನಡದಲ್ಲಿ 1,56,668, ಶಿವಮೊಗ್ಗದಲ್ಲಿ 2,14,073, ದಕ್ಷಿಣ ಕನ್ನಡದಲ್ಲಿ 1,57,576, ಕೊಡಗಿನಲ್ಲಿ 54,730, ಬೆಂಗಳೂರು ಗ್ರಾಮಾಂತರದಲ್ಲಿ 1,69,448, ಬೆಂಗಳೂರು ನಗರ 86,549, ಗದಗ 1,63,508, ವಿಜಯಪುರ 3,63,774, ಕೊಪ್ಪಳ 2,19,346, ಬೆಳಗಾವಿಯಲ್ಲಿ 4,97,496 ಹಾಗೆ ಬಾಗಲಕೋಟಯಲ್ಲಿ 2,41,814 ರೈತರಿಗೆ ಮಣ್ಣು ಆರೋಗ್ಯ ಕಾರ್ಡ್ಗಳನ್ನು ವಿತರಣೆ ಮಾಡಲಾಗಿದೆ.
ರಾಜ್ಯದ 30 ಜಿಲ್ಲೆಗಳ ಕೃಷಿ ಇಲಾಖೆಗಳು, 3 ಸಹಕಾರಿ ಸಂಘ, 212 ಗ್ರಾಮ ಮಟ್ಟದ ಮಣ್ಣು ಪರೀಕ್ಷಾ ಘಟಕಗಳು, 7 ತೋಟಗಾರಿಕಾ ಇಲಾಖೆ ಕಚೇರಿ, 1 ರೇಷ್ಮೆ ಇಲಾಖೆ ಕಚೇರಿ, 56 ಕೃಷಿ ವಿಶ್ವವಿದ್ಯಾಲಯ/ ಕೃಷಿ ವಿಜ್ಞಾನ ಕೇಂದ್ರ ಸೇರಿ ಒಟ್ಟು 309 ಕೇಂದ್ರಗಳಲ್ಲಿ ಮಣ್ಣು ಪರೀಕ್ಷೆ ನಡೆಸಲಾಗುತ್ತಿದೆ. ಇದರಲ್ಲಿ 96 ಸ್ಥಾನಿಕ ಪರೀಕ್ಷಾ ಪ್ರಯೋಗಾಲಯ, 1 ಸಂಚಾರಿ ಮಣ್ಣು ಪರೀಕ್ಷಾ ಪ್ರಯೋಗಾಲಯ, 212 ಗ್ರಾಮಮಟ್ಟದ ಸಂಚಾರಿ ಮಣ್ಣು ಪರೀಕ್ಷಾ ಪ್ರಯೋಗಾಲಗಳು ಸೇರಿವೆ.
ಕೃಷಿ ಭೂಮಿಯಲ್ಲಿ ಪಿಹೆಚ್ ಮಟ್ಟದ ಸುಧಾರಣೆ, ಫಲವತ್ತತೆ ಹೆಚ್ಚಳಕ್ಕೆ ಬೇಕಾದ ಕ್ರಮಗಳ ಕುರಿತು ಪರೀಕ್ಷೆ ನಡೆಸಿ ರೈತರಿಗೆ ಅಗತ್ಯ ಮಾಹಿತಿಯನ್ನು ನೀಡಲಾಗುತ್ತಿದ್ದು, ಮಣ್ಣಿನಲ್ಲಿ ಪೋಷಕಾಂಶಗಳ ವೃದ್ಧಿಗೆ ಪ್ರಯತ್ನ ನಡೆಸಲಾಗುತ್ತಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.