ಬೆಂಗಳೂರು: ಕೊರೊನಾ ಸೋಂಕು ಬಡವರಿಗೆ, ಕೂಲಿ ಕಾರ್ಮಿಕರಿಗೆ ಒಂದೊತ್ತಿನ ಊಟಕ್ಕೂ ಹೊಡೆತ ಕೊಟ್ಟಿದ್ದು, ಸಂಸಾರದ ಬಂಡಿ ಸಾಗಿಸಲು ಗಂಡನಿಲ್ಲದೇ ಪರದಾಡುತ್ತಿದ್ದ ಮಹಿಳೆಗೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ವನಿತಾ ಸಹಾಯವಾಣಿ ಕೇಂದ್ರ ಜೀವನ ಸಾಗಿಸಲು ಬೇಕಾದ ವ್ಯವಸ್ಥೆ ಕಲ್ಪಿಸಿದೆ. ಈ ಮೂಲಕ ಸಹಾಯ ಮಾಡಿ ಮಾನವೀಯತೆ ಮೆರದಿದೆ.
ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾಗ್ಯ ಎನ್ನುವ ಮಹಿಳೆ ತನ್ನ ಗಂಡನ ಜೊತೆ ಸುಖ ಜೀವನ ನಡೆಸುತ್ತಿದ್ದರು. ಇದಕ್ಕೆ ಸಾಕ್ಷಿಯಾಗಿ ಒಂದು ಗಂಡು, ಹೆಣ್ಣು ಮಗು ಕೂಡ ಜನಿಸಿದೆ. ಆದರೆ ಗಂಡನಾದವನು ನೆಟ್ಟಗೆ ಸಂಸಾರ ಮಾಡುವುದನ್ನು ಬಿಟ್ಟು ಭಾಗ್ಯರನ್ನು ಬಿಟ್ಟು ಬೇರೆ ಮದುವೆಯಾಗಿ ಸಂಸಾರ ನಡೆಸಲು ಶುರು ಮಾಡಿದ್ದ.
ಭಾಗ್ಯರ ಮಗಳಿಗೆ ಹೃದಯ ಸಂಬಂಧಿ ಸಮಸ್ಯೆಯಿದ್ದು, ಮಕ್ಕಳನ್ನು ಸಾಕುವುದು ತುಂಬಾನೇ ಕಷ್ಟವಾಗುತ್ತಿತ್ತು. ಇದನ್ನೆಲ್ಲವನ್ನು ಮೆಟ್ಟಿ ನಿಲ್ಲಬೇಕೆಂಬ ಛಲದಿಂದ ಮಹಿಳೆ, ವನಿತಾ ಸಹಾಯವಾಣಿ ಕೇಂದ್ರಕ್ಕೆ ತೆರಳಿದ್ದರು. ಭಾಗ್ಯರ ಸಹಾಯಕ್ಕೆ ಮುಂದಾದ ಕೇಂದ್ರದ ಅಧಿಕಾರಿಗಳು, ಹೊಲಿಗೆ ಮಿಷನ್ ನೀಡಿ ಸಹಾಯ ಮಾಡಿದ್ದಾರೆ.
ಸದ್ಯ ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಮಾಸ್ಕ್ಗೆ ಬಹು ಬೇಡಿಕೆ ಇರುವ ಕಾರಣ ಭಾಗ್ಯ ದಿನಕ್ಕೆ ಸಾವಿರಕ್ಕೂ ಅಧಿಕ ಮಾಸ್ಕ್ ತಯಾರಿಸಿ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಜೀವನ ನಿರ್ವಹಣೆ ಮಾಡಲು ಸಹಾಯ ಮಾಡಿದ ವನಿತಾ ಸಹಾಯವಾಣಿ ಕೇಂದ್ರದ ಅಅಧಿಕಾರಿಗಳಿಗೆ ಭಾಗ್ಯ, ಈಟಿವಿ ಭಾರತದ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ.