ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಬದಲಾವಣೆ ವದಂತಿ ಬಗ್ಗೆ ಕಾಂಗ್ರೆಸ್ ವಿರುದ್ಧ ಗರಂ ಆದ ವಸತಿ ಸಚಿವ ವಿ. ಸೋಮಣ್ಣ, ಕಾಂಗ್ರೆಸ್ನವರು ಸುಳ್ಳು ಹೇಳಿ ಸುಳ್ಳಿನ ಭವನ ಕಟ್ಟುತ್ತಾ ಇದ್ದಾರೆ. 10 ವರ್ಷ ಅಧಿಕಾರದಿಂದ ದೂರ ಇರುವ ಕಾಂಗ್ರೆಸ್ಗೆ ಹತ್ತು ದಿನ ಅಧಿಕಾರ ಇಲ್ಲದೇ ಇರುವುದಕ್ಕೆ ಆಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಅವರ ಕಾರ್ಯವೈಖರಿ ನೋಡಿ ಕಾಂಗ್ರೆಸ್ಗೆ ಭ್ರಮನಿರಸನ ಆಗಿದೆ. ಹೀಗಾಗಿಯೇ ಕಾಂಗ್ರೆಸ್ನವರು ಸುಳ್ಳು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು. ಕಾಂಗ್ರೆಸ್ ಗೆ ಮಾತನಾಡುವುದಕ್ಕೆ ಬೇರೆ ವಿಷಯ ಇಲ್ಲ. ಹಾಗಾಗಿ ಈ ರೀತಿ ಮಾತನಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ನಾಯಕರಿಗೆ ಇನ್ನಾದರೂ ದೇವರು ಒಳ್ಳೆಯ ಬುದ್ಧಿ ಕೊಡಲಿ. ಹೀಗೆ ಅಪಪ್ರಚಾರ ಮಾಡ್ತಾ ಇದ್ದರೆ ಕಾಂಗ್ರೆಸ್ಗೆ ನಷ್ಟ, ನಮಗೇನೂ ಅಲ್ಲ. ಸಚಿವ ಸುನೀಲ್ ಕುಮಾರ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಇನ್ನೂ ಒಳ್ಳೆಯ ಹುದ್ದೆ ಸಿಗಬೇಕು. ಪಕ್ಷ ಮತ್ತು ಸರ್ಕಾರ ಎರಡು ಕಡೆ ಒಳ್ಳೆಯ ಹುದ್ದೆ ಸಿಗಲಿ ಎಂದು ಸೋಮಣ್ಣ ಹೇಳಿದರು.
ಸಿಎಂ ಬದಲಾವಣೆ ವದಂತಿಗೆ ಪ್ರತಿಕ್ರಿಯಿಸಿದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಸುಳ್ಳು ಆಪಾದನೆ ಮಾಡುವುದೇ ಕಾಂಗ್ರೆಸ್ ಕೆಲಸ. ಅವರಿಗೆ ಬೇರೆ ಏನೂ ಕೆಲಸ ಇಲ್ಲ ಎಂದು ಕಿಡಿಕಾರಿದರು. ಸಿಎಂ ಬದಲಾವಣೆ ವಿಚಾರದಂತಹ ಚಟುವಟಿಕೆ ಎಲ್ಲೂ ನಡೆದಿಲ್ಲ. ಯಾವ ಆಧಾರದಲ್ಲಿ ಹೇಳುತ್ತಾರೋ ಗೊತ್ತಿಲ್ಲ ಎಂದರು.
ಕಾಂಗ್ರೆಸ್ನವರಿಗೆ ತಲೆ ಕೆಟ್ಟಿರಬೇಕು ಎಂದು ಹೇಳಬೇಕಾಗುತ್ತದೆ. ಬಸವರಾಜ ಬೊಮ್ಮಾಯಿ ಅವರು ಸಮರ್ಥವಾಗಿ ರಾಜ್ಯದ ಅಭಿವೃದ್ಧಿ ಮಾಡುತ್ತಿದ್ದಾರೆ. ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸುತ್ತೇವೆ. ಮುಂದಿನ ಚುನಾವಣೆಯಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಎನ್ಎಂಡಿಸಿ ಕಂಪನಿ ನೇಮಕಾತಿ ವಿವಾದ: ಸಚಿವ ಶ್ರೀರಾಮುಲು ಹೇಳಿದ್ದೇನು?