ಬೆಂಗಳೂರು: ಬಿಜೆಪಿಯಿಂದ ವಿಧಾನಸಭಾ ಟಿಕೆಟ್ ಕೊಡಿಸುವುದಾಗಿ ವಂಚನೆ ಪ್ರಕರಣ ಸಂಬಂಧ ತಮ್ಮ ಹಾಗೂ ತಮ್ಮ ಪುತ್ರನ ಹೆಸರನ್ನು ಬಳಸಿಕೊಂಡು ಸುಳ್ಳು ಸುದ್ದಿ ಹಬ್ಬಿಸಿ ತೇಜೋವಧೆ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಾಲುಮರದ ತಿಮ್ಮಕ್ಕ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ನಗರ ಪೊಲೀಸ್ ಆಯುಕ್ತರ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿದ ಸಾಲು ಮರದ ತಿಮ್ಮಕ್ಕ ನಂತರ ಪೊಲೀಸ್ ಆಯುಕ್ತರಿಗೆ ಲಿಖಿತ ದೂರು ನೀಡಿದ್ದಾರೆ.
ವೃಕ್ಷ ಸಂಪತ್ತಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟು ಬದುಕಿದ್ದೇನೆ. ತಮ್ಮ ಪುತ್ರ ಉಮೇಶ್ ಕೂಡ ಎರಡು ದಶಕಗಳಿಂದಲೂ ಮರ, ಗಿಡಗಳನ್ನು ಸಾಕು ಸಲಹುವುದವರಲ್ಲೇ ತೊಡಗಿಸಿಕೊಂಡಿದ್ದಾನೆ. ತಮ್ಮ ಈ ಇಳಿವಯಸ್ಸಿನಲ್ಲಿ ಸುಳ್ಳು ಹಾಗೂ ಅಪಪ್ರಚಾರ ಕಂಡು ಮಾನಸಿಕವಾಗಿ ನೊಂದಿದ್ದು, ಅಂಥಹ ಸುದ್ದಿ ಹಬ್ಬಿಸುವವರಿಗೆ ಅದು ದೈನಂದಿನ ಕೆಲಸ ಆಗಿರಬಹುದು. ಆದರೆ ನಮ್ಮ ಮನಸ್ಸಿನ ಮೇಲೆ ಭಾರೀ ಆಘಾತ ಬೀರಿದೆ. ಈ ಪ್ರಕರಣದಲ್ಲಿ ತಾವು ಭಾಗಿಯಾಗಿದ್ದರೆ, ಕಾನೂನು ರೀತಿಯ ಕ್ರಮ ಜರುಗಿಸಿ, ಇಲ್ಲವಾದರೆ ಸುಳ್ಳು ಸುದ್ದಿ ಹರಡಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ತಿಮ್ಮಕ್ಕ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪರಿಸರ ರಾಯಭಾರಿಯಾಗಿ ಸಾಲುಮರದ ತಿಮ್ಮಕ್ಕ ಅವರನ್ನು ನೇಮಿಸಿದ್ದ ರಾಜ್ಯ ಸರ್ಕಾರ ಅವರಿಗೆ ಸಂಪುಟದ ದರ್ಜೆಯ ಸ್ಥಾನಮಾನ ನೀಡಿದೆ. ಉದ್ಯಮಿ ಗೋವಿಂದ ಬಾಬು ಪೂಜಾರಿಯನ್ನು ವಂಚಿಸುವಾಗ ಅವರನ್ನು ನಂಬಿಸಲು ಚೈತ್ರಾ ಕುಂದಾಪುರ ಮತ್ತು ಆರೋಪಿಗಳು ಸಾಲುಮರದ ತಿಮ್ಮಕ್ಕ ಅವರಿಗೆ ಸರ್ಕಾರದಿಂದ ನೀಡಲಾಗಿರುವ ಕಾರನ್ನು ಬಳಕೆ ಮಾಡಿಕೊಂಡಿದ್ದಾರೆ. ಮತ್ತು ವಿಧಾನಸೌಧದಲ್ಲಿರುವ ಸಾಲುಮರದ ತಿಮ್ಮಕ್ಕ ಅವರ ಕಚೇರಿಯನ್ನು ಆರೋಪಿ ಗಗನ್ ನವೀಕರಣ ಮಾಡಿದ್ದ ಎಂಬ ಆರೋಪ ಕೇಳಿಬಂದಿತ್ತು.
ಇದನ್ನೂ ಓದಿ: ಚೈತ್ರಾ ಕುಂದಾಪುರ ವಂಚನೆ ಪ್ರಕರಣ: ಚಿಕ್ಕಮಗಳೂರಿಗೆ ಗಗನ್ ಕಡೂರು ಕರೆತಂದು ಸ್ಥಳ ಮಹಜರು ನಡೆಸಿದ ಸಿಸಿಬಿ ಪೊಲೀಸರು