ಬೆಂಗಳೂರು : ಕೃಷಿಕರು, ಕೃಷಿ ವಿದ್ಯಾರ್ಥಿಗಳು, ಅಧಿಕಾರಿಗಳು ಮತ್ತು ವಿಜ್ಞಾನಿಗಳು ಇನ್ನು ಮುಂದೆ ದೂರವಾಣಿ, ಮೊಬೈಲ್ ಕರೆಯನ್ನು ಸ್ವೀಕರಿಸಿದ ತಕ್ಷಣ ಬರುವ ಮೊದಲ ಪದ ಹಲೋ ಬದಲು ಜೈ ಕಿಸಾನ್ ಆಗಬೇಕು. ಸಾಮಾಜಿಕ ಆಂದೋಲನವಾಗಿ ಅನ್ನದಾತನ ಶಕ್ತಿ ಜಗತ್ತಿಗೆ ತಿಳಿಯಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅಭಿಪ್ರಾಯಪಟ್ಟರು.
ಜಿಕೆವಿಕೆಯಲ್ಲಿ ಮಾತನಾಡಿದ ಅವರು, ಕೃಷಿ ಇಲಾಖೆ ಮತ್ತು ಕೃಷಿ ವಿಶ್ವವಿದ್ಯಾನಿಲಯಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಅಧಿಕಾರಿಗಳು ಮತ್ತು ವಿಜ್ಞಾನಿಗಳು ಕೃಷಿಕರಿಗೆ ಹತ್ತಿರವಾಗಿ ನೂತನ ತಂತ್ರಜ್ಞಾನಗಳನ್ನು ರೈತರು ಅನುಸರಿಸಿ ಶ್ರಮ ಕಡಿತಗೊಳಿಸಿ ಹೆಚ್ಚಿನ ಇಳುವರಿ ಪಡೆಯಲು ಪ್ರೇರೇಪಿಸಬೇಕು.
ರೈತರು ಒಂದೇ ಬೆಳೆಯನ್ನು ಬೆಳೆಯುವ ಬದಲು ಬಹು ಬೆಳೆಗಳನ್ನು ಬೆಳೆದು ಲಾಭಗಳಿಸಲು ಮುಂದಾಗಬೇಕು. ರೈತರಿಗೆ ಗುರುತಿನ ಚೀಟಿ ನೀಡುವ ಮಹತ್ತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಗುರುತಿನ ಚೀಟಿ ಹೊಂದಿದ ರೈತ ನಾನು ಭಾರತದ ಸ್ವಾಭಿಮಾನಿ ರೈತ ಎಂದು ಹೆಮ್ಮೆಯಿಂದ ಎದೆಯೆತ್ತಿ ಹೇಳಿಕೊಳ್ಳಬಹುದು ಎಂದರು.
ಖಾಸಗಿ ಕಂಪನಿಯವರು ತಮ್ಮ ನೂತನ ತಳಿಗಳು ಮತ್ತು ತಂತ್ರಜ್ಞಾನಗಳಿಗೆ ವ್ಯಾಪಕ ಪ್ರಚಾರ ನೀಡುವಂತೆ ಕೃಷಿ ವಿಶ್ವವಿದ್ಯಾನಿಲಯದ ವಿಜ್ಞಾನಿಗಳೂ ಸಹ ವ್ಯಾಪಕ ಪ್ರಚಾರ ನೀಡಿ ತಂತ್ರಜ್ಞಾನಗಳು ಶೀಘ್ರವಾಗಿ ರೈತರ ಮನೆಬಾಗಿಲಿಗೆ ತಲುಪಿಸಲು ಶ್ರಮವಹಿಸಬೇಕು. ಯಾವುದೇ ಇಲಾಖೆಯಾದರೂ, ಪ್ರಪಂಚ ಯಾವುದೇ ರಂಗದಲ್ಲಾದರೂ ಅಭಿವೃದ್ಧಿಹೊಂದಿದರೂ ಸಹ ಜಗತ್ತಿಗೆ ಅನ್ನ ನೀಡುವ ರೈತನ ಮುಂದೆ ತಲೆಬಾಗಬೇಕು. ಅನ್ನವಿಲ್ಲದೆ ಬದುಕುವುದು ಅಸಾಧ್ಯ ಎಂದರು.