ಬೆಂಗಳೂರು: ರಾಜಧಾನಿಯಲ್ಲಿ 20 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಪ್ರಾರಂಭಿಸುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮಲ್ಲೇಶ್ವರಂ ಕ್ಷೇತ್ರ ವ್ಯಾಪ್ತಿಯಲ್ಲಿ ನಿರ್ಮಿಸಿರುವ ದೇಶದ ಪ್ರಪ್ರಥಮ ಸಮಗ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಹೈಟೆಕ್ ಡಯಾಗ್ನಾಸ್ಟಿಕ್ ಸೇವೆಗಳ ಎಕ್ಸ್‌ಪ್ರೆಸ್ ಕ್ಲಿನಿಕ್ ಮತ್ತು ಎಸ್ಕಲೇಟರ್ ಸಹಿತ ಸ್ಕೈವಾಕ್ ಸೌಲಭ್ಯಗಳಿಗೆ ಚಾಲನೆ ನೀಡಿ ಸಿಎಂ ಮಾತನಾಡಿದರು.
ಮಲ್ಲೇಶ್ವರಂನ ಈ ಮಾದರಿಯು ದೇಶ ಮತ್ತು ರಾಜ್ಯಕ್ಕೆ ಒಂದು ಮೇಲ್ಪಂಕ್ತಿ ಆಗಿದೆ. ಈ ವರ್ಷ ನಗರದಲ್ಲಿ 20 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಹೀಗೆಯೇ ನಿರ್ಮಿಸಲಾಗುವುದು. ಜೊತೆಗೆ, ಮುಂದಿನ ಮೂರು ತಿಂಗಳಲ್ಲಿ ನಗರದ 243 ವಾರ್ಡ್ಗಳಲ್ಲೂ ನಮ್ಮ ಕ್ಲಿನಿಕ್ಗಳನ್ನು ಆರಂಭಿಸಲಾಗುವುದು ಎಂದರು.
ಜಯದೇವ ಆಸ್ಪತ್ರೆಯ ನಾಲ್ಕು ಕೇಂದ್ರಗಳನ್ನು ಬೆಂಗಳೂರು ನಗರದಲ್ಲಿ ಸ್ಥಾಪಿಸಲು ಕ್ರಮ ವಹಿಸಲಾಗಿದೆ. ಇವುಗಳ ಪೈಕಿ 50 ಹಾಸಿಗೆಗಳ ಒಂದು ಕೇಂದ್ರವನ್ನು ಮಲ್ಲೇಶ್ವರದ ಕೆಸಿ ಜನರಲ್ ಆಸ್ಪತ್ರೆಯಲ್ಲಿ ನಿರ್ಮಿಸಲಾಗುತ್ತಿದೆ. ಸದ್ಯದಲ್ಲೇ ಅದನ್ನೂ ಉದ್ಘಾಟನೆ ಮಾಡಲಾಗುವುದು ಎಂದು ಹೇಳಿದರು.
ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಆರೋಗ್ಯ ಸೇವೆ ಒದಗಿಸಲು ಇದು ಸೂಕ್ತ ಮಾದರಿ ಆಗಿದೆ. ನಾವು ಮನಸ್ಸು ಮಾಡಿದರೆ ಸಮಸ್ಯೆಯ ಭಾಗವಾಗದೆ ಹೇಗೆ ಪರಿಹಾರದ ಭಾಗ ಆಗಬಹುದು ಎನ್ನುವುದನ್ನು ಸಚಿವ ಅಶ್ವತ್ಥನಾರಾಯಣ ಅವರು ತೋರಿಸಿ ಕೊಟ್ಟಿದ್ದಾರೆ. ಇದಕ್ಕೆ ಡಿಜಿಟಲ್ ಸ್ಪರ್ಶ ಕೂಡ ಸಿಕ್ಕಿರುವುದು ನಿಜಕ್ಕೂ ಸಂತಸದ ವಿಷಯ ಎಂದರು.
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಪಶ್ಚಿಮ ವಲಯದ ಆಯುಕ್ತ ದೀಪಕ್, ಆರೋಗ್ಯ ಆಯುಕ್ತ ತ್ರಿಲೋಕಚಂದ್ರ, ಸ್ಟಾರ್ಟ್ ಅಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ ಪ್ರಕಾಶ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ದೇಣಿಗೆ ನೀಡಿರುವ ಉದ್ಯಮಿಗಳನ್ನು ಸನ್ಮಾನಿಸಲಾಯಿತು.
ಇದನ್ನೂ ಓದಿ: ಕಲ್ಯಾಣ ಕರ್ನಾಟಕದ ನವ ನಗರವಾಗಿ ಕಲಬುರಗಿ ನಿರ್ಮಾಣ ಆಗಲಿದೆ: ಸಿ ಎಂ ಬೊಮ್ಮಾಯಿ